ADVERTISEMENT

ಗೋದಾಮಿಗೆ ಬೆಂಕಿ: ನಾಲ್ವರು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 20:15 IST
Last Updated 23 ಫೆಬ್ರುವರಿ 2012, 20:15 IST

ನಂಜನಗೂಡು: ಪಟ್ಟಣದ ಹೊರ ವಲಯದಲ್ಲಿನ ಔಷಧ ತಯಾರಿಕಾ ಘಟಕ `ಜುಬಿಲೆಂಟ್ ಲೈಫ್ ಸೈನ್ಸಸ್ ಕಾರ್ಖಾನೆ~ಯ ತ್ಯಾಜ್ಯ ವಸ್ತು ಸಂಗ್ರಹ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಉಂಟಾದ ದಟ್ಟ ಹೊಗೆ ಮತ್ತು ರಾಸಾಯನಿಕಯುಕ್ತ ಗಾಳಿಗೆ ಭಯಭೀತರಾದ ಕಲ್ಲಹಳ್ಳಿ ಗ್ರಾಮಸ್ಥರು  ಮನೆ ಬಿಟ್ಟು ದಿಕ್ಕಾಪಾಲಾಗಿ ಓಡಿಹೋದ ಘಟನೆ ಗುರುವಾರ ನಡೆದಿದೆ.

ಬೆಂಕಿ ನಂದಿಸುತ್ತಿದ್ದ ಕಂಪೆನಿಯ ನೌಕರರಾದ ಶೇಖರ್, ಸುನೀಲ್, ಮಹೇಂದ್ರ ಮತ್ತು ನವೀನ್‌ಮಿಟ್ಟ  ರಾಸಾಯನಿಕ ಗಾಳಿ ಸೇವನೆಯಿಂದ ಅಸ್ವಸ್ಥರಾಗಿ ಮೈಸೂರು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ನಾಲ್ಕು ಗಂಟೆ ಸುಮಾರಿಗೆ ಗೋದಾಮಿಗೆ ಬೆಂಕಿ ತಗುಲಿದ್ದು, ದಟ್ಟ ಹೊಗೆ ಆವರಿಸಿಕೊಂಡಿತು. ಅಲ್ಲದೆ ರಾಸಾಯನಿಕ ಯುಕ್ತ ಗಾಳಿಯು ಸುತ್ತ ಹರಡಿಕೊಂಡಿತು.

ಹೊಗೆ ಮತ್ತು ಉಸಿರಾಟಕ್ಕೆ ತೊಂದರೆ ಉಂಟುಮಾಡುವ ಗಾಳಿಗೆ ಹೆದರಿದ ಗ್ರಾಮದ ಮಹಿಳೆಯರು ಮಕ್ಕಳು, ಮರಿಗಳನ್ನು ಎತ್ತಿಕೊಂಡು ಮನೆಯಿಂದ ಹೊರಬಂದು ತೋಚಿದ ಕಡೆಗೆ ಓಡಿ ಹೋದರು. 

 ಪರಿಸ್ಥಿತಿ ತಹಬದಿಗೆ ಬಂದ ನಂತರ ವಿವಿಧ ಕಡೆ ಓಡಿ ಹೋಗಿದ್ದ ಗ್ರಾಮಸ್ಥರು ಮನೆಯತ್ತ ಮುಖ ಮಾಡಿದರು. ಎರಡನೇ ಬಾರಿಗೆ ಇಂತಹ ಘಟನೆ ಸಂಭವಿಸಿದೆ.

ಸ್ಥಳಕ್ಕೆ ತಹಶೀಲ್ದಾರ್ ಎ.ನವೀನ್ ಜೋಸೆಫ್ ಭೇಟಿ ನೀಡಿದಾಗ ಗ್ರಾಮಸ್ಥರು ಕೆಲ ಹೊತ್ತು ಮುತ್ತಿಗೆ ಹಾಕಿ ಸುರಕ್ಷತೆಗಾಗಿ ಆಗ್ರಹ ಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.