ADVERTISEMENT

ಗೋವು ಸಂರಕ್ಷಣಾ ಆಯೋಗ ರಚನೆ: ರಾಜ್ಯ ಸಂಪುಟ ಅಸ್ತು

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 11:40 IST
Last Updated 6 ಜುಲೈ 2012, 11:40 IST

ಬೆಂಗಳೂರು (ಪಿಟಿಐ): ತನ್ನ ಗೋಹತ್ಯಾ ನಿಷೇಧ ಮಸೂದೆಯು ಎರಡು ವರ್ಷಗಳಿಂದ ರಾಷ್ಟ್ರಪತಿಯವರ ಅಂಕಿತಕ್ಕಾಗಿ ಬಾಕಿ ಉಳಿದಿರುವಂತೆಯೇ ರಾಜ್ಯದ ಬಿಜೆಪಿ ಸರ್ಕಾರವು ಶುಕ್ರವಾರ ~ಗೋವು ಸಂರಕ್ಷಣಾ ಆಯೋಗ~ ರಚಿಸಲು ನಿರ್ಧರಿಸಿತು.

ಗೋವುಗಳ ಸಂರಕ್ಷಣೆ ಹಾಗೂ ನೂತನ ಗೋವು ತಳಿಗಳ ಅಭಿವೃದ್ಧಿಗಾಗಿ ಹೊಸ ಆಯೋಗ (ಗೋವು ಸಂರಕ್ಷಣಾ ಆಯೋಗ) ರಚಿಸಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿತು.

~ಈ ಗೋವು ಸಂರಕ್ಷಣಾ ಆಯೋಗದ ಮೂಲಕ ಸರ್ಕಾರವು ಹಾಲಿ ಗೋವು ತಳಿಗಳ ಸಂರಕ್ಷಣೆ, ಹೊಸ ತಳಿಗಳ ಅಭಿವೃದ್ಧಿ ಬಗ್ಗೆ ಸಂಶೋಧನೆ ಹಾಗೂ ಜಾನುವಾರುಗಳ ಆರೋಗ್ಯ ಮತ್ತು ರಕ್ಷಣೆಗೆ ಹೆಚ್ಚಿನ ಗಮನ ಹರಿಸುವುದು~ ಎಂದು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತುತ ಈ ಕೆಲಸಗಳನ್ನು ಪಶು ಸಂಗೋಪನಾ ಇಲಾಖೆ ನಿರ್ವಹಿಸುತ್ತಿದ್ದರೂ ಇಂತಹ ಸಂಸ್ಥೆಯೊಂದನ್ನು ರಚಿಸುವ ಅಗತ್ಯವಿದೆ ಎಂದು ಅವರು ನುಡಿದರು.

ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮಸೂದೆ 2010ಕ್ಕೆ ಸಂಬಂಧಿಸಿದಂತೆ ಕೇಂದ್ರವು ಕೋರಿದ್ದ ಸ್ಪಷ್ಟನೆಗಳನ್ನು ಸರ್ಕಾರವು ಈಗಾಗಲೇ ಸಲ್ಲಿಸಿದೆ ಎಂದು ಕಾಗೇರಿ ಹೇಳಿದರು.

ವಿಧಾನ ಮಂಡಲದ ಉಭಯ ಸದನಗಳಲ್ಲೂ ಅಂಗೀಕೃತವಾಗಿದ್ದ ಈ ಮಸೂದೆಯು ಗೋ ಹತ್ಯೆಯನ್ನು ಒಂದು ವರ್ಷದವರೆಗೆ ಸೆರೆವಾಸದ ಶಿಕ್ಷೆ ಹಾಗೂ 25,000 ರೂಪಾಯಿಗಳಿಂದ 50,000 ರೂಪಾಯಿಗಳವರೆಗಿನ ದಂಡ ವಿಧಿಸಬಹುದಾದಂತಹ ಅಪರಾಧವನ್ನಾಗಿ ಪರಿಗಣಿಸಲು ಅವಕಾಶ ಕಲ್ಪಿಸಿದೆ. ಈ ಮಸೂದೆಗೆ ರಾಷ್ಟ್ರಪತಿಗಳ ಅಂಗೀಕಾರ ಇನ್ನೂ ಲಭಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.