ADVERTISEMENT

ಚಾಕೊಲೇಟ್ ತಿಂದ 35 ಶಾಲಾ ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST

ಮೈಸೂರು: ನಗರದ ಸಿಎಫ್‌ಟಿಆರ್‌ಐ ಶಾಲೆಯಲ್ಲಿ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿನಿ ನೀಡಿದ ಚಾಕೊಲೇಟ್ ತಿಂದ 35  ಶಾಲಾ ಮಕ್ಕಳು ವಾಂತಿ, ಹೊಟ್ಟೆನೋವಿನಿಂದ ಬಳಲಿ ಅಸ್ವಸ್ಥಗೊಂಡ ಘಟನೆ ಗುರುವಾರ ನಡೆಯಿತು. ಕೂಡಲೇ ಮಕ್ಕಳನ್ನು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಯಿತು. 5ನೇ ತರಗತಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿ ಶ್ವೇತಾ ಬೆಳಿಗ್ಗೆ ಮೊದಲನೇ ತರಗತಿ ಆರಂಭವಾಗುವ ಮುನ್ನ ಬಟರ್ ಫ್ಲೈ ಚಾಕೊಲೇಟ್‌ಗಳನ್ನು ಹಂಚಿದಳು. ಇದನ್ನು ತಿಂದ ಅರ್ಧ ತಾಸಿನ ಬಳಿಕ ಕೆಲ ಮಕ್ಕಳು ವಾಂತಿ ಮಾಡಿಕೊಂಡರೆ ಮತ್ತೆ ಕೆಲವರು ಹೊಟ್ಟೆ ನೋವಿನಿಂದ ಬಳಲಿದರು.

ಕೂಡಲೇ ಶಾಲೆಯ ಆಡಳಿತ ಮಂಡಳಿಯವರು ಮಕ್ಕಳನ್ನು ಶಾಲಾ ಬಸ್‌ನಲ್ಲಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರು. ಅಭಿಷೇಕ್, ರೋಷನ್, ರಾಹುಲ್, ಹರ್ಷಿತ, ಪ್ರೇಕ್ಷಾ ಎಂಬ ಮಕ್ಕಳು ತೀರಾ ಅಸ್ವಸ್ಥಗೊಂಡಿದ್ದರು. ಈ ಪೈಕಿ ಹರ್ಷಿತ, ಪ್ರೇಕ್ಷಾ ಮತ್ತು ಅಭಿಷೇಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಮಕ್ಕಳು ಚೇತರಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಶಾಲೆಗೆ ಕರೆದೊಯ್ಯಲಾಯಿತು. 

ಶ್ವೇತಾ ಕೊಟ್ಟ ಚಾಕೊಲೇಟನ್ನು ಬಹುತೇಕ ಮಕ್ಕಳು ಊಟದ ನಂತರ ತಿನ್ನೋಣವೆಂದು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಹಾಗಾಗಿ ಹೆಚ್ಚಿನ ಮಕ್ಕಳು ಅಸ್ವಸ್ಥರಾಗುವುದು ತಪ್ಪಿತು. ಅವಧಿ ಮೀರಿದ ಚಾಕೊಲೇಟ್  ತಿಂದಿದ್ದೇ ಮಕ್ಕಳು ಅಸ್ವಸ್ಥರಾಗಲು ಕಾರಣ ಎಂದು ಹೇಳಲಾಗಿದೆ. ಸಿಎಫ್‌ಟಿಆರ್‌ಐ ಆಡಳಿತ ಮಂಡಳಿ ಸದಸ್ಯರು, ಪಾಲಿಕೆ ಸದಸ್ಯ ಎಂ.ಜೆ.ರವಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದರು. ಮಕ್ಕಳು ಅಸ್ವಸ್ಥರಾಗಲು ಕಾರಣವಾದ ಚಾಕೊಲೇಟ್ ಅವಧಿ ಮೀರಿತ್ತೆ ಎಂಬುದರ ಬಗ್ಗೆ ತನಿಖೆ ಮಾಡಲು ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಲಾಗುವುದು ಎಂದು ಪಾಲಿಕೆ ಸದಸ್ಯ ರವಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.