ADVERTISEMENT

ಗೂಡು ನೋಡು ಬಾರೆ ರಾಜಕುಮಾರಿ...

ಡಿ.ಜಿ.ಮಲ್ಲಿಕಾರ್ಜುನ
Published 9 ಡಿಸೆಂಬರ್ 2012, 12:26 IST
Last Updated 9 ಡಿಸೆಂಬರ್ 2012, 12:26 IST

ಕೆರೆಯಲ್ಲಿ ಬಿದ್ದ ಕಲ್ಲು ಬಹು ದೂರದವರೆಗೆ ಅಲೆಗಳನ್ನು ಎಬ್ಬಿಸಿದಂತೆ, ಮಾನವನ ಆವಾಸ ಸ್ಥಾನ ಹಿಗ್ಗಿದಂತೆಲ್ಲ ಪರಿಸರದಲ್ಲಿ ಹಲವಾರು ಪಲ್ಲಟಗಳು ಸಂಭವಿಸುತ್ತವೆ.

ಕೆಲವೆಡೆ ಜೀವ ವೈವಿಧ್ಯ ಮತ್ತು ಸಸ್ಯಗಳ ವಿನಾಶ ಸಂಭವಿಸಿದರೆ, ಡಾರ್ವಿನ್‌ನ ವಿಕಾಸ ವಾದದಂತೆ ಬದುಕಲು ನಾನಾ ಹೋರಾಟಗಳು ನಡೆಯುತ್ತವೆ. ಜೀವಿಗಳು ತಮ್ಮ ಸಂತತಿಯ ಉಳಿವಿಗಾಗಿ ಹೊಸ ತಂತ್ರಗಳನ್ನು ರೂಪಿಸುತ್ತವೆ.

ತನ್ನ ಸಂತತಿ ಉಳಿಸಿಕೊಳ್ಳಲು ಮತ್ತು ಮುಂದುವರಿಸಲು ಗುಬ್ಬಿಗಿಂತಲೂ ಪುಟ್ಟದಾದ ಮುನಿಯಾ ಹಕ್ಕಿಗಳು ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನಲ್ಲಿ ಒಂದೆಡೆ ಗೀಜಗ ಹಕ್ಕಿಗಳ ಗೂಡನ್ನೇ ಆಕ್ರಮಿಸಿಕೊಂಡಿದ್ದರೆ, ಇನ್ನೊಂದೆಡೆ ಟ್ರಾನ್ಸ್‌ಫಾರ್ಮರನ್ನೇ ತನ್ನ ಮನೆಯನ್ನಾಗಿಸಿಕೊಂಡಿವೆ.

ಗೀಜಗ ಹಕ್ಕಿಗಳ ವೈಶಿಷ್ಟ್ಯವೇನೆಂದರೆ, ಗಂಡು ಹಕ್ಕಿ ಗೂಡನ್ನು ಅರ್ಧ ನೇಯ್ದು ಹೆಣ್ಣಿಗೆ ತೋರಿಸುತ್ತದೆ. ಅದು ಹೆಣ್ಣಿಗೆ ಇಷ್ಟವಾದರೆ ಅವೆರಡೂ ಜೋಡಿಯಾಗುತ್ತವೆ, ಗೂಡನ್ನು ಪೂರ್ತಿ ಮಾಡಿ ಸಂಸಾರ ಸಾಗಿಸುತ್ತವೆ. ಅಕಸ್ಮಾತ್ ಇಷ್ಟವಾಗಲಿಲ್ಲವೊ ಗಂಡು ಮತ್ತೊಂದು ಗೂಡು ನೇಯಲು ಶುರು ಮಾಡುತ್ತದೆ. ಮನುಷ್ಯರಿಗೆ ಹತ್ತು ಬೆರಳುಗಳಿದ್ದರೂ ನೇಯಲು ಕಷ್ಟವಾಗುವಂತಹ ಗೂಡನ್ನು ಪುಟ್ಟ ಇಕ್ಕಳದಂತಹ ಕೊಕ್ಕಿನಿಂದಲೇ ಈ ಪುಟ್ಟ ಹಕ್ಕಿ ನೇಯುತ್ತದೆ. ಈ ಕಾರಣಕ್ಕೆ ಇದರ ಇನ್ನೊಂದು ಹೆಸರು ನೇಕಾರ ಹಕ್ಕಿ.

ಕೊತ್ತನೂರಿನ ಕೆರೆಯಂಚಿನ ಜಾಲಿ ಮರದಲ್ಲಿ ಸುಂದರವಾಗಿ ನೇಯ್ದ ಗೀಜಗನ ಗೂಡನ್ನು `ವೈಟ್ ಥ್ರೋಟೆಡ್ ಮುನಿಯಾ', `ಇಂಡಿಯನ್ ಸಿಲ್ವರ್ ಬಿಲ್', `ಬಿಳಿ ಕತ್ತಿನ ರಾಟವಾಳ' ಎಂದೆಲ್ಲಾ ಕರೆಯುವ ಹಕ್ಕಿಗಳು ತಮ್ಮ ಮನೆಯಾಗಿಸಿಕೊಂಡಿವೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನೊಳಗೆ `ಸ್ಪಾಟೆಡ್ ಮುನಿಯಾ' ಅಥವಾ `ಚುಕ್ಕೆ ರಾಟವಾಳ' ಹಕ್ಕಿಗಳು ಸಂಸಾರ ನಡೆಸಿವೆ.

ಹಾವು, ಹದ್ದು, ಬೆಕ್ಕು ಮುಂತಾದವು ತನ್ನ ಮೊಟ್ಟೆ ಮತ್ತು ಮರಿಗಳನ್ನು ನಾಶಪಡಿಸಬಹುದು ಎಂದು ಅವುಗಳಿಗೆ ಸಿಗದಂತೆ ಕೆರೆಯಂಚಿನ ಜಾಲಿ ರೆಂಬೆಯ ತುದಿಯಲ್ಲಿ ಗೀಜಗ ಹಕ್ಕಿಗಳು ತಮ್ಮ ಗೂಡು ನೇಯುತ್ತವೆ. ಅವು ಉಪಯೋಗಿಸಿ ಬಿಟ್ಟ ಗೂಡನ್ನು ಮುನಿಯಾ ತನ್ನ ಮನೆಯನ್ನಾಗಿಸಿಕೊಂಡಿದೆ. ಇನ್ನೊಂದೆಡೆ ವಿದ್ಯುತ್ ಪ್ರವಹಿಸುವ ತಂತಿಗಳ ಕೆಳಗೆ ತನಗೆ ತೊಂದರೆಯಾಗುವುದಿಲ್ಲ ಎಂದು ಮನಗಂಡು ಇನ್ನೊಂದು ಮುನಿಯಾ ಹಕ್ಕಿ ವಾಸ್ತವ್ಯ ಹೂಡಿದೆ.

ಮನುಷ್ಯರಿಂದ, ಜೊತೆಗೆ ತನ್ನನ್ನು ತಿಂದು ಬದುಕುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳುತ್ತಾ ಸಂತತಿಯನ್ನೂ ಮುಂದುವರಿಸುವಲ್ಲಿ ಸಾಹಸ ಮೆರೆಯುವ ಈ ಪುಟ್ಟ ಹಕ್ಕಿಗಳಿಂದ ನಾವು ಬಹಳಷ್ಟು ಪಾಠ ಕಲಿಯಬೇಕಿದೆ ಎನ್ನುತ್ತಾರೆ ಕೊತ್ತನೂರು ನಾಗರಾಜ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.