ADVERTISEMENT

ಚುನಾವಣಾ ವೆಚ್ಚ ರೂ.180 ಕೋಟಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ಬೆಂಗಳೂರು: ವಿಧಾನಸಭಾ ಚುನಾವಣೆಗೆ ರೂ.175ರಿಂದ ರೂ.180 ಕೋಟಿ ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ ಈಗಾಗಲೇ ರೂ.100 ಕೋಟಿ ಬಿಡುಗಡೆ ಮಾಡಿದೆ ಎಂದು ರಾಜ್ಯದ ಮುಖ್ಯಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ತಿಳಿಸಿದರು.

ಚುನಾವಣೆಗಾಗಿ ಬಜೆಟ್‌ನಲ್ಲಿ ರೂ. 200 ಕೋಟಿ ನಿಗದಿಯಾಗಿದೆ. ಅದಕ್ಕಿಂತ ಹೆಚ್ಚು ಹಣ ಖರ್ಚಾಗುವುದಿಲ್ಲ. ಮತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ರೂ. 2.5 ಲಕ್ಷ ವೆಚ್ಚ ಮಾಡಲಾಗುವುದು ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಲಾಂ ಪ್ರಚಾರ ರಾಯಭಾರಿ: ಚುನಾವಣೆಯ ಮಹತ್ವ, ಹೊಣೆಗಾರಿಕೆ, ಮತದಾನದ ಹಕ್ಕು ಇತ್ಯಾದಿಗಳ ಬಗ್ಗೆ ಜಾಥಾ, ಬೀದಿನಾಟಕ, ಚರ್ಚಾ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುವುದು. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು `ಬ್ರಾಂಡ್ ಅಂಬಾಸಿಡರ್' ಆಗಿ ಬಳಸಿಕೊಳ್ಳಲಾಗುವುದು ಎಂದರು.  

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ, ಕೇಂದ್ರ ಸರ್ಕಾರ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿದೆ ಎಂದು ಬಿಜೆಪಿ ದೂರು ನೀಡಿದೆ. ಈ ವಿಷಯವನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತಂದು ಜಾಹೀರಾತು ತಡೆಯಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆನೇಕಲ್ ಸೇರಿದಂತೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 3.02 ಲಕ್ಷ ಅರ್ಜಿಗಳು ಬಂದಿವೆ. ನಿತ್ಯ 40 ಸಾವಿರ ಅರ್ಜಿಗಳು ಬರುತ್ತಿದ್ದು, ಇದುವರೆಗೆ ರಾಜ್ಯದಲ್ಲಿ ಒಟ್ಟು 6.28 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗ 64.41 ಲಕ್ಷ ಮತದಾರರು ಇದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ 18 ವರ್ಷ ತುಂಬಿದವರ ಪ್ರಮಾಣ ಶೇ 65ರಷ್ಟಿದೆ. ಆದರೆ, ಸದ್ಯ ಮತದಾರರ ಪ್ರಮಾಣ ಶೇ 62ರಷ್ಟಿದೆ. ಒಟ್ಟಾರೆ ಶೇ 65ರಷ್ಟು ಮತದಾರರನ್ನು ನೋಂದಾಯಿಸುವ ಗುರಿ ಇದೆ ಎಂದು ತಿಳಿಸಿದರು.

ಭಾವಚಿತ್ರ ಬದಲಾದರೆ?: ಮತದಾರರ ಬಳಿ ಗುರುತಿನ ಚೀಟಿ ಇದೆ. ಆದರೆ, ಮತದಾರರ ಪಟ್ಟಿಯಲ್ಲಿನ ಭಾವಚಿತ್ರ ಬದಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಝಾ ತಿಳಿಸಿದರು.

ಮತದಾರರ ಪಟ್ಟಿ ಸಿದ್ಧಪಡಿಸು ವಾಗ ಸಿಬ್ಬಂದಿ ಮಾಡುವ ತಪ್ಪು ಗಳಿಂದಾಗಿ ಕೆಲವರ ಭಾವಚಿತ್ರಗಳು ಅದಲು- ಬದಲಾಗಿರುತ್ತವೆ. ಇದಕ್ಕೆ ಸಿಬ್ಬಂದಿ ಹೊಣೆ. ಮತದಾರರಿಗೆ ಏಕೆ ಶಿಕ್ಷೆ? ಮತದಾನದ ಹಕ್ಕು ನಿರಾಕರಿಸುವುದು ಸರಿಯೇ ಎಂದು ಪ್ರಶ್ನಿಸಿದಾಗ, ಇದೊಂದು ಗಂಭೀರ ವಿಷಯ. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT