ADVERTISEMENT

ಚಳವಳಿ ಮೂಲಕ ಬೆಳೆದ ಬದುಕು

ರಂಗಕರ್ಮಿ ಸಿ.ಬಸವಲಿಂಗಯ್ಯ ಮೆಲುಕು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST
ರಂಗಕರ್ಮಿಗಳ ರಾಜಕಾರಣ ಈಗ ರಂಗಕರ್ಮಿಗಳಲ್ಲಿ ರಾಜಕಾರಣಿ­ಗಳಿಗಿಂತ ಹೆಚ್ಚಿನ ರಾಜಕೀಯ ನಡೆಯುತ್ತಿದೆ. ನಾನು ರಂಗಾಯಣ ನಿರ್ದೇಶಕನಾಗಿದ್ದಾಗ ಸಂಬಳ ಬಹಳ ಕಡಿಮೆಯಿತ್ತು. ಆದರೆ, ಈಗ ಆ ಸ್ಥಾನಕ್ಕೆ ಬಹಳ ಬೆಲೆ ಬಂದಿದೆ.  	ಸಿ. ಬಸವಲಿಂಗಯ್ಯ
ರಂಗಕರ್ಮಿಗಳ ರಾಜಕಾರಣ ಈಗ ರಂಗಕರ್ಮಿಗಳಲ್ಲಿ ರಾಜಕಾರಣಿ­ಗಳಿಗಿಂತ ಹೆಚ್ಚಿನ ರಾಜಕೀಯ ನಡೆಯುತ್ತಿದೆ. ನಾನು ರಂಗಾಯಣ ನಿರ್ದೇಶಕನಾಗಿದ್ದಾಗ ಸಂಬಳ ಬಹಳ ಕಡಿಮೆಯಿತ್ತು. ಆದರೆ, ಈಗ ಆ ಸ್ಥಾನಕ್ಕೆ ಬಹಳ ಬೆಲೆ ಬಂದಿದೆ. ಸಿ. ಬಸವಲಿಂಗಯ್ಯ   

ಬೆಂಗಳೂರು: ‘ಕಲಾವಿದ ಗಾಳಿಯಂತೆ, ನೀರಿನಂತೆ  ಚಲನಶೀಲನಾಗಬೇಕು. ಚಲನ­ಶೀಲತೆ ಮತ್ತು ಪ್ರಯೋಗಗಳೇ ನನ್ನ ಬದುಕು ಕಟ್ಟಿವೆ’ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಯನ ಸಭಾಂಗಣದಲ್ಲಿ ಶನಿವಾರ  ಆಯೋಜಿಸಿದ್ದ ‘ಮನೆಯಂಗಳ­ದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಲಾವಿದರು ಒಂದೇ ಕೆಲಸದಲ್ಲಿ ಶಾಶ್ವತವಾಗಿ ನಿಲ್ಲ­ಬಾರದು. ಏಕತಾನತೆ ಬಂದು ಬಿಡುತ್ತದೆ. ಆಗ ಪ್ರಯೋಗಾತ್ಮಕ ಮನಸ್ಸು ಇಲ್ಲವಾಗುತ್ತದೆ. ಕಲಾವಿದರು ಯಾವುದೇ ಒಂದು ವಿಷಯ ಅಥವಾ ಸ್ಥಾನಕ್ಕೆ ಅಂಟಿಕೊಳ್ಳಬಾರದು. ಅವರ ಬದುಕಲ್ಲಿ ಎಂದಿಗೂ ಚಲನಶೀಲತೆ­ಯನ್ನು ಸಾಯಲು ಬಿಡಬಾರದು’ ಎಂದು ನುಡಿದರು.

‘ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದೆ. ಆಗ, ಸಮು­ದಾಯ ಸಂಘಟನೆಯ ಸ್ನೇಹಿತರು ಪರಿಚಯ­ವಾದರು. ಸಿಜಿಕೆ, ಕಿ.ರಂ.ನಾಗ­ರಾಜ್‌ ಅವರಂತಹವರ ಪರಿಚಯ­ವಾಯಿತು. ಸಮುದಾಯದ ಸಹ­ವಾಸವೇ ನನ್ನ ಬದುಕಿಗೆ ಒಂದು ತಿರುವು ನೀಡಿತು. ಚಳವಳಿಗಳ ಮೂಲಕವೇ ನನ್ನ ಬದುಕು ಕಂಡುಕೊಂಡೆ’ ಎಂದರು.

‘ಮಲೆಗಳಲ್ಲಿ ಮದುಮಗಳು ಕಾದಂಬರಿ­ಯನ್ನು 5–6 ಬಾರಿ ಓದಿದ್ದೆ. ಆಗ, ಅದನ್ನು ನಾಟಕವಾಗಿ ಮಾಡ­ಬಹುದೆಂಬ ಕಲ್ಪನೆಯೂ ನನಗೆ ಇರಲಿಲ್ಲ. ಆದರೆ, ಪ್ರಯೋಗಾತ್ಮಕವಾಗಿ ಏನಾದರೂ ಮಾಡಬೇಕೆಂಬ ಹಂಬಲ ಮತ್ತು ರಂಗಾಯಣದ ಸಹವಾಸ ಮಲೆಗಳಲ್ಲಿ ಮದುಮಗಳು 9 ಗಂಟೆಯ ನಾಟಕವನ್ನು ಮಾಡುವಂತೆ ಪ್ರೇರಣೆ ನೀಡಿತು’ ಎಂದರು.

‘ಧಾರವಾಡ, ಶಿವಮೊಗ್ಗ, ಗುಲ್ಬರ್ಗ, ಕೇಂದ್ರಗಳು ಸೇರಿದಂತೆ ರಂಗಾಯಣ­ವನ್ನು ಕರ್ನಾಟಕದ ಮೂಲೆ ಮೂಲೆಗೂ ತಲುಪಿಸಬೇಕೆಂಬುದು ಕಾರಂತರ ಕನಸಾಗಿತ್ತು. ಆದ್ದರಿಂದ, ಬೆಂಗಳೂರಿ­ನಲ್ಲಿಯೂ ರಂಗಾಯಣವನ್ನು ನಿರ್ಮಾಣ ಮಾಡಬೇಕಿದೆ’ ಎಂದು ಹೇಳಿದರು. ‘ನಾಟಕ ಕ್ಷೇತ್ರದಲ್ಲಿ ಸಂಭಾವಿತರು, ಅತೀ ಸೂಕ್ಷ್ಮ ಸ್ವಭಾವದವರಿಗಿಂತ, ಚೂಟಿ, ತುಂಟರು, ಕಿಡಿಗೇಡಿಗಳಿಂದ ನಾಟಕಕ್ಕೆ ಜೀವ ತುಂಬಬಹುದು. ಅಂತಹವರು ಮೈಚಳಿ ಬಿಟ್ಟು ನಟಿಸು­ತ್ತಾರೆ. ನಾಟಕ ಕ್ಷೇತ್ರಕ್ಕೆ ಅಂತಹವರ ಅಗತ್ಯವಿದೆ’ ಎಂದರು.

‘ಇಂದಿನ ಕನ್ನಡ ಸಿನಿಮಾಗಳಲ್ಲಿ ಕನ್ನಡದ ಅಸ್ಮಿತೆಯೇ ಇಲ್ಲದಂತಾಗಿದೆ. ಸಿನಿಮಾಗಳಲ್ಲಿ ನಿರ್ದೇಶಕ ಮುಖ್ಯನಲ್ಲ. ನಟ ಮಾತ್ರ ಮುಖ್ಯವಾಗುತ್ತಾನೆ. ಆದರೆ, ನಾಟಕಗಳಲ್ಲಿ ನಿರ್ದೇಶಕ ಮತ್ತು ನಟ ಇಬ್ಬರೂ ಮುಖ್ಯರಾಗುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.