ADVERTISEMENT

ಗೌರಿ ಹತ್ಯೆ: ವಿಜಯಪುರದಲ್ಲಿ ಎಸ್‌ಐಟಿ ತನಿಖಾ ತಂಡ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST

ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ವಿಜಯಪುರದಲ್ಲಿ ತನಿಖೆ ಆರಂಭಿಸಿದೆ.

ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ, ಎಸ್‌ಐಟಿ ತಂಡದ ಅಧಿಕಾರಿ ಜಿನೇಂದ್ರ ಖನಗಾವಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದು, ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

‘ಜಿಲ್ಲೆಯ ಇಂಡಿ ಹಾಗೂ ಸಿಂದಗಿ ತಾಲ್ಲೂಕಿನ ಭೀಮಾ ತೀರದ ಕೆಲ ರೌಡಿಗಳು, ಮಧ್ಯಪ್ರದೇಶದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರರ ಜತೆ ನಂಟು ಹೊಂದಿದ್ದಾರೆ. ಸದ್ಯ ಅವರೊಂದಿಗೆ ಸಂಪರ್ಕದಲ್ಲೂ ಇದ್ದಾರೆ. ಭೀಮಾ ತೀರದಲ್ಲಿ ಹಲವು ಸುಪಾರಿ ಕಿಲ್ಲರ್‌ಗಳೂ ಇದ್ದಾರೆ. ಇದರ ಜತೆಗೆ ಹಂತಕ ತಂಡಗಳು ಸಹ ಎರಡು ದಶಕದಿಂದ ತಮ್ಮದೇ ಪ್ರಾಬಲ್ಯ ಹೊಂದಿದ್ದು, ಆಗಾಗ್ಗೆ ಕೊಲೆ ಎಸಗುತ್ತಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಎಸ್‌ಐಟಿ ಅಧಿಕಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಗೌರಿ ಹತ್ಯೆಗೂ, ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ವ್ಯಕ್ತಿಗಳಿಗೂ ಸಂಬಂಧವಿದೆಯೇ ಎಂಬ ಮಾಹಿತಿ ಸಂಗ್ರಹಿಸುತ್ತಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ADVERTISEMENT

ಜಿನೇಂದ್ರ ಖನಗಾವಿ ಈ ಹಿಂದೆ ವಿಜಯಪುರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಜಿಲ್ಲೆಯಲ್ಲಿನ ಅಪರಾಧ ಚಟುವಟಿಕೆಗಳ ಮಾಹಿತಿ ಇದೆ. ಜತೆಗೆ ಹಂತಕ ತಂಡಗಳ ಹಿನ್ನೆಲೆಯೂ ಗೊತ್ತಿರುವುದರಿಂದ ಅವರನ್ನು ಎಸ್‌ಐಟಿ ತನಿಖೆಗೆ ನಿಯೋಜಿಸಲಾಗಿದೆ ಎನ್ನಲಾಗಿದೆ.

‘ತನಿಖಾ ತಂಡದ ಮುಖ್ಯಸ್ಥರ ಸೂಚನೆಯಂತೆ ವಿಜಯಪುರಕ್ಕೆ ಬಂದು ಮಾಹಿತಿ ಸಂಗ್ರಹಿಸುತ್ತಿರುವೆ. ಅಲ್ಲಿಂದ ಬರುವ ನಿರ್ದೇಶನಗಳನ್ನು ಪಾಲಿಸುತ್ತಿರುವೆ. ಹೆಚ್ಚಿನ ಮಾಹಿತಿ ಕೇಳಬೇಡಿ. ತನಿಖೆ ಎಷ್ಟು ದಿನ ಮುಂದುವರಿಯಲಿದೆ ಎಂಬುದನ್ನು ಹೇಳಲಾಗುವುದಿಲ್ಲ’ ಎಂದು ಖನಗಾವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.