ADVERTISEMENT

ಗುರುವಂದನೆಗೆ ಭರದ ಸಿದ್ಧತೆ: ಸಿದ್ದಗಂಗಾ ಮಠಕ್ಕೆ ನಾಳೆ ಸೋನಿಯಾ ಗಾಂಧಿ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ತುಮಕೂರು: ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಅವರ 105ನೇ ಜನ್ಮ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ ಮಠದ ಆವರಣದಲ್ಲಿ ಭರದ ಸಿದ್ಧತೆ ಸಾಗಿದೆ.ಏ. 28ರಂದು ಬೆಳಿಗ್ಗೆ 11 ಗಂಟೆಗೆ ಸಮಾರಂಭ ಆರಂಭಗೊಳ್ಳಲಿದ್ದು, ಎಐಸಿಸಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಇಲ್ಲಿಯವರೆಗೂ ಸ್ವಾಮೀಜಿ ಹುಟ್ಟುಹಬ್ಬ, ಗುರುವಂದನೆ ಕಾರ್ಯಕ್ರಮಗಳಿಗೆ ಪ್ರಮುಖ ರಾಜಕಾರಣಿಗಳು, ಸಚಿವರನ್ನು ಆಹ್ವಾನಿಸುವ ಸಂಪ್ರದಾಯ ಇತ್ತು. ಆದರೆ, ಈ ವರ್ಷ ರಾಜಕಾರಣಿಗಳ ಒಡ್ಡೋಲಗಕ್ಕೆ ಇತಿಶ್ರೀ ಹಾಕಿ ಹೊಸ ಸಂಪ್ರದಾಯ ಆರಂಭಿಸಲಾಗಿದೆ.

`ವೇದಿಕೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಬಿಟ್ಟರೆ ಬೇರೆ ರಾಜಕಾರಣಿಗಳಿಗೆ ಅವಕಾಶ ಇಲ್ಲ~ ಎಂದು ಮಠದ ಆವರಣದಲ್ಲಿ ನಡೆಯುತ್ತಿರುವ ಸಿದ್ಧತೆ ವೀಕ್ಷಿಸಲು ಗುರುವಾರ ತೆರಳಿದ್ದ ಪತ್ರಕರ್ತರಿಗೆ ಸಿದ್ಧತೆಯ ನೇತೃತ್ವ ವಹಿಸಿರುವ ಡಾ.ಜಯಣ್ಣ ತಿಳಿಸಿದರು.

ಸಮಾರಂಭಕ್ಕೆ ಸುಮಾರು 1 ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ. ಕುಡಿಯುವ ನೀರು, ತಿಂಡಿ, ಊಟಕ್ಕೆ ಬೇಕಾದ ಸಿದ್ಧತೆ ಗುರುವಾರದಿಂದಲೇ ಆರಂಭವಾಗಿದೆ. ರಾಶಿರಾಶಿ ಬೂಂದಿ ಈಗಾಗಲೇ ತಯಾರಿಸಲಾಗಿದೆ.
45 ಸಾವಿರ ಜನರು ಕುಳಿತು ಸಮಾರಂಭ ವೀಕ್ಷಿಸಲು ಅನುಕೂಲವಾಗುವಂತೆ ಬೃಹತ್ ಪೆಂಡಾಲ್ ನಿರ್ಮಿಸಲಾಗುತ್ತಿದೆ. 28 ಅಡಿ ಉದ್ದ, 40 ಅಡಿ ಅಗಲದ ವೇದಿಕೆ ನಿರ್ಮಿಸಲಾಗಿದೆ.

ವೇದಿಕೆ ಹಾಗೂ ಶಾಮಿಯಾನದ ಆಕಾರವನ್ನು ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಮಾರ್ಗದರ್ಶನದಂತೆ ಮಾಡಲಾಗಿದೆ. ಸ್ಥಳದಲ್ಲಿ ಅತ್ಯಂತ ಬಿಗಿ ಭದ್ರತೆಯ ವಾತಾವರಣ ಇದೆ.  ಪ್ರತಿ ಚಲನವಲನವನ್ನು `ಎಸ್‌ಪಿಜಿ~ ತಂಡ ಗಮನಿಸುತ್ತಿದೆ.

ಸೋನಿಯಾಗಾಂಧಿ ಅವರ ಹೆಲಿಕಾಪ್ಟರ್‌ಗೆ ನಗರದ ಸಿದ್ದಗಂಗಾ ತಾಂತ್ರಿಕ ಕಾಲೇಜು ಆಟದ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಲಿಕಾಪ್ಟರ್‌ನಿಂದ ಇಳಿದ ಬಳಿಕ ಅಲ್ಲಿಯೇ ಇರುವ ಕಾಲೇಜಿನ ಕೆನಡಿ ಅತಿಥಿ ಗೃಹದಲ್ಲಿ 10 ನಿಮಿಷ ತಂಗುವ ಸೋನಿಯಾಗಾಂಧಿ ನಂತರ ನೇರವಾಗಿ ಮಠಕ್ಕೆ ಆಗಮಿಸುವರು.

ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಕೊಠಡಿಯಲ್ಲಿ ಐದು ನಿಮಿಷ ಮಾತುಕತೆ ನಡೆಸಿದ ನಂತರ ಸ್ವಾಮೀಜಿ ಅವರ ಜತೆ ಸೇರಿ ವೇದಿಕೆಗೆ ಆಗಮಿಸುವರು. ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಗುತ್ತದೆ.

ವೇದಿಕೆಯಲ್ಲಿ ಡಾ.ಶಿವಕುಮಾರ ಸ್ವಾಮೀಜಿ, ಸೋನಿಯಾ ಗಾಂಧಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿರುವರು. ಒಂದು ಗಂಟೆ ಅವಧಿಯ ಈ ಕಾರ್ಯಕ್ರಮವನ್ನು ಸೋನಿಯಾಗಾಂಧಿ ಉದ್ಘಾಟಿಸಿ ಭಾಷಣ ಮಾಡುವರು.

`ಸಮಾರಂಭಕ್ಕೆ ಪಕ್ಷಭೇದ ಮರೆತು ಎಲ್ಲ ಪಕ್ಷದವರಿಗೂ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಸಚಿವರಿಗೂ ಆಹ್ವಾನ ಪತ್ರಿಕೆ ಕೊಡಲಾಗಿದೆ. ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಎಂ.ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಆಗಮಿಸಲಿದ್ದಾರೆ.

ಬರ ಪರಿಶೀಲನೆ

ತುಮಕೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಅವರು ಏ. 28ರಂದು ಬೆಳಿಗ್ಗೆ 9 ಗಂಟೆಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಸಮೀಪದ ನಾಗಸಮುದ್ರ ಗ್ರಾಮಕ್ಕೆ ಭೇಟಿ ನೀಡಿ ಬರ ಪರಿಶೀಲನೆ ನಡೆಸುವರು. ಬಳಿಕ ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ಆಗಮಿಸುವರು.

ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಗುರುವಂದನಾ ಸಮಾರಂಭದ ಬಳಿಕ ಮಧ್ಯಾಹ್ನ 12 ಗಂಟೆಗೆ ನಗರದ ಸಿದ್ದಗಂಗಾ ತಾಂತ್ರಿಕ ಕಾಲೇಜು ಸಭಾಂಗಣದಲ್ಲಿ ಕೆಪಿಸಿಸಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವರು. ಈ ಸಭೆಯಲ್ಲಿ ಸೋನಿಯಾ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ನಾಯಕ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ವೇದಿಕೆ ಹಂಚಿಕೊಳ್ಳಲಿದ್ದಾರೆ.

ರಾಜ್ಯದಲ್ಲಿ ತಲೆದೋರಿರುವ ಬರದ ಬವಣೆಯನ್ನು ಸಿದ್ದರಾಮಯ್ಯ ಸಭೆಯಲ್ಲಿ ವಿವರಿಸಲಿದ್ದಾರೆ. ಪರಮೇಶ್ವರ್, ಸಿದ್ದರಾಮಯ್ಯ, ಮೋಟಮ್ಮ ನೇತೃತ್ವದ ಮೂರು ತಂಡಗಳು ರಾಜ್ಯದೆಲ್ಲೆಡೆ ಸುತ್ತಾಡಿ ಸಿದ್ಧಪಡಿಸಿರುವ ಬರ ಕುರಿತ ವರದಿಯನ್ನು ಸೋನಿಯಾಗಾಂಧಿ ಅವರಿಗೆ ಸಲ್ಲಿಸಿ ರಾಜ್ಯಕ್ಕೆ ಹೆಚ್ಚಿನ ನೆರವು ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಷಫೀ ಅಹಮ್ಮದ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೋನಿಯಾ ಗಾಂಧಿ ಅವರು ಮೂರು ವರ್ಷಗಳ ಬಳಿಕ  ಕೆಪಿಸಿಸಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.  ಪಕ್ಷದ ಸಂಘಟನೆ ಮತ್ತಿತರ ವಿಚಾರಗಳ ಕುರಿತು ಸೋನಿಯಾಗಾಂಧಿ ಅರ್ಧ ಗಂಟೆ ಕಾಲ ಮಾತನಾಡುವರು. ಮಧ್ಯಾಹ್ನ 1 ಗಂಟೆಗೆ ಸಭೆ ಮುಗಿಯಲಿದೆ. ನಂತರ ಬೆಂಗಳೂರಿಗೆ ತೆರಳುವರು ಎಂದರು.ಸಭೆಯಲ್ಲಿ ಎಐಸಿಸಿ, ಕೆಪಿಸಿಸಿ, ಡಿಸಿಸಿ, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಸುಮಾರು 1500 ಮಂದಿ ಭಾಗವಹಿಸುವರು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.