ADVERTISEMENT

ಚಿಮ್ಮನಕಟ್ಟಿ ಮನೆ ಎದುರು ಮಹಿಳೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:34 IST
Last Updated 22 ಮಾರ್ಚ್ 2018, 19:34 IST
ಬಾದಾಮಿಯ ಸರ್ಕಾರಿ ಆಸ್ಪತ್ರೆಯ ಎದುರು ಮೃತ ಶಾಂತವ್ವ ಸಂಬಂಧಿಕರು ಗುರುವಾರ ಪ್ರತಿಭಟನೆ ನಡೆಸಿದರು
ಬಾದಾಮಿಯ ಸರ್ಕಾರಿ ಆಸ್ಪತ್ರೆಯ ಎದುರು ಮೃತ ಶಾಂತವ್ವ ಸಂಬಂಧಿಕರು ಗುರುವಾರ ಪ್ರತಿಭಟನೆ ನಡೆಸಿದರು   

ಬಾದಾಮಿ: ಗ್ರಾಮ ಸಹಾಯಕನ ಕೆಲಸ ತನ್ನ ಮಗನಿಗೆ ಕೊಡದೇ ಶಾಸಕರ ಸಂಬಂಧಿಗೆ ಕೊಡಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗುರುವಾರ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮನೆಯ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದರಿಂದ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ತಾಲ್ಲೂಕಿನ ಯರಗೊಪ್ಪ ಗ್ರಾಮದ ಶಾಂತವ್ವ ವಾಲಿಕಾರ (46) ಆತ್ಮಹತ್ಯೆ ಮಾಡಿಕೊಂಡವರು.

ಮುತ್ತಲಗೇರಿ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮ ಸಹಾಯಕರಾಗಿದ್ದ ಶಾಂತವ್ವ ಪತಿ ಗೋವಿಂದಪ್ಪ ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಅನುಕಂಪದ ನೌಕರಿಯನ್ನು ಮಗ ಶಂಕರಪ್ಪನಿಗೆ ಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಶಾಸಕರಿಗೂ ಮನವಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ.

ADVERTISEMENT

ಆದರೆ, ಮುತ್ತಲಗೇರಿಯಲ್ಲಿ ವಾಸವಿರುವ ಶಾಸಕರ ಸಂಬಂಧಿಯೊಬ್ಬರಿಗೆ ಇತ್ತೀಚೆಗೆ ನೌಕರಿ ಆದೇಶ ಬಂದಿದೆ. ವಿಚಾರ ತಿಳಿದ ಶಾಂತವ್ವ ಆ ಬಗ್ಗೆ ಕೇಳಲು ಬೆಳಿಗ್ಗೆ ಬಂದಿದ್ದಾರೆ. ಆದರೆ ಶಾಸಕರು ಮನೆಯಲ್ಲಿ ಇಲ್ಲ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಉತ್ತರ ಬಂದಿದೆ. ಇದರಿಂದ ಬೇಸತ್ತ ಶಾಂತವ್ವ ಅಲ್ಲಿಯೇ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಶಾಂತವ್ವ ಸಂಬಂಧಿಕರು ಹಾಗೂ ಯರಗೊಪ್ಪ ಗ್ರಾಮಸ್ಥರು ವಾಲ್ಮೀಕಿ ಸಮಾಜದ ತಾಲ್ಲೂಕು ಘಟಕದ ಹಿರಿಯರ ನೇತೃತ್ವದಲ್ಲಿ ದಿನವಿಡೀ ಪ್ರತಿಭಟನೆ ನಡೆಸಿ, ಪಟ್ಟಣದ ಪ್ರಮುಖ ರಸ್ತೆಗಳನ್ನು ಬಂದ್‌ ಮಾಡಿ ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಶಾಂತವ್ವನ ಸಾವಿಗೆ ಶಾಸಕರ ಪುತ್ರ ಭೀಮಸೇನ ಚಿಮ್ಮನಕಟ್ಟಿ, ತಹಶೀಲ್ದಾರ್‌ ಎಸ್‌.ರವಿಚಂದ್ರ ಕಾರಣ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿದರು. ಈ ವೇಳೆ ಆರೋಪಿಗಳ ಪರವಾಗಿ ರಾಜಿ ಪಂಚಾಯ್ತಿಗೆ ಬಂದ ಬೆಂಬಲಿಗನಿಗೂ ಥಳಿಸಿದ್ದಾರೆ. ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರ ಮನವೊಲಿಸಿದರು. ಸಂಜೆ ಮರಣೋತ್ತರ ಪರೀಕ್ಷೆ ನಡೆಸಿ ಶಾಂತವ್ವನ ಶವ ಊರಿಗೆ ಕಳುಹಿಸಿಕೊಡಲಾಯಿತು.

ಪಾತ್ರ ಇಲ್ಲ: ‘ಈ ವಿಷಯದಲ್ಲಿ ನನ್ನ ಪಾತ್ರ ಇಲ್ಲ. ಚುನಾವಣೆ ಇರುವ ಕಾರಣ ವಿವಾದ ಸೃಷ್ಟಿಸಲಾಗುತ್ತಿದೆ’ ಎಂದು ಚಿಮ್ಮಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.