ADVERTISEMENT

‘ಚಿನ್ನ’ದ ಕುಟುಂಬಕ್ಕೆ ಪದಕಗಳ ಕಿರೀಟ

ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ಸಿ.ಎನ್‌.ಶಾಂಭವಿ
ಸಿ.ಎನ್‌.ಶಾಂಭವಿ   

ಮೈಸೂರು: ಈ ರೈತ ದಂಪತಿಯ ಮೂವರು ಮಕ್ಕಳೂ ಪದವೀಧರರು. ಅವರೆಲ್ಲರೂ ಅಧ್ಯಯನದುದ್ದಕ್ಕೂ ಚಿನ್ನದ ಪದಕ ಗಳಿಸಿಕೊಂಡೇ ಸಾಧನೆ ಮೆರೆದವರು. ಎರಡನೇ ಪುತ್ರಿ ಸಿ.ಎನ್‌.ಶಾಂಭವಿ ಈಗ 13 ಚಿನ್ನದ ಪದಕ, 4 ನಗದು ಬಹುಮಾನ ಪಡೆಯುವ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ‘ಚಿನ್ನ’ದ ಹುಡುಗಿಯಾಗಿ ಹೊರಹೊಮ್ಮಿದರು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದ ನಾಗರಾಜು, ರಾಜಮ್ಮ ದಂಪತಿ ಪುತ್ರಿ. ಸ್ನಾತಕೋತ್ತರ ಪದವಿಯ ರಸಾಯನ ವಿಜ್ಞಾನ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಬಿಎಸ್‌ಸಿ ಪದವಿಯಲ್ಲೂ 3 ಚಿನ್ನದ ಪದಕ, 3 ನಗದು ಬಹುಮಾನ ಗೆದ್ದುಕೊಂಡಿದ್ದರು.

‘ಮದ್ರಾಸ್‌ ಐಐಟಿ ಅಥವಾ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಉನ್ನತ ಸಂಶೋಧನೆ ನಡೆಸಬೇಕು ಎಂಬ ಆಸೆ ಇದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸಿ, ವಿಜ್ಞಾನ ಓದುವಂತೆ ಪ್ರೇರೇಪಿಸುವ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಮಾದರಿ ಆಗಬೇಕು ಎಂದಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಮಕ್ಕಳ ಓದಿಗೆ ಪ್ರೋತ್ಸಾಹ ಮಾತ್ರ ನಮ್ಮದು. ಸಾಧನೆ ಅವರದ್ದೇ’ ಎಂದು ಮಕ್ಕಳ ಸಾಧನೆ ಬಗ್ಗೆ ನಾಗರಾಜು ಖುಷಿಪಟ್ಟರು.

ಹಳ್ಳಿ ಪ್ರತಿಭೆಗೆ ಒಲಿದ ಚಿನ್ನ: ಮೈಸೂರು ವಿ.ವಿ ಚಾಮರಾಜನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಪದವಿ ಅಧ್ಯಯನ ಮಾಡಿದ ಕೆ.ಜಿ.ವನಜಾ 8 ಚಿನ್ನದ ಪದಕ, 4 ನಗದು ಬಹುಮಾನ ಪಡೆದಿದ್ದಾರೆ. ಮುಂದೆ ಕೆಎಎಸ್‌, ಐಎಎಸ್‌ ಪರೀಕ್ಷೆ ಬರೆಯುವ ಆಸೆ ಹೊತ್ತಿದ್ದಾರೆ.

‘ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳು ಈಗಲೂ ಕಡಿಮೆಯಿವೆ. ಅವರಿಗೆ ಬದುಕು ಕಟ್ಟಿಕೊಡಲು ಸೌಲಭ್ಯಗಳನ್ನು ಕೊಡಬೇಕು. ನಾನು ಅಧಿಕಾರಿಯಾದರೆ ಇದನ್ನು ಸಾಧ್ಯವಾಗಿಸುವ ಕನಸು ಕಟ್ಟಿದ್ದೇನೆ’ ಎಂದು ಅವರು ಹೇಳುತ್ತಾರೆ.

ಪದವಿಯಲ್ಲಿ 9 ಚಿನ್ನದ ಪದಕ, 8 ನಗದು ಬಹುಮಾನ ಪಡೆದ ಆರ್‌.ಧನಲಕ್ಷ್ಮಿ ಅವರು ಐಇಎಸ್ (ಇಂಡಿಯನ್‌ ಎಕನಾಮಿಕ್‌ ಸರ್ವಿಸ್‌) ಮಾಡಬೇಕು ಎನ್ನುತ್ತಾರೆ. ಪ್ರಸ್ತುತ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಡಿ.ಪಿ.ಮಾನಸ ಬಿಎಸ್‌ಸಿಯಲ್ಲಿ 7 ಚಿನ್ನದ ಪದಕ, 9 ನಗದು ಬಹುಮಾನ ಪಡೆದಿದ್ದಾರೆ.

‘ಸಮಾನತೆ ಇಲ್ಲದ ಪ್ರಗತಿ ನಿಷ್ಪ್ರಯೋಜಕ’
ಮೈಸೂರು: ‘ಸಮಾನತೆ ಇಲ್ಲದ ಅಭಿವೃದ್ಧಿಯಿಂದ ದೇಶಕ್ಕೆ ಪ್ರಯೋಜನವಿಲ್ಲ’ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್‌.ಸಂತೋಷ್ ಹೆಗ್ಡೆ ವಿಷಾದಿಸಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ನಡೆದ 98ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.‘ಬಹುತ್ವದ ಆಧಾರದ ಮೇಲೆ ನಮ್ಮ ಸಂವಿಧಾನ ರೂಪುಗೊಂಡು 67 ವರ್ಷಗಳೇ ಮುಗಿದಿವೆ. ಆದರೆ, ಈಗ ನಾವು ನಮ್ಮ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ನ್ಯಾಯ ದೊರಕಿದೆ ಎನ್ನಬಹುದೇ? ನಂಬಿಕೆ, ಧಾರ್ಮಿಕತೆ ಮತ್ತು ಆರಾಧನೆಯಲ್ಲಿ ನಮಗೆ ಸ್ವಾತಂತ್ರ್ಯವಿದೆಯೇ? ನಮ್ಮೆಲ್ಲರ ಸ್ಥಾನಮಾನಗಳಲ್ಲಿ, ಅವಕಾಶಗಳಲ್ಲಿ ಸಮಾನತೆಯಿದೆಯೇ?– ಈ ಪ್ರಶ್ನೆಗಳಿಗೆ ಉತ್ತರ ‘ಇಲ್ಲ’ ಎನ್ನುವುದಾದರೆ ದೇಶ ಸಾಧಿಸಿರುವ ಬೆಳವಣಿಗೆಯಿಂದ ಏನು ಪ್ರಯೋಜನವಾದಂತಾಯಿತು?‘ ಎಂದು ಅವರು ಪ್ರಶ್ನಿಸಿದರು.

ಈ ಬಾರಿ ಗೌರವ ಡಾಕ್ಟರೇಟ್‌ ಇಲ್ಲ
ಈ ಬಾರಿಯ ಘಟಿಕೋತ್ಸವದಲ್ಲಿ ಯಾರಿಗೂ ಗೌರವ ಡಾಕ್ಟರೇಟ್‌ ನೀಡಿಲ್ಲ.

ವಿ.ವಿ.ಯಿಂದ ಮೂವರ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿಂದ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ಯಾರಿಗೂ ಗೌರವ ಡಾಕ್ಟರೇಟ್ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಗೈರುಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.