ADVERTISEMENT

ಗೌರಿ ಲಂಕೇಶ್‌ ಹತ್ಯೆಗೆ ‘ಆಪರೇಷನ್ ಆಯಿ’

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 18:58 IST
Last Updated 16 ಜೂನ್ 2018, 18:58 IST
ಗೌರಿ ಲಂಕೇಶ್‌ ಹತ್ಯೆಗೆ ‘ಆಪರೇಷನ್ ಆಯಿ’
ಗೌರಿ ಲಂಕೇಶ್‌ ಹತ್ಯೆಗೆ ‘ಆಪರೇಷನ್ ಆಯಿ’   

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರನ್ನು ಹತ್ಯೆ ಮಾಡಲು ಆರೋಪಿಗಳು, ‘ಆಪರೇಷನ್ ಆಯಿ(ಅಮ್ಮ)’ ಹೆಸರಿ
ನಲ್ಲಿ ಸಂಚು ರೂಪಿಸಿದ್ದರು.

ಪ್ರಕರಣದ ಆರೋಪಿಗಳಾದ ಮಹಾರಾಷ್ಟ್ರದ ಅಮೋಲ್ ಕಾಳೆ ಹಾಗೂ ವಿಜಯಪುರದ ಮನೋಹರ್ ದುಂಡಪ್ಪ ಯಡವೆ ಬಳಿ ಸಿಕ್ಕಿರುವ ಡೈರಿಗಳಲ್ಲಿದ್ದ ಕೋಡ್‌ವರ್ಡ್‌ಗಳ ಅರ್ಥವನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇಬ್ಬರೂ ತಮ್ಮ ಡೈರಿಯಲ್ಲಿ ‘ಆಯಿ ಮಾರ್‌ ಡಾಲಾ’ ಎಂದು ಮರಾಠಿಯಲ್ಲಿ ಬರೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕೋಡ್‌ವರ್ಡ್‌ಗಳ ಬಗ್ಗೆ ಆರೋಪಿಗಳು ಆರಂಭದಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ. ತಜ್ಞರ ಸಹಾಯದಿಂದ ಅರ್ಥವನ್ನು ಪತ್ತೆ ಮಾಡಿ, ಆರೋಪಿ
ಗಳನ್ನು ಪುನಃ ಪ್ರಶ್ನಿಸಿದೆವು. ಆಯಿ ಕಾರ್ಯಾಚರಣೆ ಒಪ್ಪಿಕೊಂಡರು’ ಎಂದರು.

ADVERTISEMENT

‘ಗೌರಿಗೆ ವಯಸ್ಸಾಗಿತ್ತು. ಬಿಳಿ ಕೂದಲಿತ್ತು. ಆಯಿ(ಅಮ್ಮ) ರೀತಿಯಲ್ಲೇ ಕಾಣಿಸುತ್ತಿದ್ದರು. ನಾವೆಲ್ಲರೂ ಆಯಿಯನ್ನು ಮುಗಿಸೋಣ ಅಂತಾನೇ ಅಂದು
ಕೊಂಡಿದ್ದೆವು. ಹೀಗಾಗಿ, ಅದೇ ಹೆಸರು ಸೂಕ್ತವೆನಿಸಿತು. ನಂತರ ನಾವೆಲ್ಲರೂ ಆಯಿ ಎಲ್ಲಿದ್ದಾಳೆ? ಆಯಿ ಮೇಲೆ ಕಣ್ಣಿಡಿ, ಆಯಿ ಮುಗಿಸುವ ಕಾಲ ಹತ್ತಿರ ಬಂತು ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದೆವು’ ಎಂದು ಆರೋಪಿಗಳು ಹೇಳಿರುವುದಾಗಿ ಅಧಿಕಾರಿ ವಿವರಿಸಿದರು.

‘ಕಾಯಿನ್ ಬೂತ್‌ನಲ್ಲಿ ಮಾತನಾಡುವಾಗಲೂ ಆರೋಪಿಗಳು, ‘ಆಯಿ’ ಎಂದೇ ಮಾತು ಆರಂಭಿಸುತ್ತಿದ್ದರು. ಸಂಚು ರೂಪಿಸಿ ಹತ್ಯೆ ಮಾಡುವವರೆಗೂ ಆರೋಪಿಗಳು, ಗೌರಿ ಲಂಕೇಶ್ ಹೆಸರು ಹೇಳಿಲ್ಲ. ಗೌರಿ ಅವರಿಗೆ 2017ರ ಸೆಪ್ಟೆಂಬರ್ 5ರಂದು ರಾತ್ರಿ ಗುಂಡು ಹೊಡೆಯಲು ಹೊರಟಿದ್ದ ಪರಶು
ರಾಮ್, ‘ಆಯಿ ಆಪರೇಷನ್‌ಗೆ ರೆಡಿ’ ಎಂದು ಹೇಳಿ ಬೈಕ್ ಹತ್ತಿದ್ದ. ಸವಾರ ಸಹ ಅದೇ ಹೆಸರು ಹೇಳಿ ಆತನನ್ನು ಹತ್ತಿಸಿಕೊಂಡಿದ್ದ’ ಎಂದು ಅಧಿಕಾರಿ ವಿವರಿಸಿದರು.

ಇನ್ನಿಬ್ಬರ ಹತ್ಯೆಗೂ ಆಪರೇಷನ್‌: ಗೌರಿ ಬಳಿಕ, ಸಾಹಿತಿ ಪ್ರೊ. ಕೆ.ಎಸ್‌.ಭಗವಾನ್‌ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರನ್ನು ಸರದಿಯಲ್ಲಿ ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ಹೇಳಿದರು.

ಐದು ರಾಜ್ಯಗಳಲ್ಲಿ ತಂಡಗಳು ಸಕ್ರಿಯ: ಹಿಂದೂ ಧರ್ಮ ಹಾಗೂ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತ
ನಾಡುವ ಸಾಹಿತಿಗಳು ಹಾಗೂ ವಿಮರ್ಶಕರನ್ನು ಹತ್ಯೆ ಮಾಡಲೆಂದು ತಂಡಗಳು ಹುಟ್ಟಿಕೊಂಡಿದ್ದು, ಅದರ ಸದಸ್ಯರು ಐದು ರಾಜ್ಯಗಳಲ್ಲಿದ್ದಾರೆ ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ.

‘ಕರ್ನಾಟಕ, ಗೋವಾ, ಮಧ್ಯಪ್ರದೇಶ, ಗುಜರಾತ್‌ ಹಾಗೂ ಮಹಾರಾಷ್ಟ್ರದಲ್ಲಿರುವ ಕೆಲ ಯುವಕರು ಈ ತಂಡಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ಆಯಾ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ’ ಎಂದರು.

‘ಗೌರಿ ಹತ್ಯೆ ಪ್ರಕರಣದ ಆರೋಪಿಗಳು ಹೊರ ರಾಜ್ಯಗಳ ಯುವಕರೊಂದಿಗೆ ಸಂಪರ್ಕದಲ್ಲಿದ್ದರು. ಅದು ಕರೆಗಳ ಮಾಹಿತಿಯಿಂದ ಗೊತ್ತಾಗಿದೆ. ನಮ್ಮ ವಿಶೇಷ ತಂಡಗಳು, ಈಗಾಗಲೇ ಮಹಾರಾಷ್ಟ್ರ ಹಾಗೂ ಗೋವಾಕ್ಕೆ ಹೋಗಿವೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ದಾರಿ ತೋರಿಸದ ಪರಶುರಾಮ್: ಪ್ರಕರಣದ ಮಹಜರು ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಶುಕ್ರವಾರ ಬೆಳಿಗ್ಗೆ ಯಶವಂತಪುರ ವೃತ್ತಕ್ಕೆ ಆರೋಪಿ ಪರಶುರಾಮ್‌ನನ್ನು ಕರೆದೊಯ್ದಿದ್ದರು. ಆತ ತಂಗಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿದರು. ನಂತರ, ‘ನೀನು ಎಲ್ಲೆಲ್ಲಿ ಓಡಾಡಿದ್ದಿಯಾ ತೋರಿಸು’ ಎಂದು ಅಧಿಕಾರಿಗಳು ಹೇಳಿದರು. ಆಗ ಪರಶುರಾಮ್, ‘ನನಗೆ ಬೆಂಗಳೂರು ಹೊಸದು. ದಾರಿ ಗೊತ್ತಿಲ್ಲ’ ಎಂದಿದ್ದಾನೆ.

‘ಆರೋಪಿಗಳು ತಂಗಿದ್ದ ಮಾಗಡಿ ಮುಖ್ಯರಸ್ತೆಯ ದಾಸನಪುರ ಹೋಬಳಿಯ ಸೀಗೇಹಳ್ಳಿ ಗೇಟ್ ಬಳಿಯ ಪೊಲೀಸಪ್ಪನ ಬಿಲ್ಡಿಂಗ್‌ನ ಮನೆ ಹಾಗೂ ಕಡಬಗೆರೆಯ ಸಾಯಿಲಕ್ಷ್ಮಿ ಲೇಔಟ್‌ನ ಅಂಗಡಿಯ ಕೊಠಡಿಗೆ ಆತನನ್ನು ಕರೆದೊಯ್ದಿದ್ದೆವು. ಆ ಸ್ಥಳವನ್ನಷ್ಟೇ ಆತ ಗುರುತು ಹಿಡಿಯುತ್ತಾನೆ. ಆದರೆ, ಅಲ್ಲಿಗೆ ಹೋಗುವ ದಾರಿ ಆತನಿಗೆ ಗೊತ್ತಿಲ್ಲ’ ಎಂದು ಅಧಿಕಾರಿ ತಿಳಿಸಿದರು.

‘ಸಹ ಆರೋಪಿಗಳು ಪರಶುರಾಮ್‌ ನನ್ನು ನಗರದಲ್ಲಿ ಹೆಚ್ಚು ಸುತ್ತಾಡಿಸಿಲ್ಲ. ಸ್ಥಳ ಹಾಗೂ ರಸ್ತೆಗಳ ಹೆಸರನ್ನೂ ಹೇಳಿಲ್ಲ. ಹೀಗಾಗಿ ಆತ ನಗರವನ್ನು ಗುರುತು ಹಿಡಿಯುತ್ತಿಲ್ಲ’ ಎಂದರು.

‘ತಾಯಿ ಕರೆತನ್ನಿ ಎಂದ ಅಧಿಕಾರಿಗಳು’: ಪರಶುರಾಮ್‌ನನ್ನು ಮಾತನಾಡಿಸಿ ಎಸ್‌ಐಟಿ ಕಚೇರಿಯಿಂದ ಹೊರಬಂದ ತಂದೆ ಅಶೋಕ, ‘ನನ್ನ ಮಗ ಚೆನ್ನಾಗಿದ್ದಾನೆ. ಆತನನ್ನು ಮಾತನಾಡಿಸಿದೆ. ತಾಯಿಯನ್ನು ನೋಡಬೇಕೆಂದು ಇಚ್ಛಿಸುತ್ತಿದ್ದ. 5 ದಿನ ಬಿಟ್ಟು ತಾಯಿಯನ್ನು ಕರೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.