ADVERTISEMENT

ಘೋಷಣೆಯಲ್ಲಿಯೇ ಉಳಿದ ಯೋಜನೆಗಳು...

ರಾಜ್ಯದ ರೈಲ್ವೆ ಯೋಜನೆಗಳ ಸ್ಥಿತಿಗತಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2013, 19:59 IST
Last Updated 23 ಫೆಬ್ರುವರಿ 2013, 19:59 IST
ಕಾಮಗಾರಿ ಪೂರ್ಣಗೊಳ್ಳದ ತುಮಕೂರು ಉಪ್ಪಾರಹಳ್ಳಿ ರೈಲ್ವೆ ಮೇಲ್ಸೇತುವೆ
ಕಾಮಗಾರಿ ಪೂರ್ಣಗೊಳ್ಳದ ತುಮಕೂರು ಉಪ್ಪಾರಹಳ್ಳಿ ರೈಲ್ವೆ ಮೇಲ್ಸೇತುವೆ   

ತುಮಕೂರು: ದಶಕ ಕಳೆದರೂ ಪೂರ್ಣಗೊಳ್ಳದ ಮೇಲ್ಸೇತುವೆ. ಪ್ರಸ್ತಾವದಲ್ಲೇ ಉಳಿದ ಅಂಡರ್‌ಪಾಸ್ ನಿರ್ಮಾಣ. ನಿಲ್ದಾಣ ಮೇಲ್ದರ್ಜೆಗೇರಿದರೂ ಕಾಣದ ಸ್ವಚ್ಛತೆ, ಸಿಗದ ಕನಿಷ್ಠ ಸೌಕರ್ಯ, ಕಾಗದಕ್ಕೇ ಸೀಮಿತವಾದ ನೂತನ ಯೋಜನೆ. ರಾಜಕೀಯ ಲಾಭಕ್ಕಾಗಿ ಪ್ರತಿ ವರ್ಷ ಘೋಷಣೆಗೊಳ್ಳುವ ಹೊಸ ಯೋಜನೆಗಳು... ಇದು ಕಲ್ಪತರು ನಾಡಿನ ರೈಲ್ವೆ ಸೌಲಭ್ಯಗಳ ಚಿತ್ರಣ.

ನಾಲ್ಕು ದಶಕಗಳ ಬೇಡಿಕೆಯಾದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತ ಬೆಸೆಯುವ ತುಮಕೂರು- ಶಿರಾ- ಹಿರಿಯೂರು - ಚಿತ್ರದುರ್ಗ- ದಾವಣಗೆರೆ ರೈಲು ಮಾರ್ಗ ನಿರ್ಮಾಣಕ್ಕೆ ಹೆಚ್ಚಿನ ಹಣಕಾಸು ಈ ಬಜೆಟ್‌ನಲ್ಲಾದರೂ ಸಿಗಲಿ ಎಂದು ನಿರೀಕ್ಷಿಸಲಾಗಿದೆ.

ದಾವಣಗೆರೆ- ತುಮಕೂರು ಮಾರ್ಗದ ನಿರ್ಮಾಣ ಜವಾಬ್ದಾರಿಯನ್ನು ರೈಲ್ ವಿಕಾಸ ನಿಗಮ ನಿಯಮಿತಕ್ಕೆ  ವಹಿಸಿದರೆ, ಯೋಜನೆ ಪೂರ್ಣಗೊಳಿಸಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಈ ಮಾರ್ಗದ ಕನಸು ನನಸಾದರೆ ಬೆಂಗಳೂರಿನಿಂದ ಮಧ್ಯ ಕರ್ನಾಟಕಕ್ಕೆ ನೇರ ಸಂಪರ್ಕ ಸಿಗಲಿದೆ. ಅಲ್ಲದೇ ಉತ್ತರ ಕರ್ನಾಟಕದವರು ಆಂಧ್ರಪ್ರದೇಶ ಬಳಸಿಕೊಂಡು ಬೆಂಗಳೂರು ತಲುಪುವ ಬವಣೆ ಕೂಡ ತಪ್ಪಲಿದೆ ಎನ್ನುತ್ತಾರೆ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಆರ್. ವಿ.ಪುಟ್ಟಕಾಮಣ್ಣ.

ರೂ. 934.45 ಕೋಟಿಯಿದ್ದ ದಾವಣಗೆರೆ- ತುಮಕೂರು ಮಾರ್ಗದ ವೆಚ್ಚ ಈಗ ರೂ. 1,250 ಕೋಟಿಗೆ ಹೆಚ್ಚಿದೆ. ರೈಲಿಗಾಗಿ ನಡೆಯುತ್ತಿರುವ ಹೋರಾಟ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದೆ. ಚಿತ್ರದುರ್ಗ- ದಾವಣಗೆರೆ ಜಿಲ್ಲೆಯಲ್ಲೂ ಹೋರಾಟ ಕಾವು ಪಡೆದಿದೆ. ಈ ಸೌಲಭ್ಯದಿಂದ ಮೂರು ಜಿಲ್ಲೆ ವ್ಯಾಪ್ತಿಯಲ್ಲಿ ಕೈಗಾರಿಕೆ ಚಟುವಟಿಕೆ ಗರಿಗೆದರಲಿವೆ. ಬರದ ನಾಡಿನ ಜನತೆಗೆ ಕಡಿಮೆ ಖರ್ಚಿನಲ್ಲಿ, ಸುರಕ್ಷಿತ ಪ್ರಯಾಣದ ಜತೆ ಸ್ಥಳೀಯವಾಗಿ ಉದ್ಯೋಗ ಅವಕಾಶ ಕೂಡ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

2007-08ರಲ್ಲಿ ಮಂಜೂರಾಗಿರುವ ರೂ. 1027 ಕೋಟಿ ವೆಚ್ಚದ ತುಮಕೂರು- ಊರುಕೆರೆ- ಕೊರಟಗೆರೆ- ಮಧುಗಿರಿ- ಮಡಕಶಿರಾ- ಪಾವಗಡ- ಕಲ್ಯಾಣದುರ್ಗ- ರಾಯದುರ್ಗ ನೂತನ ರೈಲು ಮಾರ್ಗ ಪೂರ್ಣಗೊಂಡರೆ ವ್ಯಾಪಾರ-ವಹಿವಾಟು ವೃದ್ಧಿಗೊಳ್ಳುವ ಜತೆ ಅಂತರರಾಜ್ಯ ಸಂಪರ್ಕವೂ ಹೆಚ್ಚುತ್ತದೆ.

ಕನಿಷ್ಠ ಸೌಲಭ್ಯ: ರಾಜಧಾನಿಯ ಹೆಬ್ಬಾಗಿಲು ಎಂದೇ ಬಿಂಬಿತವಾಗಿರುವ ತುಮಕೂರು, ರಾಜ್ಯದ 19 ಜಿಲ್ಲೆಗಳನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುತ್ತದೆ.  ಇಲ್ಲಿನ ರೈಲು ನಿಲ್ದಾಣದಲ್ಲಿ ಕನಿಷ್ಠ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸುತ್ತಾರೆ ಸ್ಥಳೀಯ ರೈಲು ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಮಿತಿಯ ಟಿ.ಆರ್.ರಘೋತ್ತಮರಾವ್.

ಬೆಂಗಳೂರು- ತುಮಕೂರು ಜೋಡಿ ಹಳಿ ಮಾರ್ಗವಿದ್ದು, ಇದನ್ನು ಅರಸೀಕೆರೆ ತನಕ ವಿಸ್ತರಿಸಲಿ. ಪ್ರತಿ ಭಾನುವಾರ ಬೆಳಿಗ್ಗೆ-ಮಧ್ಯಾಹ್ನ ಪ್ರಯಾಣಿಕರ ದಟ್ಟಣೆ ಕಾರಣ ಎರಡು ರೈಲು ಓಡಿಸಬೇಕು ಎಂಬುದು ಅಭಿವೃದ್ಧಿ ರೆವಲ್ಯೂಷನ್ ಫೋರಂನ ಕುಂದರನಹಳ್ಳಿ ರಮೇಶ್ ಅಭಿಪ್ರಾಯ.

ದೂರದೃಷ್ಟಿ ಕೊರತೆ: ರೈಲ್ವೆ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರಲು ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಕೊರತೆ, ದೂರದೃಷ್ಟಿ ಚಿಂತನೆ ಇಲ್ಲದಿರುವುದೇ ಕಾರಣ ಎಂದು ನಿವೃತ್ತ ಎಂಜಿನಿಯರ್ ಆರ್.ಜಯರಾಮಯ್ಯ ಆರೋಪಿಸುತ್ತಾರೆ.

ಚಿಕ್ಕಬಳ್ಳಾಪುರದಲ್ಲಿ ನೆನೆಗುದಿಗೆ:  ಕೆ.  ಎಚ್.ಮುನಿಯಪ್ಪ ನೀಡಿದ್ದ ಭರವಸೆ ಈಡೇರಿದ್ದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈಲ್ವೆಗೆ ಸಂಬಂಧಿಸಿದಂತೆ ಭಾರಿ ಸಂಚಲನವೇ ಆಗಬೇಕಿತ್ತು.

ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆ ಅನುಷ್ಠಾನಗೊಂಡು ಅವಿಭಜಿತ ಜಿಲ್ಲೆಯಲ್ಲಿ ರೈಲುಗಳು ಸಂಪರ್ಕ ಸೇತುವಾಗಿ ಸಂಚರಿಸ  ಬೇಕಿತ್ತು.

`ಕೋಲಾರ-ಚಿಕ್ಕಬಳ್ಳಾಪುರ ನಡುವೆ ಎರಡು ದಶಕ ಸಮೀಪಿಸುತ್ತ ಬಂದರೂ ಗೇಜುಗಳ ಪರಿವರ್ತನೆ ಕಾರ್ಯ ಪೂರ್ಣಗೊಂಡಿಲ್ಲ' ಎಂದು ರೈಲ್ವೆ ಹೋರಾಟ ಸಮಿತಿ ಮುಖಂಡ ಮಹಮ್ಮದ್ ದೂರುತ್ತಾರೆ.

ಎಕ್ಸ್‌ಪ್ರೆಸ್ ರೈಲಿಗೆ ಕಾದ ಜನ: ದಶಕಗಳಿಂದಲೂ ಕೋಲಾರ ಜಿಲ್ಲೆಯ ಜನ ಎಕ್ಸ್‌ಪ್ರೆಸ್ ರೈಲಿಗೆ ಕಾಯುತ್ತಲೇ ಇದ್ದಾರೆ. ಸಂಸದ ಕೆ.ಎಚ್.ಮುನಿಯಪ್ಪ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಅವಧಿಯಲ್ಲಾದರೂ ಈ ಕಾಯುವಿಕೆ ಕೊನೆಗೊಳ್ಳಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಆಧುನೀಕರಣಗೊಂಡಿರುವ ರೈಲು ನಿಲ್ದಾಣಕ್ಕೆ ಇನ್ನೂ ಉದ್ಘಾಟನೆ ಭಾಗ್ಯವೇ ದೊರಕಿಲ್ಲ.

ಬೆಂಗಳೂರಿಗೆ ಹೋಗಲು ಈಗಲೂ ಡೆಮೋ ಪುಷ್‌ಪುಲ್ ರೈಲಿನ ಅವಲಂಬನೆ. ಕೋಲಾರ-ಬೆಂಗಳೂರು ನಡುವೆ ಎಕ್ಸ್‌ಪ್ರೆಸ್ ರೈಲು ಸೌಕರ್ಯ ಕೊಡುವ ಬಗ್ಗೆ 2011ರ ರೈಲ್ವೆ ಬಜೆಟ್‌ನಲ್ಲಿಯೇ ಘೋಷಿಸಲಾಗಿತ್ತು. ಆದರೆ ಎಕ್ಸ್‌ಪ್ರೆಸ್ ರೈಲು ಮಾತ್ರ ಇನ್ನೂ ಬಂದಿಲ್ಲ. ಬರುವ ಸೂಚನೆಯೂ ಕಾಣುತ್ತಿಲ್ಲ.

ಕೋಲಾರ-ಬೆಂಗಳೂರು ನಡುವೆ  ಒಂದೇ ರೈಲು ಸಂಚರಿಸುತ್ತದೆ ಎಂದು ನಿತ್ಯ ರೈಲು ಪ್ರಯಾಣಿಕರ ಸಂಘದ ಪ್ರಮುಖರಾದ ರುಕ್ಮಾಂಗದ ದೂರುತ್ತಾರೆ.

ಕೋಲಾರ -ವೈಟ್‌ಫೀಲ್ಡ್ ನಡುವೆ ರೈಲು ಮಾರ್ಗ ನಿರ್ಮಿಸುವ ಭರವಸೆ ಸರ್ವೇ ಕಾರ್ಯದವರೆಗೂ ಬಂದು ನಿಂತಿದೆ. ಈ ನಡುವೆ, ಕೋಲಾರ-ಬೆಂಗಳೂರು ನಡುವೆ ಮತ್ತೊಂದು ಪ್ರತ್ಯೇಕ ಮಾರ್ಗ ನಿರ್ಮಿಸುವ ಪ್ರಸ್ತಾವಕ್ಕೆ ಹಲವು ಗ್ರಾಮಗಳ ರೈತರು ಪ್ರತಿರೋಧ ಒಡ್ಡಿರುವುದು ಹೊಸ ಬೆಳವಣಿಗೆಯಾಗಿದೆ.

ಬೇಡಿಕೆಗಳು
ತಿಪಟೂರು- ದುದ್ದ,  ತುಮಕೂರು- ಕುಣಿಗಲ್- ಮದ್ದೂರು- ಚಾಮರಾಜ  ನಗರ ನೂತನ ರೈಲು ಮಾರ್ಗ ನಿರ್ಮಾಣ,   ಕಮ್ಯುಟರ್ ರೈಲು ಸೇವೆಗೆ ಚಾಲನೆ, ಚಿಕ್ಕಬಾಣಾವಾರ ರೈಲು ನಿಲ್ದಾಣದಿಂದ ತುಮಕೂರಿಗೂ ವಿದ್ಯುತ್ ಚಾಲಿತ ರೈಲು ಓಡಿಸಲಿ ಎಂಬ ಮನವಿಯನ್ನು ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿದ್ದು, ಈ  ಬಜೆಟ್‌ನಲ್ಲಿ ಅನುಮೋದನೆ ಸಿಗಬಹುದು ಎಂಬ ಆಶಾಭಾವನೆ ಜಿಲ್ಲೆಯ ಜನತೆಯದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.