ADVERTISEMENT

ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಭವಾನಿ ರೇವಣ್ಣ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್‌ ನಾಯಕ ಎಚ್‌. ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸ್ಪಷ್ಟಪಡಿಸಿದರು.

ಒಂದು ವೇಳೆ ಅನಿತಾ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದರೆ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುವುದಾಗಿ ಅವರು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಪ್ರಜ್ವಲ್‌ ರೇವಣ್ಣ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂಬ ಬಗ್ಗೆ ದೇವೇಗೌಡ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುವರು. ಪಕ್ಷದ ಟಿಕೆಟ್‌ ಪಡೆದುಕೊಳ್ಳುವ ಬಗ್ಗೆ ಮಾಧ್ಯಮಗಳ ಮುಂದೆ ಬಾಲಿಶ ಹೇಳಿಕೆಗಳನ್ನು ನೀಡಬಾರದು. ಈ ಬಗ್ಗೆ ಭಾವೋದ್ವೇಗಕ್ಕೆ ಒಳಗಾಗಬಾರದು ಎಂದೂ ಪ್ರಜ್ವಲ್‌ಗೆ ಬುದ್ಧಿವಾದ ಹೇಳಿದ್ದೇನೆ’ ಎಂದರು.

ADVERTISEMENT

ಸಿಂಧ್ಯ ರಾಷ್ಟ್ರ ರಾಜಕಾರಣಕ್ಕೆ: ವಿಧಾನಸಭಾ ಚುನಾವಣೆ ಬಳಿಕ ತಾವು ಮತ್ತು ಪಿ.ಜಿ.ಆರ್‌. ಸಿಂಧ್ಯ ರಾಷ್ಟ್ರ ರಾಜಕಾರಣಕ್ಕೆ ತೆರಳುವುದಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

ಸೋಮವಾರ ಪಕ್ಷದ ಕಚೇರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಸಿಂಧ್ಯ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದರು.

‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಿಂಧ್ಯ ಅವರ ಸ್ನೇಹ ಆರಂಭವಾಯಿತು. ಇಂದಿರಾಗಾಂಧಿ ನಮ್ಮನ್ನೆಲ್ಲ ಜೈಲಿಗೆ ಹಾಕಿದ್ದರು. ಆದರೆ, ಒಂದು ದಶಕದಿಂದ ರಾಜಕಾರಣದಲ್ಲಿ ಸಕ್ರಿಯರಾಗಿರಲಿಲ್ಲ. ಇತ್ತೀಚೆಗೆ ಅವರ ಜತೆ ಮಾತನಾಡಿ ಪಕ್ಷದಲ್ಲಿ ಸಕ್ರಿಯರಾಗಲು ಹೇಳಿದ್ದೆ. ಅವರು ಒಪ್ಪಿಕೊಂಡರು’ ಎಂದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಸಿಂಧ್ಯ ವರುಣಾ ಕ್ಷೇತ್ರ ಸೇರಿದಂತೆ ಯಾವುದೇ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ. ಟಿಕೆಟ್ ಆಕಾಂಕ್ಷಿಯೂ ಅಲ್ಲ. ಪಕ್ಷದ ಮರು ಸೇರ್ಪಡೆಯೂ ಅಲ್ಲ. ಪಕ್ಷದಲ್ಲಿ ಮತ್ತೆ ಸಕ್ರಿಯರಾಗುತ್ತಿದ್ದಾರೆ ಎಂದರು.

ಗೋ ಪೂಜೆ ಮತ್ತು ಹೋಮ: ಜೆಡಿಎಸ್‌ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಬೆಳಿಗ್ಗೆ ಗೋ ಪೂಜೆ ಮತ್ತು ಗಣಹೋಮ ನಡೆಯಿತು. ಬಳಿಕ ಕಟ್ಟಡ ನಿರ್ಮಿಸಿದ ಕಾರ್ಮಿಕರಿಗೂ ದೇವೇಗೌಡರು ಗೌರವ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಚನ್ನಮ್ಮ ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ,  ಎಚ್‌.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್‌ ರೇವಣ್ಣ ಮತ್ತು ಪಕ್ಷದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.