ಬೆಂಗಳೂರು: ಯುವ ಬರಹಗಾರರಿಗೆ ಚೊಚ್ಚಲ ಕೃತಿ ಪ್ರಕಟಿಸಲು ಧನ ಸಹಾಯ ನೀಡುವ ಕನ್ನಡ ಪುಸ್ತಕ ಪ್ರಾಧಿಕಾರ 2010ನೇ ಸಾಲಿಗೆ ಅರ್ಜಿ ಆಹ್ವಾನಿಸಿದೆ.
ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರು, ‘ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿರುವವರು ಧನಸಹಾಯಕ್ಕೆ ಅರ್ಜಿ ಸಲ್ಲಿಸಬಹುದು’ ಎಂದರು.
ಅರ್ಜಿ ಸಲ್ಲಿಸುವವರು 18ರಿಂದ 35ರ ವಯೋಮಾನದವರಾಗಿರಬೇಕು, ತಮ್ಮ ಯಾವುದೇ ಕೃತಿಗಳು ಇದುವರೆಗೂ ಪ್ರಕಟವಾಗಿಲ್ಲ ಎಂದು ಅವರು ಸ್ವಯಂ ದೃಢೀಕರಣ ಪತ್ರ, ಎಸ್‌ಎಸ್‌ಎಲ್‌ಸಿ ಅಥವಾ ಜನ್ಮದಾಖಲೆ ಪತ್ರ ಮತ್ತು ಚೊಚ್ಚಲ ಕೃತಿಯ ಹಸ್ತಪ್ರತಿ ಅಥವಾ ಡಿಟಿಪಿ ಪ್ರತಿಯನ್ನು ಏಪ್ರಿಲ್ 10ರೊಳಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಹೇಳಿದರು. ಹಸ್ತಪ್ರತಿಯನ್ನು ಡಿಟಿಪಿ ಮಾಡಿಸಿದಾಗ ಅದು 1/8 ಡೆಮಿ ಅಳತೆಯಲ್ಲಿ ಕನಿಷ್ಠ 32 ಪುಟಗಳಿರಬೇಕು.
ಅನುವಾದ, ಪಠ್ಯಪುಸ್ತಕ ಅಥವಾ ಯಾವುದೇ ಪದವಿ ತರಗತಿಗಳಿಗೆ ಸಿದ್ಧಪಡಿಸಿದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ, ಆಯ್ಕೆಯಾದ ಚೊಚ್ಚಲ ಕೃತಿಗಳಿಗೆ ತಲಾ 10 ಸಾವಿರ ರೂಪಾಯಿ ನೀಡಲಾಗುವುದು ಎಂದರು.
ಅರ್ಜಿ ವಿಳಾಸ: ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು - 560 002. ಹೆಚ್ಚಿನ ಮಾಹಿತಿಗಾಗಿ 080-2248 4516 ಅಥವಾ 080-2201 7704 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಚೊಚ್ಚಲ ಕೃತಿ ಪ್ರೋತ್ಸಾಹ ಧನಕ್ಕೆ 2009ರಲ್ಲಿ ಒಟ್ಟು 21 ಕೃತಿಗಳು ಆಯ್ಕೆಯಾಗಿವೆ. ಇವುಗಳನ್ನು ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.