ADVERTISEMENT

ಗುರಿ ತಪ್ಪಿದ ಗುಂಡಿಗೆ ಬಲಿಯಾದರೇ ಮಾನೆ?

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST
ಗುರಿ ತಪ್ಪಿದ ಗುಂಡಿಗೆ ಬಲಿಯಾದರೇ ಮಾನೆ?
ಗುರಿ ತಪ್ಪಿದ ಗುಂಡಿಗೆ ಬಲಿಯಾದರೇ ಮಾನೆ?   

ಬೆಳ್ತಂಗಡಿ/ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾವೂರದ ಮಂಜಲ ಎಂಬಲ್ಲಿ ದಟ್ಟಾರಣ್ಯದಲ್ಲಿ ಶನಿವಾರ ತಡರಾತ್ರಿ ಗುಂಡಿನ ಚಕಮಕಿಯಲ್ಲಿ ಎಎನ್‌ಎಫ್ ಸಿಬ್ಬಂದಿ ಮಹಾದೇವ ಎಸ್.ಮಾನೆ, ಸಹೋದ್ಯೋಗಿಗಳ ಬಂದೂಕಿನಿಂದ ಗುರಿ ತಪ್ಪಿ ಹಾರಿದ ಗುಂಡಿಗೇ ಬಲಿಯಾದರೇ? ಎಂಬ ಶಂಕೆ ಬಲವಾಗಿದ್ದು, ಈ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೋಮವಾರ ತನಿಖೆ ಚುರುಕುಗೊಳಿಸಿದ್ದಾರೆ.

ಎಎನ್‌ಎಫ್ ತಂಡ ಮರಗಳ ನಡುವೆ ಅಡಗಿಕೊಂಡು ನಕ್ಸಲರತ್ತ ಗುಂಡು ಹಾರಿಸಿದಾಗ ಗುಂಡು ಗುರಿ ತಪ್ಪಿ ಮಾನೆ ಅವರ ಬೆನ್ನಿಗೆ ಹೊಕ್ಕಿರಬಹುದು ಎಂಬ ಅನುಮಾನ ಘಟನೆ ನಡೆದ ಸ್ಥಳದಲ್ಲಿ ಭಾನುವಾರವೇ ವ್ಯಕ್ತವಾಗಿತ್ತು. ನಕ್ಸಲರು ಮತ್ತು ಎಎನ್‌ಎಫ್ ತಂಡ ನಡುವಿನ ಗುಂಡಿನ ಚಕಮಕಿ ಸಂದರ್ಭ ಮಾನೆ ಅವರು ಅಡಗಿದ್ದ ಸ್ಥಳಕ್ಕಿಂತ ಹಿಂದೆ ಇದ್ದ ಸಹೋದ್ಯೋಗಿಗಳು ಹಾರಿಸಿದ ಗುಂಡು ದೊಡ್ಡ ಮರ ಅಥವಾ ದೊಡ್ಡ ಕಲ್ಲಿನಂತಹ ವಸ್ತುವಿಗೆ ತಗುಲಿ ವಾಪಸ್ (ರಿಬೌಂಡ್) ಬಂದು ಮಾನೆ ಅವರ ಬೆನ್ನಿಗೆ ಬಡಿದಿರುವ ಸಾಧ್ಯತೆ ಇದೆ. ಈ ದಿಕ್ಕಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು  ಪೊಲೀಸ್ ಮೂಲಗಳು ತಿಳಿಸಿವೆ.

`ಮರಣೋತ್ತರ ಪರೀಕ್ಷೆಯನ್ನು ಭಾನುವಾರ ಮಧ್ಯಾಹ್ನ ನಡೆಸಿದಾಗ ಮಾನೆ ಅವರ ಮೃತದೇಹದಲ್ಲಿದ್ದ ಗುಂಡು ಮೊದಲು ದೊರಕಿರಲಿಲ್ಲ. ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಶವದಲ್ಲಿಯೇ ಉಳಿದುಕೊಂಡಿದ್ದ ಗುಂಡು ದೊರಕಿದೆ. ಗುಂಡು ಬೆನ್ನಿನ ಭಾಗದಲ್ಲಿ ಎಲುಬಿಗೆ ಬಡಿದು ಮೂರು-ನಾಲ್ಕು ಚೂರುಗಳಾಗಿದೆ. ಮರಣೋತ್ತರ ಪರೀಕ್ಷೆ ನಂತರ ಗುಂಡಿನ ತುಣುಕುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರಿಗೆ ರವಾನಿಸಲಾಗಿದೆ~ ಎಂದು ಪೊಲೀಸ್ ಮಹಾ ನಿರ್ದೇಶಕ ನೀಲಂ ಅಚ್ಯುತ ರಾವ್ ಸೋಮವಾರ ಬೆಳ್ತಂಗಡಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

`ಈ ಪ್ರಕರಣದ ತನಿಖೆ ಸಮಗ್ರವಾಗಿ ಹಾಗೂ ವೈಜ್ಞಾನಿಕ ರೀತಿಯಲ್ಲಿಯೇ ನಡೆಯಲಿದೆ. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಒಬ್ಬರು ತಜ್ಞರು, ಮಣಿಪಾಲದ ಮೂವರು ತಜ್ಞರ ನೆರವಿನಿಂದ ಪರೀಕ್ಷೆ ನಡೆಸಲಾಗುತ್ತಿದೆ. ಆಂತರಿಕ ಭದ್ರತಾ ವಿಭಾಗದ ಅಡಿಯಲ್ಲಿ ಒಬ್ಬರು ಪೊಲೀಸ್ ವರಿಷ್ಠಾಧಿಕಾರಿ, ನಾಲ್ವರು ಡಿವೈಎಸ್‌ಪಿ ಹಾಗೂ ಕೆಲವು ಇನ್‌ಸ್ಟೆಕ್ಟರ್‌ಗಳು ಪ್ರಕರಣದ ಸಮಗ್ರ ತನಿಖೆ ನಡೆಸುವರು~ ಎಂದು ಆಂತರಿಕ ಭದ್ರತೆ ಹಾಗೂ ಎಎನ್‌ಎಫ್ ಐಜಿಪಿ ಭಾಸ್ಕರ ರಾವ್ ತಿಳಿಸಿದರು.

`ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆರಂಭದಲ್ಲಿ ಪರೀಕ್ಷೆ ನಡೆಸುವಾಗ ಗುಂಡು ಸಿಕ್ಕಿರಲಿಲ್ಲ. ಮತ್ತೆ ಸ್ಕ್ಯಾನಿಂಗ್ ಹಾಗೂ ಎಕ್ಸ್‌ರೇ ನಡೆಸಿದಾಗ ಬುಲೆಟ್ ಮೂರು- ನಾಲ್ಕು ಚೂರುಗಳಾಗಿರುವುದ ಕಂಡಿತು. ಎರಡನೇ ಬಾರಿ ಮರಣೋತ್ತರ ಪರೀಕ್ಷೆಯನ್ನೇನೂ ನಡೆಸಿಲ್ಲ~ ಎಂದು ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್ ಪ್ರಜಾವಾಣಿಗೆ ಸೋಮವಾರ ಸಂಜೆ ಸ್ಪಷ್ಟಪಡಿಸಿದರು.

`ಗುಂಡು ಗುರಿ ತಪ್ಪಿರುವ ಶಂಕೆಯನ್ನು ಆಧರಿಸಿಯೂ ತನಿಖೆ ನಡೆಸಲಾಗುತ್ತಿದೆ. ತನಿಖೆ ಈಗಿನ್ನೂ ಆರಂಭಿಕ ಹಂತದಲ್ಲಿದ್ದು, ಹೆಚ್ಚಿನ ಮಾಹಿತಿಗಳೇನೂ ಲಭ್ಯವಾಗಿಲ್ಲ. ಪ್ರಕರಣದ ಸಮಗ್ರ ತನಿಖೆ ನಡೆಯಲಿದೆ~ ಎಂದು ಅವರು ತಿಳಿಸಿದರು.

ಮೃತದೇಹದಲ್ಲಿ ಗುಂಡು ಪತ್ತೆಯಾಗಿದೆ. ಅದು ಯಾವ ಬಗೆಯ ಬಂದೂಕಿನಿಂದ ಹಾರಿದ್ದು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಏನಿದ್ದರೂ ಹೆಚ್ಚಿನ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್ ಸುದ್ದಿಗಾರರಿಗೆ ತಿಳಿಸಿದರು.

`ಎಕ್ಸ್‌ರೇ ನಡೆಸಿದಾಗ ಮಾನೆ ದೇಹದ ಮೂಳೆಯ ಮರೆಯಲ್ಲಿ ಒಂದು ಗುಂಡು ಕಂಡಿತು. ತಾಮ್ರದಂತಹ ಬಣ್ಣ ಇತ್ತು~ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.  
ಮೃತದೇಹದ ಬೆನ್ನಿನಲ್ಲಿರುವ ಗಾಯದ ಆಳ-ಅಗಲ ಗಮನಿಸಿದರೆ ಹೆಚ್ಚು ದೂರದಿಂದೇನೂ ಗುಂಡು ಹಾರಿಸಿದಂತೆ ಗೋಚರಿಸುತ್ತಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ ಮಾನೆ ಅವರನ್ನು ಬಲಿತೆಗೆದುಕೊಂಡ ಗುಂಡು ಎ.ಕೆ. 47 ಬಂದೂಕಿನಿಂದಲೇ ಹಾರಿಸಿದ್ದಾಗಿದೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ನೀಲಂ ಅಚ್ಯುತ ರಾವ್, ಆಂತರಿಕ ಭದ್ರತಾ ದಳದ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ, ಎಸ್‌ಪಿ ಲಾಬೂರಾಮ್ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಬೆಳ್ತಂಗಡಿಯಲ್ಲಿಯೇ ಸದ್ಯ ಮೊಕ್ಕಾಂ ಹೂಡಿದ್ದಾರೆ. ದುರ್ಘಟನೆ ನಡೆದ ನಾವೂರದ ಮಂಜಲ ಪ್ರದೇಶಕ್ಕೆ ಡಿಜಿಪಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶನಿವಾರ ರಾತ್ರಿ ಮಂಜಲದಲ್ಲಿ ಕಾರ್ಯಾಚರಣೆ ನಡೆಸಿದ ತಂಡವನ್ನು ಘಟನಾ ಸ್ಥಳಕ್ಕೆ ಮತ್ತೆ ಕರೆದೊಯ್ದು ಪರಿಶೀಲಿಸಲಾಗಿದೆ. ಸ್ಥಳವನ್ನು ಅಡಿಗಡಿಗೂ ಶೋಧಿಸಿ ಮಾಹಿತಿ ಕಲೆ ಹಾಕಲಾಗಿದೆ.

ಸಿ.ಎಂ ಬೆಳ್ತಂಗಡಿಗೆ: ಸಿ,ಎಂ ಡಿ.ವಿ ಸದಾನಂದ ಗೌಡ ಮಂಗಳವಾರ ಬೆಳ್ತಂಗಡಿಗೆ ಬಂದು ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಮುಂದುವರಿದ ಶೋಧ: ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಸ್ಥಳೀಯ ಪೊಲೀಸರ ನೆರವಿನಿಂದ ಸೋಮವಾರವೂ ನಕ್ಸಲರಿಗಾಗಿ ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿದರು. ನೂರಕ್ಕೂ ಹೆಚ್ಚು ಪೊಲೀಸರು ಆರು ತಂಡಗಳಾಗಿ ನಡ, ನಾವೂರು, ಮೇಲಂತಬೆಟ್ಟು, ಪೆರ್ಮಾಣು ಮತ್ತಿತರೆಡೆ ಶೋಧ ನಡೆಸುತ್ತಿದ್ದಾರೆ. ನಕ್ಸಲರ ಬಗ್ಗೆ ಸೋಮವಾರ ರಾತ್ರಿವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನೊಂದೆಡೆ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಹೆಬ್ರಿ ಸುತ್ತಲ ಅರಣ್ಯ ಪ್ರದೇಶದಲ್ಲಿಯೂ ನಕಲ್ಸರಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ.

ಸರ್ಕಾರಿ ಗೌರವದೊಡನೆ ಮಾನೆ ಅಂತ್ಯಕ್ರಿಯೆ
ಚಡಚಣ (ವಿಜಾಪುರ ಜಿಲ್ಲೆ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲರ ಗುಂಡೇಟಿಗೆ ಬಲಿಯಾದ ನಕ್ಸಲ್ ನಿಗ್ರಹ ಪಡೆಯ ಪೇದೆ ಮಹಾದೇವ ಮಾನೆ ಅಂತ್ಯಸಂಸ್ಕಾವು ಅವರ ಹುಟ್ಟೂರಿನಲ್ಲಿ,  ಇಲ್ಲಿಗೆ ಸಮೀಪದ ಮಹಾರಾಷ್ಟ್ರದ ಬಾಲಗಾಂವ ಗ್ರಾಮದಲ್ಲಿ ಸೋಮವಾರ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು.

ಮಾನೆ ಪಾರ್ಥಿವ ಶರೀರ ಮಧ್ಯಾಹ್ನ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಬಂಧು ಬಾಂಧವರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.

ಕೆಎಸ್‌ಆರ್‌ಪಿ ಐಜಿಪಿ ಕೆ.ಎಲ್.ಸುಧೀರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಡಿ.ಸಿ.ರಾಜಪ್ಪ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಫ್.ಎ. ಟ್ರಾಸ್ಗರ್, ಡಿವೈಎಸ್ಪಿ ಎಂ.ಮುತ್ತುರಾಜ, ಸಿಪಿಐ ಎಂ.ಬಿ. ಅಸೂಡೆ, ಪಿಎಸ್‌ಐ ರಾಜಶೇಖರ ಬಡದೇಸಾರ, ಎನ್.ಎನ್. ಅಂಬಿಗೇರ, ಮಹಾರಾಷ್ಟ್ರದ ಸಿಪಿಐ ಶಶಿಕಾಂತ ಗೋಡ್ಸೆ ಅಂತಿಮ ಗೌರವ ಸಲ್ಲಿಸಿದರು.

ಪೊಲೀಸ್ ಪರೇಡ್ ನಂತರ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ  ಮಾನೆ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ನಂತರ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿತು.

ಅಸಮಾಧಾನ: ಅಂತ್ಯಸಂಸ್ಕಾರದಲ್ಲಿ ವಿಜಾಪುರ ಜಿಲ್ಲೆಯ ಹಾಗೂ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಯಾವೊಬ್ಬ ಜನ ಪ್ರತಿನಿಧಿ ಪಾಲ್ಗೊಳ್ಳದೆ ಇದ್ದುದು ಜನರಲ್ಲಿ  ಬೇಸರ  ಉಂಟುಮಾಡಿತು.

ಮಹಾರಾಷ್ಟ್ರದ ಬಾಲಗಾಂವ ಗ್ರಾಮದ ನಿವಾಸಿಯಾಗಿದ್ದ ಮಹಾದೇವ ಮಾನೆ ಅವರ ನಿಧನದ ಅಧಿಕೃತ ಮಾಹಿತಿಯನ್ನು ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ನೀಡದಿದ್ದುದರಿಂದ ಮಹಾರಾಷ್ಟ್ರ ಸರ್ಕಾರದ ಯಾವೊಬ್ಬ ಅಧಿಕಾರಿಯೂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಗುಂಡು ನಿರೋಧಕ ಜಾಕೆಟ್?
ನಕ್ಸಲ್ ನಿಗ್ರಹ ದಳದ ಎಲ್ಲ ಸಿಬ್ಬಂದಿಯೂ ಕಾರ್ಯಾಚರಣೆ ವೇಳೆ ತಪ್ಪದೇ ಗುಂಡು ನಿರೋಧಕ ಜಾಕೆಟ್ ಧರಿಸುತ್ತಾರೆ. ಇಲಾಖೆಯಿಂದ ಜಾಕೆಟ್‌ಗಳನ್ನೂ ನೀಡಲಾಗಿದೆ. ಆದರೆ ಮಾನೆ ಅವರ ದೇಹದಲ್ಲಿ ಗುಂಡು ನಿರೋಧಕ ಜಾಕೆಟ್ ಇರಲಿಲ್ಲ. ಹಾಗಾಗಿಯೇ ಗುಂಡು ಸರಾಗವಾಗಿ ಅವರ ಬೆನ್ನಿನಲ್ಲಿ ತೂರಿ ಹೋಗಿದೆ ಎಂದ ಪೊಲೀಸ್ ಮೂಲಗಳು ತಿಳಿಸಿವೆ.

ನಕ್ಸಲರೇ?: ಎಎನ್‌ಎಫ್ ಸಿಬ್ಬಂದಿಗೆ ಶನಿವಾರ ರಾತ್ರಿ ಮುಖಾಮುಖಿಯಾದವರು ನಕ್ಸಲರೇ? ಎಂಬ ವಿಚಾರವಾಗಿಯೂ ಶಂಕೆ ವ್ಯಕ್ತವಾಗಿದೆ. `ಈವರೆಗೂ ಸವಣಾಲು, ನಾವೂರ ಪರಿಸರದಲ್ಲಿ ನಕ್ಸಲರು ಕಾಣಿಸಿಕೊಂಡೇ ಇರಲಿಲ್ಲ. ಶನಿವಾರ ಕಂಡವರು ಕಾಡುಗಳ್ಳರು ಇದ್ದರೂ ಇರಬಹುದು~ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.