ADVERTISEMENT

ಗೊಲ್ಲರ ಹಟ್ಟಿಗಳಲ್ಲಿ ಕಾಣದ ವಿಕಾಸದ ಬೆಳಕು

ಸಚ್ಚಿದಾನಂದ ಕುರಗುಂದ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಚಿತ್ರದುರ್ಗ: ಗೊಲ್ಲರ ಹಟ್ಟಿಗಳ ಅಭಿವೃದ್ಧಿ ಎಂದು? ಸರ್ಕಾರ ರೂಪಿಸಿದ್ದ ಪ್ಯಾಕೇಜ್ ಏನಾಯಿತು?
ಪ್ರತಿಯೊಂದು ಗೊಲ್ಲರಹಟ್ಟಿ ಅಭಿವೃದ್ಧಿಗೆ ರೂ. 40 ಲಕ್ಷ ಪ್ಯಾಕೇಜ್ ರೂಪಿಸಿ ಯೋಜನೆಯೊಂದನ್ನು 2009ರಲ್ಲಿ ಪ್ರಕಟಿಸಲಾಗಿತ್ತು.
 
ಈ ಯೋಜನೆ ಅಡಿಯಲ್ಲಿ ಪ್ರತಿ ಗೊಲ್ಲರಹಟ್ಟಿಯಲ್ಲಿ 25ರಿಂದ 40 ಮನೆಗಳು ಅಥವಾ ಅಗತ್ಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸಲು ರೂ. 10 ಲಕ್ಷ, ವಿದ್ಯುದೀಕರಣಕ್ಕೆ 1 ಲಕ್ಷ, ಮಹಿಳಾ ಭವನಕ್ಕೆ ರೂ. 5ಲಕ್ಷ, ಸಮುದಾಯ ಭವನಕ್ಕೆ ರೂ. 8 ಲಕ್ಷ, ರಸ್ತೆ ನಿರ್ಮಾಣಕ್ಕೆ ರೂ.10 ಲಕ್ಷ, ಕುಡಿಯುವ ನೀರಿಗೆ ರೂ. 5ಲಕ್ಷ, ಸಮುದಾಯ ಶೌಚಾಲಯಕ್ಕೆ ರೂ.1ಲಕ್ಷ ನಿಗದಿಪಡಿಸಲಾಗಿತ್ತು.

ಆರಂಭದಲ್ಲಿ ಮಹಿಳಾ ಭವನಕ್ಕೆ ಕೃಷ್ಣ ಕುಟೀರ ಎಂದು ನಾಮಕರಣ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಸರ್ಕಾರ ಈ ಹೆಸರನ್ನು ಬದಲಾಯಿಸಿತು.

`ಗೊಲ್ಲರಹಟ್ಟಿಗಳಲ್ಲಿನ ಹೆಣ್ಣು ಮಕ್ಕಳು ಋತಿಮತಿಯಾದಾಗ, ಹೆರಿಗೆಯಾದಾಗ ಮತ್ತು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ತಾವು ವಾಸಿಸುವ ಹಟ್ಟಿಗಳ ಹೊರಗೆ ಒಂದು ಚಿಕ್ಕ ಗುಡಿಸಲನ್ನು ಕಟ್ಟಿಕೊಂಡು ಅಲ್ಲಿ ವಾಸಿಸುತ್ತಾರೆ.

ಈ ರೀತಿ ನಿರ್ಮಿಸುವ ಗುಡಿಸಲುಗಳಲ್ಲಿ ಕನಿಷ್ಠ ಸ್ಥಳಾವಕಾಶ ಹಾಗೂ ಕನಿಷ್ಠ ಆರೋಗ್ಯ ಸೌಲಭ್ಯಗಳು ಇರುವುದಿಲ್ಲ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಹಿಂದುಳಿದ ಸಮುದಾಯದ ಸ್ತ್ರೀಯರಿಗೆ ಸಾಕಷ್ಟು ಸ್ಥಳಾವಕಾಶವಿರುವ ಹಾಗೂ ಆರೋಗ್ಯ ಸೌಲಭ್ಯಗಳನ್ನೊಳಗೊಂಡ ಮಹಿಳಾ ಭವನಗಳನ್ನು ನಿರ್ಮಿಸುವುದು ಸೂಕ್ತವಾಗಿದೆ. ಇದರಿಂದ ಈ ಜನಾಂಗದ `ವಿಶಿಷ್ಟ ಸಾಮಾಜಿಕ ಪದ್ಧತಿ~ಯನ್ನು ಉಳಿಸುವ ಜತೆಗೆ ಅವರ ಆರೋಗ್ಯವನ್ನು ಕಾಪಾಡಬಹುದಾಗಿದೆ.

ಈ ದೃಷ್ಟಿಯಿಂದ ರಾಜ್ಯದಲ್ಲಿರುವ ಗೊಲ್ಲರಹಟ್ಟಿಗಳಲ್ಲಿ ಮಹಿಳಾ ಭವನಗಳನ್ನು ನಿರ್ಮಿಸುವುದು ಅತ್ಯಂತ ಸೂಕ್ತವಾಗಿದೆ~ ಎಂದು ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿತ್ತು.

ಚಿತ್ರದುರ್ಗ ಜಿಲ್ಲೆಯೊಂದರಲ್ಲಿ ತಲಾ ರೂ. 5 ಲಕ್ಷ ವೆಚ್ಚದಲ್ಲಿ 16 ಮಹಿಳಾ ಭವನ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ 13 ಭವನಗಳು ಮುಕ್ತಾಯವಾಗಿವೆ. ಆದರೆ, ಈ ಮಹಿಳಾ ಭವನಗಳನ್ನು ನಿರ್ಮಿಸುವ ಬದಲಾಗಿ ಗೊಲ್ಲರಹಟ್ಟಿಗಳಲ್ಲಿ ಅರಿವು ಮೂಡಿಸಿ ಪರಿವರ್ತನೆ ತರಬೇಕಾಗಿತ್ತು ಎಂದು ಗೊಲ್ಲ ಸಮಾಜದ ಮುಖಂಡ  ಸಿ. ಮಹಾಲಿಂಗಪ್ಪ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.