ADVERTISEMENT

ಗುಲಾಮಗಿರಿಗೆ ದೂಡುವ ಬಜೆಟ್‌

ಕೆ.ಎಸ್‌.ಪುಟ್ಟಣ್ಣಯ್ಯ (ನಿರೂಪಣೆ: ಬಿ.ಜೆ.ಧನ್ಯಪ್ರಸಾದ್)
Published 15 ಫೆಬ್ರುವರಿ 2014, 19:30 IST
Last Updated 15 ಫೆಬ್ರುವರಿ 2014, 19:30 IST
ಗುಲಾಮಗಿರಿಗೆ ದೂಡುವ ಬಜೆಟ್‌
ಗುಲಾಮಗಿರಿಗೆ ದೂಡುವ ಬಜೆಟ್‌   

ಮುಖ್ಯಮಂತ್ರಿ, ಹಣಕಾಸು ಸಚಿವ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ‘ತ್ರಿಶಂಕು’ ಬಜೆಟ್‌ ಆಗಿದೆ. ಮೇಲಕ್ಕೆ ಏರಿಲ್ಲ. ಕೆಳಕ್ಕೆ ಇಳಿದಿಲ್ಲ. ಸಮಗ್ರ ಕರ್ನಾಟಕದ ಚಿಂತನೆಯ ಕೊರತೆ ಕಾಣುತ್ತಿದೆ. ಎಲ್ಲರನ್ನೂ ಸಮಾಧಾನ ಪಡಿಸುವುದಕ್ಕಾಗಿ ಹಣ ಹಂಚಿಕೆ ಮಾಡಿಕೊಂಡು ಹೋಗ­ಲಾಗಿದೆ. ಇದೊಂದು ಮಾಮೂಲಿ ಬಜೆಟ್‌್‌ ಆಗಿದ್ದು ರೈತರ ನಿರೀಕ್ಷೆಗಳಿಗೆ ಸ್ಪಂದಿಸಿಲ್ಲ.

ಬಜೆಟ್‌ ಗಾತ್ರವನ್ನು ಹೆಚ್ಚಿಸುವತ್ತ ಗಮನ ಹರಿಸಲಾಗಿದೆಯೇ ಹೊರತು, ಕಳೆದ ಸಾಲಿನಲ್ಲಿ ಸಂಗ್ರಹವಾದ ಆದಾಯ ಎಷ್ಟು? ಯಾವ, ಯಾವ ಇಲಾಖೆಗಳು ಎಷ್ಟು ಖರ್ಚು ಮಾಡಿವೆ ಎನ್ನುವ ವಿವರಗಳಿಲ್ಲ. ಇಂತಹ ಪ್ರಮುಖ ಅಂಶವನ್ನು ಮರೆಮಾಚಲಾಗಿದೆ. ಇದು ಜನತೆಗೆ ಮಾಡುವ ಮೋಸವಾಗಿದೆ.

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಶೋಷಿತರ ಬಗೆಗೆ ಗಂಭೀರ ಚಿಂತನೆ­ಯನ್ನು ನಡೆಸಿರುವುದು ಸ್ವಾಗತಾರ್ಹ ಅಂಶವಾಗಿದೆ. ಬರಗಾಲ, ಕೃಷಿ, ಸಾಲ, ಸಮಗ್ರ ಗ್ರಾಮೀಣ ಅಭಿವೃದ್ಧಿ, ಮಾರುಕಟ್ಟೆ ನೀತಿ ನಿರೂಪಣೆಯ ಬಗೆಗೆ ಹೊಸ ಆಲೋಚನೆಗಳು ಬಜೆಟ್‌ನಲ್ಲಿ ಕಾಣುತ್ತಿಲ್ಲ. ನೀರಾವರಿ ಯೋಜನೆಗಳಿಗಾಗಿ 11 ಸಾವಿರಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ.

ಆದರೆ, ಸರಿಯಾಗಿ ಜಾರಿಯಾಗುತ್ತವೆಯೇ ಎಂದರೆ ಇಲ್ಲ. ಕೃಷ್ಣಾ ನದಿ ನೀರನ್ನು ಇಂದಿಗೂ ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಸಕ್ಕರೆ ಅಭಿವೃದ್ಧಿ ನಿಧಿ, ಆವರ್ತ ನಿಧಿ, ಗ್ರಾಮ ಸರ್ಕಾರ ಸ್ಥಾಪನೆ ಹಿನ್ನೆಲೆಯಲ್ಲಿ ಅಧಿಕಾರಿ ವಿಕೇಂದ್ರೀಕರಣ, ರೈತರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯ ಬಗೆಗೆ ಬಜೆಟ್‌ ಮುನ್ನ ಮುಖ್ಯಮಂತ್ರಿ­ಗಳೊಂದಿಗೆ ಚರ್ಚೆ ನಡೆಸಲಾಗಿತ್ತು. ಆದರೆ, ಅವುಗಳಿಗೆ ಸಂಪನ್ಮೂಲವನ್ನು ಒದಗಿಸಿಲ್ಲ.

ವರ್ಷದಿಂದ ವರ್ಷಕ್ಕೆ ಬಜೆಟ್‌ಗಳು ಬೇಡುವ ಗುಲಾಮಗಿರಿಯತ್ತ ಹೋಗುತ್ತಿವೆ. ಸ್ವಾವಲಂಬಿಯಾಗಿ ಸ್ವಯಂ ಕಾಲ ಮೇಲೆ ನಿಲ್ಲುವ ಆರ್ಥಿಕ ನೀತಿ ನಿರೂಪಣೆಯ ಚಿಂತನೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ದೇಶ ಅಪಾಯಕಾರಿ ಸ್ಥಿತಿಗೆ ಹೋಗಲಿದೆ.

ಎಲ್ಲ ಜಿಲ್ಲೆಗಳಿಗೆ ಲಭಿಸುವ ಹಲವಾರು ಯೋಜನೆಗಳೂ ನಮ್ಮ ಜಿಲ್ಲೆಗೂ ಲಭಿಸಿವೆ. ವಿಶೇಷವಾಗಿ ಯಾವುದೇ ಅನುದಾನ ಲಭ್ಯವಾಗಿಲ್ಲ. ಮೈಷುಗರ್‌್ ಸಕ್ಕರೆ ಕಾರ್ಖಾನೆಗೆ 75 ಕೋಟಿ ಅನುದಾನ ನೀಡಲಾಗಿದೆ. ಅದನ್ನು ಬೆಂಗಳೂರಿನಲ್ಲಿರುವ ಆಸ್ತಿಯ ಅಭಿವೃದ್ಧಿಗೆ ನೀಡಿದ್ದು ಸರಿಯಲ್ಲ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಮೈಷುಗರ್‌ ಪುನಃಶ್ಚೇತನಕ್ಕೆ 200 ಕೋಟಿ ನೀಡಲಿದ್ದಾರೆ ಎಂಬ ಭರವಸೆ ಇತ್ತು. ಆದರೆ, ಭರವಸೆ ಸುಳ್ಳಾಗಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.