ADVERTISEMENT

ಗೌರಿ ಲಂಕೇಶ್‌ ಹತ್ಯೆಯ ಬಂಧಿತರಲ್ಲಿ ಶೂಟರ್ ಇಲ್ಲ; ಎಸ್‌ಐಟಿ

ಗೌರಿಗಿಂತ ಕುಳ್ಳ ಇದ್ದ ಹಂತಕ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ಗೌರಿ ಲಂಕೇಶ್‌ (ಸಂಗ್ರಹ ಚಿತ್ರ)
ಗೌರಿ ಲಂಕೇಶ್‌ (ಸಂಗ್ರಹ ಚಿತ್ರ)   

ಬೆಂಗಳೂರು: ‍ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಐದು ಮಂದಿಯ ಪೈಕಿ, ಗೌರಿ ಅವರಿಗೆ ಗುಂಡಿಕ್ಕಿದವನ ದೇಹದಾರ್ಢ್ಯವನ್ನು ಯಾವೊಬ್ಬನೂ ಹೋಲುತ್ತಿಲ್ಲ ಎಂದು ಎಸ್‌ಐಟಿಯ ತಾಂತ್ರಿಕ ವಿಶ್ಲೇಷಣೆ ಹೇಳುತ್ತದೆ.

ಬೈಕ್‌ನಲ್ಲಿ ಬಂದ ಇಬ್ಬರ ಪೈಕಿ ಒಬ್ಬಾತ ಗೌರಿಯತ್ತ ಗುಂಡಿನ ದಾಳಿ ನಡೆಸಿ ಪರಾರಿಯಾಗುವ ದೃಶ್ಯ ಅವರ ಮನೆಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೃಶ್ಯ ಅಸ್ಪಷ್ಟವಾಗಿದ್ದರಿಂದ ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು.

ಗೌರಿ ಲಂಕೇಶ್ 5.4 ಅಡಿ ಎತ್ತರವಿದ್ದರೆ, ಗುಂಡು ಹಾರಿಸಿದಾತ ಅವರಿಗಿಂತ ಕುಳ್ಳ. ‘ಹಂತಕನ ಎತ್ತರ 5.1 ಅಡಿ. ಆತನ ತೂಕ ಸುಮಾರು 80 ಕೆ.ಜಿ ಇರಬಹುದು’ ಎಂದು ಎಫ್‌ಎಸ್‌ಎಲ್ ತಜ್ಞರು ವರದಿ ಕೊಟ್ಟಿದ್ದರು.

ADVERTISEMENT

‘ಈಗ ಸಿಕ್ಕಿರುವ ಮಹಾರಾಷ್ಟ್ರದ ಅಮೋಲ್ ಕಾಳೆ 6 ಅಡಿ, ವಿಜಯಪುರದ ಮನೋಹರ್ ದುಂಡಪ್ಪ ಯಡವೆ 5.10 ಅಡಿ ಹಾಗೂ ಶಿಕಾರಿಪುರದ ಸುಜಿತ್ ಅಲಿಯಾಸ್ ಪ್ರವೀಣ್ 5.8 ಅಡಿ ಎತ್ತರ ಇದ್ದಾರೆ. ಅಮಿತ್ ದೇಗ್ವೇಕರ್‌ 5 ಅಡಿ ಇದ್ದರೂ, ತುಂಬ ತೆಳ್ಳಗಿದ್ದಾನೆ. ಹೀಗಾಗಿ, ಈ ನಾಲ್ವರಲ್ಲಿ ಯಾರೂ ಶೂಟರ್ ಅಲ್ಲ ಎಂಬುದು ಖಚಿತವಾಗಿದೆ’ ಎಂದು ಎಸ್‌ಐಟಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘‌ಮದ್ದೂರಿನ ಕೆ.ಟಿ.ನವೀನ್‌ ಕುಮಾರ್, ಹತ್ಯೆ ನಡೆದ ದಿನ ಬೆಂಗಳೂರಿನಲ್ಲಿ ಇರಲೇ ಇಲ್ಲ ಎಂಬುದು ಮೊಬೈಲ್ ಕರೆ ವಿವರದಿಂದ (ಸಿಡಿಆರ್‌) ಸ್ಪಷ್ಟವಾಗಿ ಗೊತ್ತಾಗಿದೆ. ಸೆ.5ರ ಬೆಳಿಗ್ಗೆಯೇ ಹಂತಕರಿಗೆ ಪಿಸ್ತೂಲ್ ಹಾಗೂ ಗುಂಡುಗಳನ್ನು ಪೂರೈಸಿದ್ದ ಆತ, ನಂತರ ಪತ್ನಿ ರೂಪಾ ಅವರನ್ನು ಕರೆದುಕೊಂಡು ಮಂಗಳೂರಿನ ಆಶ್ರಮವೊಂದಕ್ಕೆ ತೆರಳಿದ್ದ. ಅದೇ ದಿನ ರಾತ್ರಿ 8.10ರ ಸುಮಾರಿಗೆ ಗೌರಿ ಹತ್ಯೆ ನಡೆದಿತ್ತು’ ಎಂದರು.

‘ಗೌರಿ ಕೊಲೆಯಾದ ಸುದ್ದಿಯನ್ನು ಸೆ.6ರ ಬೆಳಿಗ್ಗೆ ಆಶ್ರಮದ ಟಿ.ವಿಯಲ್ಲಿ ನೋಡಿದ ರೂಪಾ, ಆ ವಿಚಾರವನ್ನು ಪತಿಗೆ ತಿಳಿಸಿದ್ದರು. ಅದಕ್ಕೆ ನವೀನ್, ‘ಹೌದಾ... ಪಾಪಾ...’ ಎಂದಷ್ಟೇ ಹೇಳಿ ಸುಮ್ಮನಾಗಿದ್ದ. ಇದನ್ನು ರೂಪಾ ತಮ್ಮ ಸ್ವ–ಇಚ್ಛಾ ಹೇಳಿಕೆಯಲ್ಲೇ ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ನಿಹಾಲ್ ಅಲಿಯಾಸ್ ದಾದಾನೇ ಶೂಟರ್ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ’ ಎಂದರು.

ಆರು ತಾಸು ಧ್ಯಾನ!
‘ಬಂಧಿತರಲ್ಲಿ ಶೂಟರ್ ಇಲ್ಲದಿದ್ದರೂ, ಇವರಲ್ಲೇ ಒಬ್ಬಾತ ಶೂಟರ್‌ನನ್ನು ಬೈಕ್‌ನಲ್ಲಿ ಗೌರಿ ಮನೆ ಹತ್ತಿರ ಕರೆದುಕೊಂಡು ಬಂದಿದ್ದಾನೆ. ತನಿಖೆ ದೃಷ್ಟಿಯಿಂದ ಈಗಲೇ ಆತನ ಹೆಸರು ಬಹಿರಂಗಪಡಿಸುವುದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಆರೋಪಿಗಳು ವಿಚಾರಣೆಗೆ ಸಹಕರಿಸುತ್ತಿಲ್ಲ. ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದೇ ಹೇಳುತ್ತಿದ್ದಾರೆ. ಅಮೋಲ್ ಕಾಳೆ ನಿತ್ಯ ಆರು ತಾಸು ಧ್ಯಾನ ಮಾಡುತ್ತಿದ್ದಾನೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.