ADVERTISEMENT

ಚಿಣ್ಣರ ಶ್ರವಣದೋಷ ನಿವಾರಣೆಗೆ ಪಣ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 19:30 IST
Last Updated 6 ಜೂನ್ 2017, 19:30 IST
ಫಲಾನುಭವಿ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ, ಶಾಸಕ ದಿನೇಶ್‌ ಗುಂಡೂರಾವ್‌ ಕಿಟ್‌ಗಳನ್ನು ವಿತರಿಸಿದರು. ಬಿಬಿಎಂಪಿ ಸದಸ್ಯ ಆರ್‌.ಎಸ್‌. ಸತ್ಯನಾರಾಯಣ, ಸಚಿವ ಕೆ.ಆರ್‌. ರಮೇಶ್‌ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ್‌ ಜಿ. ಜಾಧವ, ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶಕ ಡಾ.ಪಿ.ಎಲ್‌. ನಟರಾಜ್‌ ಇದ್ದಾರೆ  –ಪ್ರಜಾವಾಣಿ ಚಿತ್ರ
ಫಲಾನುಭವಿ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ, ಶಾಸಕ ದಿನೇಶ್‌ ಗುಂಡೂರಾವ್‌ ಕಿಟ್‌ಗಳನ್ನು ವಿತರಿಸಿದರು. ಬಿಬಿಎಂಪಿ ಸದಸ್ಯ ಆರ್‌.ಎಸ್‌. ಸತ್ಯನಾರಾಯಣ, ಸಚಿವ ಕೆ.ಆರ್‌. ರಮೇಶ್‌ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ್‌ ಜಿ. ಜಾಧವ, ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶಕ ಡಾ.ಪಿ.ಎಲ್‌. ನಟರಾಜ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗಂಭೀರ ಶ್ರವಣದೋಷ ಹೊಂದಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ‘ಕಾಕ್ಲಿಯರ್‌ ಇಂಪ್ಲಾಂಟ್‌’ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾರಿಗೊಳಿಸಿದೆ.

8 ತಿಂಗಳಿಂದ 6 ವರ್ಷದೊಳಗಿನ ಮಕ್ಕಳು ಇದರ ಫಲಾನುಭವಿಗಳು. ಶ್ರವಣೇಂದ್ರಿಯ ನರವ್ಯೂಹದ ಸಂವೇ­ದನೆಯಿಲ್ಲದ, ಶಬ್ದಗ್ರಹಣ ಶಕ್ತಿಯಿಲ್ಲದ ಮಕ್ಕಳಿಗೆ ಈ ಚಿಕಿತ್ಸೆ ನೀಡಲಾಗುತ್ತದೆ.

ನಗರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಅವರು 10 ಫಲಾನುಭವಿಗಳಿಗೆ ಕಿಟ್‌ ವಿತರಿಸಿದರು.

ADVERTISEMENT

2011ರ ಜನಗಣತಿಯ ಪ್ರಕಾರ 6 ವರ್ಷದೊಳಗಿನ 1,939 ಮಕ್ಕಳು ಶ್ರವಣದೋಷ ಹೊಂದಿದ್ದಾರೆ. ಹೆಚ್ಚಿನ ಮಕ್ಕಳು ಹುಟ್ಟುತ್ತಲೇ ಈ ಸಮಸ್ಯೆ ಹೊಂದಿದ್ದರು. ಗರ್ಭಿಣಿಗೆ ಗರ್ಭಾಶಯ ಸೋಂಕು ತಗಲುವುದರಿಂದ  ಭ್ರೂಣಾವಸ್ಥೆಯಲ್ಲೇ ಶ್ರವಣದೋಷ ಕಾಣಿಸಿಕೊಳ್ಳುತ್ತದೆ. ಇಂತಹ ಮಕ್ಕಳನ್ನು ಸೂಕ್ತ ಸಮಯದಲ್ಲಿ ತಪಾಸಣೆ ನಡೆಸಿ ಶ್ರವಣಯಂತ್ರ ಅಳವಡಿಸಬಹುದು.

ಆ ಬಳಿಕವೂ ಸಮಸ್ಯೆ ಪರಿಹಾರ ಆಗದಿದ್ದರೆ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಕಾಕ್ಲಿಯಾರ್‌ ಇಂಪ್ಲಾಂಟ್‌ ಚಿಕ್ಕ ಹಾಗೂ ಸಂಕೀರ್ಣ ಎಲೆಕ್ಟ್ರಾನಿಕ್‌ ಉಪಕರಣ. ಇದನ್ನು ಕಿವಿಯ ಹಿಂಭಾಗದಲ್ಲಿ ಅಳವಡಿಸುವುದರಿಂದ ಕಣ್ಣಿಗೆ ಗೋಚರಿಸುತ್ತದೆ. ಎರಡನೇ ಹಂತದಲ್ಲಿ ಚರ್ಮದಡಿ ಶಸ್ತ್ರಚಿಕಿತ್ಸೆ ನಡೆಸಿ ಜೋಡಿಸಲಾಗುತ್ತದೆ.

ಈ ಯೋಜನೆಯಡಿ ಮಕ್ಕಳಿಗೆ ಶಸ್ತ್ರಚಿಕಿತ್ಸೆ, ಕಾಕ್ಲಿಯಾರ್‌ ಇಂಪ್ಲಾಂಟ್‌ ಅಳವಡಿಕೆ ಹಾಗೂ ಶಸ್ತ್ರಚಿಕಿತ್ಸೆಯ ನಂತರ ಒಂದು ವರ್ಷದ ವರೆಗೆ ಪುನರ್ವಸತಿ ಸೌಲಭ್ಯ ನೀಡಲಾಗುತ್ತದೆ. ಪ್ಯಾಕೇಜ್‌ನ ಒಟ್ಟು ಮೊತ್ತ ₹5.1 ಲಕ್ಷ. ಇದರ ವೆಚ್ಚವನ್ನು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್‌.ಬಿ.ಎಸ್‌.ಕೆ) ಭರಿಸಲಾಗುತ್ತದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ವತಿಯಿಂದ ಅನುಷ್ಠಾನಗೊಳಿಸಲಾಗುತ್ತದೆ.

ಆರ್‌.ಬಿ.ಎಸ್‌.ಕೆ. ತಂಡದಿಂದ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಈ ತಂಡಗಳು ಅಂಗನವಾಡಿ, ಸರ್ಕಾರಿ, ಅನುದಾನಿತ ಹಾಗೂ ಸರ್ಕಾರಿ ವಸತಿಶಾಲೆಗಳ ಮಕ್ಕಳ ತಪಾಸಣೆ ನಡೆಸುತ್ತವೆ. ಬಳಿಕ ಮುಂದಿನ ಹಂತದ ಪರಿಶೀಲನೆಗಾಗಿ  ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಜಿಲ್ಲಾ ಕಾಕ್ಲಿಯಾರ್‌ ಇಂಪ್ಲಾಂಟ್‌ ಸಮಿತಿಯು ಈ ಮಕ್ಕಳನ್ನು ತಪಾಸಣೆ ನಡೆಸುತ್ತದೆ. ನಂತರ ನೋಂದಾಯಿತ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ಡಯಾಲಿಸಿಸ್‌ ಘಟಕಕ್ಕೆ ಶಂಕುಸ್ಥಾಪನೆ: ಇದೇ ಸಂದರ್ಭದಲ್ಲಿ ಆಸ್ಪತ್ರೆ ಆವರಣದಲ್ಲಿ 25 ಹಾಸಿಗೆಗಳ ಡಯಾಲಿಸಿಸ್‌ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಕೆ.ಆರ್‌. ರಮೇಶ್‌ ಕುಮಾರ್‌ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಾಡಲು ₹1,300 ಪಡೆಯಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ₹400ಕ್ಕೆ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ  ಉಚಿತವಾಗಿ ಡಯಾಲಿಸಿಸ್‌ ಸೇವೆ ಒದಗಿಸುತ್ತೇವೆ’ ಎಂದರು.

‘ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸುಲಿಗೆ ಮಾಡುತ್ತಿವೆ. ಅವುಗಳ ಚಟುವಟಿಕೆಗೆ ನಿಯಂತ್ರಣ ಹೇರಲು 15 ದಿನಗಳಲ್ಲಿ ನಿಯಮ ಜಾರಿಗೆ ತರುತ್ತೇವೆ’ ಎಂದು ಅವರು ಪ್ರಕಟಿಸಿದರು.

ಅಂಕಿ ಅಂಶ

1,939
ಶ್ರವಣದೋಷ ಹೊಂದಿರುವ 6 ವರ್ಷದೊಳಗಿನ ಮಕ್ಕಳು

₹5.1ಲಕ್ಷ
ಪ್ರತಿ ಮಗುವಿನ ಚಿಕಿತ್ಸೆಗೆ ಇಲಾಖೆ ಭರಿಸುವ ವೆಚ್ಚ

ನೋಂದಾಯಿತ ಆಸ್ಪತ್ರೆಗಳು
* ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಕೆ.ಸಿ. ಜನರಲ್‌ ಆಸ್ಪತ್ರೆ
* ಮಂಗಳೂರಿನ ವೆನ್ಲಾಕ್ ಆಸ್ಪತ್ರೆ
* ಧಾರವಾಡದ ವೈದ್ಯಕೀಯ ವಿಜ್ಞಾನ ಸಂಸ್ಥೆ
* ರಾಯಚೂರಿನ ವೈದ್ಯಕೀಯ ವಿಜ್ಞಾನ ಸಂಸ್ಥೆ

ಎ.ವಿ. ಥೆರಪಿ ಕೇಂದ್ರಗಳು

* ಧಾರವಾಡದ ಜೆಎಸ್‌ಎಸ್‌ ಆಸ್ಪತ್ರೆ
* ಮಂಗಳೂರಿನ ಕೆಎಂಸಿ ಆಸ್ಪತ್ರೆ
* ಮೈಸೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಆಲ್‌ ಇಂಡಿಯಾ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌
* ಬೆಂಗಳೂರಿನ ಚಂದ್ರಶೇಖರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌, ಮಾನಸ ಕಾಕ್ಲಿಯಾರ್ ಇಂಪ್ಲಾಂಟ್‌ ಆ್ಯಂಡ್‌ ಇಎನ್‌ಟಿ ಕೇಂದ್ರ
* ರಾಯಚೂರಿನ ವೈದ್ಯಕೀಯ ವಿಜ್ಞಾನ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.