ADVERTISEMENT

ಚಾಮುಂಡೇಶ್ವರಿ ಕ್ಷೇತ್ರದ ಸುತ್ತ ‘ರಾಜಕೀಯ ಬೆಸುಗೆ’

ಅಡಗೂರು ಎಚ್‌. ವಿಶ್ವನಾಥ್‌, ಜಿ.ಟಿ.ದೇವೇಗೌಡ ನಡುವೆ ಒಗ್ಗಟ್ಟು; ಗೊಂದಲದಲ್ಲಿ ವಿಜಯಶಂಕರ್

ಕೆ.ಜೆ.ಮರಿಯಪ್ಪ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಚಾಮುಂಡೇಶ್ವರಿ ಕ್ಷೇತ್ರದ ಸುತ್ತ ‘ರಾಜಕೀಯ ಬೆಸುಗೆ’
ಚಾಮುಂಡೇಶ್ವರಿ ಕ್ಷೇತ್ರದ ಸುತ್ತ ‘ರಾಜಕೀಯ ಬೆಸುಗೆ’   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿದ ನಂತರ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಪಡೆದುಕೊಂಡಿವೆ.

ಈಗ ಇಡೀ ಜಿಲ್ಲೆಯ ರಾಜಕಾರಣ ಚಾಮುಂಡೇಶ್ವರಿ ಕ್ಷೇತ್ರದ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಈ ಕ್ಷೇತ್ರವನ್ನೇ ಕೇಂದ್ರವನ್ನಾಗಿ ಇಟ್ಟುಕೊಂಡು ರಾಜಕಾರಣದ ಲೆಕ್ಕಾಚಾರಗಳು ನಡೆದಿವೆ. ‘ಶತ್ರುವಿನ ಶತ್ರು ಮಿತ್ರ’ ಎಂಬಂತೆ ಸಿದ್ದರಾಮಯ್ಯ ಅವರ ವಿರೋಧಿಗಳು ಒಗ್ಗೂಡುತ್ತಿರುವುದು ಇತ್ತೀಚಿನ ಹೊಸ ರಾಜಕೀಯ ಬೆಳವಣಿಗೆ. ಚಾಮುಂಡೇಶ್ವರಿ ಕ್ಷೇತ್ರ ಪ್ರತಿನಿಧಿಸುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಕಾಂಗ್ರೆಸ್ ತೊರೆದು ಆ ಪಕ್ಷ ಸೇರಿರುವ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್, ಕಾಂಗ್ರೆಸ್‌ನಿಂದ ಹೊರಹೋಗಿ ಬಿಜೆಪಿ ಸೇರಿರುವ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಒಟ್ಟಾಗಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದಾಗಿ ತೊಡೆತಟ್ಟಿದ್ದಾರೆ.

ಆರಂಭಿಕ ಹಂತವಾಗಿ ಚಾಮುಂಡೇಶ್ವರಿ ಕ್ಷೇತ್ರ ಪ್ರತಿನಿಧಿಸುತ್ತಿರುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನವೂ ನಡೆಯಿತು. ಜಿಲ್ಲೆಯಲ್ಲಿನ ಜೆಡಿಎಸ್ ಬೆಳವಣಿಗೆಗಳಿಂದ ಬೇಸರಗೊಂಡಿದ್ದ ಗೌಡರು ಕೂಡ ಪಕ್ಷ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು. ದೇವೇಗೌಡ ಕಾಂಗ್ರೆಸ್ ಸೇರಿದರೆ ಸಿದ್ದರಾಮಯ್ಯ ಗೆಲುವಿಗೆ ಸಹಕಾರಿಯಾಗುತ್ತದೆ. ಗೌಡರ ಮೂಲಕ ಒಕ್ಕಲಿಗರ ಮತಗಳು ಕಾಂಗ್ರೆಸ್‌ಗೆ ಬಂದರೆ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವವರೇ ಇರುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ADVERTISEMENT

ವಿಶ್ವನಾಥ್ ಜೆಡಿಎಸ್ ಸೇರಿದ ನಂತರ ದೇವೇಗೌಡ ಅವರು ಪಕ್ಷದಲ್ಲಿ ಅಂತರ ಕಾಯ್ದುಕೊಂಡಿದ್ದರು. ವಿಶ್ವನಾಥ್ ಅವರಿಗೆ ಹುಣಸೂರು ಕ್ಷೇತ್ರ
ದಲ್ಲಿ ಟಿಕೆಟ್ ನೀಡಿದರೆ ತಮ್ಮ ಮಗ ಜಿ.ಡಿ.ಹರೀಶ್‌ಗೆ ಅವಕಾಶ ತಪ್ಪಿ ಹೋಗಲಿದೆ. ಜತೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎದುರು ಗೆಲುವು ಕಷ್ಟಕರವಾದರೆ ಮುಂದೆ ರಾಜಕಾರಣದಲ್ಲಿ ಅವಕಾಶಗಳೇ ಕೈತಪ್ಪುಬಹುದು ಎಂಬ ಆತಂಕದಲ್ಲಿದ್ದರು. ಕೆಲ ಸಮಾರಂಭಗಳಲ್ಲಿ ಮುಖ್ಯಮಂತ್ರಿಯನ್ನು ಹೊಗಳಿದ್ದೂ ಉಂಟು. ಈ ಎಲ್ಲಾ ಕಾರಣದಿಂದ ಸಿದ್ದರಾಮಯ್ಯ ಜತೆ ಕೈಜೋಡಿಸಬಹುದು ಎಂದು ಹೇಳಲಾಗುತಿತ್ತು. ಈ ಕ್ಷೇತ್ರದಲ್ಲಿ ಈಚೆಗೆ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಬಿಜೆಪಿ, ಜೆಡಿಎಸ್‌ ವಿರುದ್ಧ ಹರಿಹಾಯ್ದಿದ್ದ ಸಿದ್ದರಾಮಯ್ಯ ಅವರು ಅಪ್ಪಿತಪ್ಪಿಯೂ ಜಿ.ಟಿ.ದೇವೇಗೌಡ ಹೆಸರು ಪ್ರಸ್ತಾಪಿಸಿರಲಿಲ್ಲ.

ಆದರೆ, ದಿಢೀರ್ ಬೆಳವಣಿಗೆಯಲ್ಲಿ ಜಿ.ಟಿ.ದೇವೇಗೌಡ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟು ದಿನ ಅಂತರ ಕಾಯ್ದುಕೊಂಡಿದ್ದ ಅವರೀಗ ಎಚ್.ವಿಶ್ವನಾಥ್ ಜತೆ ಒಡನಾಟ ಬೆಳೆಸಿಕೊಂಡಿದ್ದಾರೆ. ಭಿನ್ನಮತವಿಲ್ಲ ಎಂದು ತೋರಿಸಿಕೊಳ್ಳಲು ಜೆಡಿಎಸ್ ಶಾಸಕರು ಒಟ್ಟಾಗಿ ವಿಶ್ವನಾಥ್‌ ಜತೆಗೂಡಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಒಗ್ಗಟ್ಟು ಪ್ರದರ್ಶಿಸಿದ ನಂತರದ ಬೆಳವಣಿಗೆಯಲ್ಲಿ ಎಲ್ಲರೂ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಹೇಳುತ್ತಿದ್ದಾರೆ. ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್ ಅವರನ್ನು ಜೆಡಿಎಸ್‌ ಮುಖಂಡರು ಭೇಟಿ ಮಾಡಿ ಚರ್ಚಿಸಿದ್ದಾರೆ. ಪಕ್ಷ ಯಾವುದೇ ಇರಲಿ ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ.

ವಿಜಯಶಂಕ್‌ ತೊಳಲಾಟ

ವಿಶ್ವನಾಥ್ ಅವರು ಕಾಂಗ್ರೆಸ್ ತೊರೆದ ನಂತರ ಆ ಸ್ಥಾನ ತುಂಬಲು ಕುರುಬ ಸಮುದಾಯದ ಮತ್ತೊಬ್ಬ ನಾಯಕ ಬಿಜೆಪಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ಆರಂಭವಾಗಿದೆ. ‘ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಟಿಕೆಟ್ ನೀಡುವುದನ್ನು ಪಕ್ಷದ ಮುಖಂಡರು ಖಚಿತ ಪಡಿಸಬೇಕು. ಆಗಮಾತ್ರ ಪಕ್ಷದಲ್ಲಿ ಉಳಿಯುತ್ತೇನೆ. ಬೇಡಿಕೆ ಈಡೇರದಿದ್ದರೆ ಬಿಜೆಪಿ ತೊರೆಯುವುದಾಗಿ’ ಅವರು ಹೇಳುತ್ತಿದ್ದಾರೆ. ಒಂದು ಹಂತದವರೆಗೆ ಬಿಜೆಪಿಯಿಂದ ಮನವೊಲಿಸುವ ಕೆಲಸ ನಡೆದಿತ್ತು. ಪಿರಿಯಾಪಟ್ಟಣದಲ್ಲಿ ಅವರಿಗೆ ಟಿಕೆಟ್ ಕೊಟ್ಟರೆ ಗೆಲುವು ಕಷ್ಟಕರವಾಗಲಿದೆ. ಒಂದು ವೇಳೆ ಪಕ್ಷ ಬಿಡುವುದಾದರೆ ತೊಂದರೆಯಿಲ್ಲ ಎಂದು ರಾಜ್ಯಮಟ್ಟದ ನಾಯಕರು ಜಿಲ್ಲೆಯ ಮುಖಂಡರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಹೀಗಾಗಿ, ವಿಜಯಶಂಕರ್‌ ಗೊಂದಲದಲ್ಲಿ ಸಿಲುಕಿದ್ದು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಿಂದ ಶಾಸಕರಾಗಿ ನಂತರ ಬಿಜೆಪಿ ಸೇರಿದ್ದ ಮಾಜಿ ಶಾಸಕ ಚಿಕ್ಕಣ್ಣ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಸೇರುವ ಬಗ್ಗೆ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ್ದಾರೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಚಿವ ಎಸ್.ಎ.ರಾಮದಾಸ್ ಹಾಗೂ ಎಚ್.ವಿ.ರಾಜೀವ್ ನಡುವೆ ಟಿಕೆಟ್‌ಗಾಗಿ ಸಮರ ಆರಂಭವಾಗಿದೆ. ಕ್ಷೇತ್ರದ ಹೊರಗಿನವರಿಗೆ ಅವಕಾಶ ನೀಡಲು ಪಕ್ಷದ ಮುಖಂಡರು ಮುಂದಾಗಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೂ ಈ ಇಬ್ಬರು ನಾಯಕರ ನಡುವೆ ಪರೋಕ್ಷವಾಗಿ ವಾಕ್ಸಮರ ನಡೆದಿದೆ. ರಾಮದಾಸ್‌ ಅವರು ಒಂದಿಷ್ಟು ದಿನ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಚಾಮರಾಜ ಕ್ಷೇತ್ರದಲ್ಲೂ ಗೊಂದಲ ಮೂಡಿದೆ. ಒಟ್ಟಾರೆ ಬಿಜೆಪಿ ಪಾಳಯದಲ್ಲೂ ಚುನಾವಣೆ ಸಮೀಪಿಸಿದಂತೆ ಗೊಂದಲಗಳು ಹೆಚ್ಚಾಗುತ್ತಿವೆ.

ಮುಖ್ಯಾಂಶಗಳು

* ಒಂದುಗೂಡಿದ ವಿಶ್ವನಾಥ್‌–ಜಿ.ಟಿ.ದೇವೇಗೌಡ

* ವಿ.ಶ್ರೀನಿವಾಸಪ್ರಸಾದ್‌ ಭೇಟಿ ಮಾಡಿ ಚರ್ಚೆ

* ಕೃಷ್ಣರಾಜ ಕ್ಷೇತ್ರದಲ್ಲೂ ಟಿಕೆಟ್‌ಗಾಗಿ ಕಸರತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.