ADVERTISEMENT

ಗ್ರಾಪಂ ಪುನರ್‌ವಿಂಗಡಣೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಬೆಂಗಳೂರು: `ಗ್ರಾಮ ಪಂಚಾಯಿತಿಗಳ ಪುನರ್‌ವಿಂಗಡಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದರ ಅಧ್ಯಯನಕ್ಕಾಗಿ 3ನೇ ಹಣಕಾಸು ಆಯೋಗದ ಸದಸ್ಯ ಮಹೇಂದ್ರ ಎಸ್.ಕಂಠಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಅದು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ~ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಮಂಗಳವಾರ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 5,627 ಗ್ರಾಮ ಪಂಚಾಯಿತಿಗಳಿದ್ದು, ಜನಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ. ಅನೇಕ ಕಡೆ ನಾಲ್ಕೈದು ಗ್ರಾಮಗಳು ಸೇರಿ ಒಂದು ಗ್ರಾಮ ಪಂಚಾಯಿತಿ ಆಗಿದೆ. ಈಗ ಅವುಗಳ ವ್ಯಾಪ್ತಿಯನ್ನು 2-3 ಗ್ರಾಮಗಳಿಗೆ ಸೀಮಿತಗೊಳಿಸಬೇಕಾಗಿದೆ. ಹೀಗಾಗಿ ಪುನರ್‌ವಿಂಗಡಣೆಗೆ ನಿರ್ಧರಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕಂಠಿ ನೇತೃತ್ವದ ಸಮಿತಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ.ಟಿ.ಕಿತ್ತೂರು, ಬೆಂಗಳೂರಿನ ಐಸೆಕ್ ಪ್ರಾಧ್ಯಾಪಕ ಶಿವಣ್ಣ, ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ನಾಯಕ್, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಬಾಲಕೃಷ್ಣ ಅವರು ಸದಸ್ಯರಾಗಿ ಕೆಲಸ ನಿರ್ವಹಿಸಲಿದ್ದಾರೆ. ಈ ಸಮಿತಿ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆಯಲಿದೆ. ಅದರ ನಂತರ ಯಾವ ರೀತಿಯ ಪುನರ್‌ವಿಂಗಡಣೆ ಮಾಡಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದೆ. ಆ ವರದಿ ಆಧಾರದ ಮೇಲೆ ನಿಯಮಗಳಿಗೆ ತಿದ್ದುಪಡಿ ತಂದು ಪುನರ್‌ವಿಂಗಡಣೆ ಮಾಡಲಾಗುವುದು ಎಂದು ಅವರು ಹೇಳಿದರು.

ADVERTISEMENT

ಒಟ್ಟಾರೆ ಈ ಪ್ರಕ್ರಿಯೆಗೆ ನೋಡಲ್ ಸಂಸ್ಥೆಯಾಗಿ ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ನೇಮಿಸಲಾಗಿದೆ. ಅನೇಕ ಕಡೆ ದೊಡ್ಡ ಗ್ರಾಮ ಪಂಚಾಯಿತಿಗಳಿದ್ದು, ಅವುಗಳ ವ್ಯಾಪ್ತಿಯನ್ನು ಚಿಕ್ಕದು ಮಾಡಬೇಕಾಗಿದೆ. ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದರಲ್ಲಿ 75 ಮಂದಿ ಸದಸ್ಯರಿದ್ದಾರೆ. ಇಂತಹ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆಯೂ ಈ ಸಮಿತಿ ಶಿಫಾರಸು ಮಾಡಲಿದೆ ಎಂದರು.

ಅಧ್ಯಕ್ಷರ ನೇರ ಆಯ್ಕೆ: ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಐದು ವರ್ಷಕ್ಕೊಮ್ಮೆ ನೇರ ಆಯ್ಕೆ ಮಾಡುವ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದ್ದು, ಅದರ ಸಾಧಕ ಬಾಧಕಗಳು ಹಾಗೂ ಬದಲಾವಣೆಗೆ ಅನುಸರಿಸಬೇಕಾದ ವಿಧಿವಿಧಾನಗಳ ಬಗ್ಗೆ ವಿಶ್ಲೇಷಿಸಿ ವರದಿ ನೀಡಲು ಧಾರವಾಡದ `ಸೆಂಟರ್ ಫಾರ್ ಮಲ್ಟಿ-ಡಿಸಿಪ್ಲಿನರಿ ರಿಸರ್ಚ್~ ಸಂಸ್ಥೆಯನ್ನು ನೇಮಿಸಿದ್ದು, ಇದಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದರು.

ಅಧ್ಯಕ್ಷರ ಹುದ್ದೆಗೆ 30 ತಿಂಗಳ ಅವಧಿ ಇದ್ದರೂ ಆ ಪ್ರಕಾರ ಹೆಚ್ಚಿನ ಕಡೆ ನಡೆಯುತ್ತಿಲ್ಲ. ಅವಿಶ್ವಾಸ ನಿರ್ಣಯದ ಮೂಲಕ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದ್ದು, ಅದನ್ನು ಸರಿ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.