ADVERTISEMENT

ಚಿಮ್ಮುವ ಕಪ್ಪೆಯ ಹೊಸ ಪ್ರಬೇಧ ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2016, 19:48 IST
Last Updated 25 ಡಿಸೆಂಬರ್ 2016, 19:48 IST
ಚಿಮ್ಮುವ ಕಪ್ಪೆ
ಚಿಮ್ಮುವ ಕಪ್ಪೆ   

ಬೆಂಗಳೂರು: ವಿಜ್ಞಾನಿಗಳು, ಹವ್ಯಾಸಿ ಸಂಶೋಧಕರು, ಪರಿಸರ ಪ್ರೇಮಿಗಳ ಸಂಘಟಿತ ಪ್ರಯತ್ನದಿಂದಾಗಿ ರಾಜ್ಯದ ಕರಾವಳಿ ಪ್ರದೇಶದಲ್ಲಿ ಚಿಮ್ಮುವ ಕಪ್ಪೆಯ ಹೊಸ ಪ್ರಬೇಧ ಪತ್ತೆಯಾಗಿದೆ.

ಸುಮಾರು 11 ಸೆಂಟಿ ಮೀಟರ್‌ನಷ್ಟು ಉದ್ದ  ಬೆಳೆಯುವ ಈ ಕಪ್ಪೆ ಕುಮಟಾ ತಾಲ್ಲೂಕಿನ ಸಾಣಿಕಟ್ಟ ಗ್ರಾಮದಲ್ಲಿ 2015ರ ಜೂನ್‌ ತಿಂಗಳಲ್ಲಿ ಮೊದಲ ಬಾರಿ ಕಂಡುಬಂದಿತ್ತು.ಈ ಕಪ್ಪೆಗೆ ಯೂಫ್ಲಿಕ್ಟಿಸ್‌ ಕರಾವಳಿ (Euphlyctis karaavali) ಎಂದು ನಾಮಕರಣ (ವೈಜ್ಞಾನಿಕ ಹೆಸರು) ಮಾಡಲಾಗಿದೆ.

ಅಶೋಕಾ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕಾಲಜಿ ಆ್ಯಂಡ್‌  ದಿ ಎನ್‌ವಿರಾನ್‌ಮೆಂಟ್‌ (ಏಟ್ರೀ) ಸಂಸ್ಥೆಯಲ್ಲಿ ಪಿಎಚ್‌.ಡಿ ಸಂಶೋಧನೆ ನಡೆಸುತ್ತಿರುವ ಎಚ್‌. ಪ್ರೀತಿ, ದಾಂಡೇಲಿ ಅಣಶಿ ಹುಲಿ ಮೀಸಲು ಪ್ರದೇಶದ ಉಪ ವಲಯ ಅರಣ್ಯಾಧಿಕಾರಿ ಸಿ.ಆರ್‌.ನಾಯ್ಕ್‌, ಪಶ್ಚಿಮ ಘಟ್ಟದ ಕಪ್ಪೆಗಳ ಕುರಿತು ಸಂಶೋಧನೆ ನಡೆಸುತ್ತಿರುವ ನ್ಯಾಷನಲ್‌ ಯೂನಿವರ್ಸಿಟಿ ಆಫ್‌ ಸಿಂಗಪುರದ ಸಂಶೋಧನಾ ವಿದ್ಯಾರ್ಥಿ ಕೆ.ಎಸ್‌.ಶೇಷಾದ್ರಿ, ಸಂಶೋಧನಾ ವಿದ್ಯಾರ್ಥಿಗಳಾದ ರಮಿತ್‌ ಸಿಂಘಾಲ್‌, ಎಂ.ಕೆ.ವಿದಿಶಾ, ಜಿ.ರವಿಕಾಂತ್‌ ಹಾಗೂ  ಸೃಷ್ಟಿ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಟ್ಸ್, ಡಿಸೈನ್‌ ಆ್ಯಂಡ್‌ ಟೆಕ್ನಾಲಜಿಯ ಅಧ್ಯಾಪಕ ಡಾ.ಕೆ.ವಿ.ಗುರುರಾಜ್‌ ಅವರನ್ನೊಳಗೊಂಡ ತಂಡ ಈ ಕಪ್ಪೆಯ ಕುರಿತು ಅಧ್ಯಯನ ನಡೆಸಿ ಇದೊಂದು ಹೊಸ ಪ್ರಬೇಧ ಎಂಬುದನ್ನು ದೃಢಪಡಿಸಿದೆ.

ಈ ಕುರಿತ ಅಧ್ಯಯನ ಪ್ರಬಂಧ ಏಷ್ಯನ್‌ ಹರ್ಪೆಟೋಲಾಜಿಕಲ್‌ ರಿಸರ್ಚ್‌ (ಏಷ್ಯಾ ಕಪ್ಪೆ ಮತ್ತು ಸರೀಸೃಪಗಳ ಸಂಶೋಧನೆ) ನಿಯತಕಾಲಿಕದಲ್ಲಿ ಭಾನುವಾರ ಪ್ರಕಟವಾಗಿದೆ.
ನೀರಿನ ಆಶ್ರಯವಿರುವ ತಾಣಗಳಲ್ಲಿ ಕಂಡು ಬರುವ ಈ ಕಪ್ಪೆಗಳು  ಅಪಾಯವನ್ನು ಗುರುತಿಸಿ ನೀರಿಗೆ  ಹಾರುತ್ತವೆ. ನೀರಿನ ಮೇಲ್ಮೈ ಮೇಲೆ ಜಿಗಿಯುತ್ತಾ ಸಾಗುವ ಸಾಮರ್ಥ್ಯ ಇವುಗಳಿಗೆ ಇರುವುದರಿಂದ ಈ ಗುಂಪಿನ ಕಪ್ಪೆಗಳನ್ನು ಚಿಮ್ಮುವ ಕಪ್ಪೆಗಳು ಎಂದು ಕರೆಯಲಾಗುತ್ತದೆ.  ಸೀಮಿತ ಭೌಗೋಳಿಕ ಪ್ರದೇಶದಲ್ಲಿ  ಕಂಡುಬರುವ  ಈ ಕಪ್ಪೆಗಳು  ಅಪಾಯದಂಚಿನಲ್ಲಿವೆ.  ಈ ಗುಂಪಿನಲ್ಲಿ ಒಟ್ಟು ಏಳು ಪ್ರಬೇಧದ ಕಪ್ಪೆಗಳು ಪತ್ತೆಯಾಗಿವೆ.

ಗುಬ್ಬಿ ಲ್ಯಾಬ್ಸ್‌ನ ಸಂಶೋಧಕರೊಬ್ಬರು ಸಿ.ಆರ್‌.ನಾಯ್ಕ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಆಗ ಅವರು ಗದ್ದೆ ಬದಿಯಲ್ಲಿ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದ  ಧ್ವನಿಯನ್ನು ಸಂಶೋಧಕರಿಗೆ ಕೇಳಿಸಿದರು. ಆ ಧ್ವನಿಯು  ಮಿಂಚುಳ್ಳಿ (ವೈಟ್‌ ಥ್ರೋಟೆಡ್‌ ಕಿಂಗ್‌ಫಿಷರ್‌) ಹಕ್ಕಿಯ ಧ್ವನಿಯನ್ನು ಹೋಲುತ್ತಿತ್ತು.  ಆದರೆ, ಅದು ಕಪ್ಪೆ ಕೂಗುವ ಧ್ವನಿ ಎಂದು ನಾಯ್ಕ್‌ ಹೇಳಿದ್ದರು. 

ಕಪ್ಪೆಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಕೆ.ಎಸ್‌.ಶೇಷಾದ್ರಿ ಅವರಿಗೆ ಈ ಬಗ್ಗೆ ಕುತೂಹಲ ಮೂಡಿತ್ತು. ಅವರು ಈ ಕಪ್ಪೆಯನ್ನು ನೋಡುವ ಸಲುವಾಗಿ ಸಾಣಿಕಟ್ಟಕ್ಕೆ ತೆರಳಿದರು. ಅಲ್ಲಿ ನಾಯ್ಕ್‌ ಅವರ ಜೊತೆ ರಾತ್ರಿ ವೇಳೆ ಗದ್ದೆಗೆ ಭೇಟಿ ನೀಡಿದ್ದರು. ಕೆಲವೇ ತಾಸುಗಳಲ್ಲಿ ಚಿಮ್ಮುವ ಕಪ್ಪೆ ಪತ್ತೆಯಾಗಿತ್ತು.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಜಾತಿಯ ಕಪ್ಪೆಗಳು ಹೆಚ್ಚಾಗಿ ಕಂಡುಬರುತ್ತವೆ. ಕೃಷಿ ಭೂಮಿಯನ್ನು ವಾಣಿಜ್ಯ ಚಟುವಟಿಕೆಗೆ ಬಳಸುತ್ತಿರುವುದು, ಹೆದ್ದಾರಿ ವಿಸ್ತರಣೆ ಮುಂತಾದ ಚಟುವಟಿಕೆಯಿಂದ ಕಪ್ಪೆಗಳ ಸಂತತಿ ವಿನಾಶದ ಅಂಚನ್ನು ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.