ಬೆಳಗಾವಿ: ‘ಚುಟುಕು ಸಾಹಿತ್ಯದ ಹುಟ್ಟು ಹಾಗೂ ಅದರ ಬೆಳವಣಿಗೆ ಕುರಿತು ಅನೇಕ ಗೊಂದಲಗಳು ಉಳಿದುಕೊಂಡಿದ್ದು, ಆ ಕುರಿತು ಸಮಗ್ರ ಚಿಂತನೆ ನಡೆಯಬೇಕಿದೆ’ ಎಂದು ಖ್ಯಾತ ಕವಿ, ಸಾಹಿತಿ ಎಂ. ಅಕ್ಬರ್ ಅಲಿ ಭಾನುವಾರ ಇಲ್ಲಿ ಹೇಳಿದರು.
ಚುಟುಕು ಸಾಹಿತ್ಯ 19ನೇ ರಾಜ್ಯ ಸಮ್ಮೇಳನ ಸಮಾರೋಪ ಭಾಷಣ ಮಾಡಿದ ಅವರು, ‘ಚುಟುಕು ಸಾಹಿತ್ಯಕ್ಕೆ ಮಾನ್ಯತೆ ಇಲ್ಲದ ಕಾರಣಕ್ಕೆ ಅನೇಕ ಹಿರಿಯ ಕವಿಗಳು ಹಾಗೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ಅದೇ ಕಾರಣಕ್ಕೆ ಹನಿಗವನ, ಹೈಕುಗಳು ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದರು. ದಿನಕರ ದೇಸಾಯಿ ಅವರು ಚೌಪದಿ ಹೆಸರಲ್ಲಿ ಸಾಹಿತ್ಯ ರಚನೆ ಮಾಡಿದರು. ಚುಟುಕು ಕವಿ ವಿ.ಜಿ. ಭಟ್ಟರಲ್ಲೂ ಗೊಂದಲ ಇತ್ತು’ ಎಂದು ಅವರು ವಿವರಿಸಿದರು.
‘ಚುಟುಕು ಸಾಹಿತ್ಯ ಸಮಗ್ರವಾಗಿ ಅಭಿವೃದ್ಧಿಗೊಳ್ಳುವ ಅಗತ್ಯವಿದೆ. ಹನಿಗವನ, ಚೌಪದಿಗಳನ್ನೆಲ್ಲ ಒಗ್ಗೂಡಿಸಿಕೊಂಡು ಬೆಳೆಯಬೇಕಿದೆ. ಅಂತಹ ವಾತಾವರಣ ನಿರ್ಮಿಸಬೇಕು’ ಎಂದು ಮನವಿ ಮಾಡಿಕೊಂಡರು.
ದಿನಕರ ದೇಸಾಯಿ ಪ್ರಶಸ್ತಿ: ‘ಹನಿಗವನದ ಮೂಲಕ ಕ್ರಾಂತಿ ಾಡಿದ ದಿವಂಗತ ದಿನಕರ ದೇಸಾಯಿ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸ್ಥಾಪಿಸಬೇಕು, ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕ ಖರೀದಿ ಸಂದರ್ಭದಲ್ಲಿ ತಾರತಮ್ಯ ಮಾಡುತ್ತಿದ್ದು, ಎಲ್ಲ ಸಾಹಿತ್ಯ ಪ್ರಕಾರಕ್ಕೆ ಮಹತ್ವ ನೀಡಬೇಕು’ ಎಂದು 19ನೇ ಚುಟುಕು ಸಾಹಿತ್ಯ ಸಮ್ಮೇಳನ ನಿರ್ಣಯ ಅಂಗೀಕರಿಸಿತು.
ಸಮಾರೋಪ ಸಮಾರಂಭದಲ್ಲಿ ಸಮ್ಮೇಳನ ಅಧ್ಯಕ್ಷ ಡಾ. ಪಂಚಾಕ್ಷರಿ ಹಿರೇಮಠ, ಚುಸಾಪ ರಾಜ್ಯ ಸಂಚಾಲಕ ಡಾ. ಎಂ.ಜಿ.ಆರ್. ಅರಸ, ಜಿನದತ್ತ ದೇಸಾಯಿ, ಎಲ್.ಎಸ್. ಶಾಸ್ತ್ರಿ, ಡಾ. ಬಸವರಾಜ ಜಗಜಂಪಿ, ಡಾ. ಕೆ.ಡಿ. ದೇಶಪಾಂಡೆ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.