ADVERTISEMENT

ಜಗದಿ ಹೊಸ ಕ್ರಾಂತಿ ಹರಡಲು... ಬಂದಿದೆ ಸಂಕ್ರಮಣ...

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಸಂಕ್ರಾಂತಿ  ಇದು ಸೂರ್ಯನಿಗೆ ಸಂಬಂಧಿಸಿದ ಹಬ್ಬ. ಸಂಕ್ರಾಂತಿ ಎಂದರೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಸಂಧಿಕಾಲಕ್ಕೆ  ಸಂಕ್ರಾಂತಿ  ಅಥವಾ  ಸಂಕ್ರಮಣ  ಎಂದು ಹೆಸರು.

ಸೌರಮಾನದ ಪ್ರಕಾರ ಸೂರ್ಯನು ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಕರ್ಕಾಟಕ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯಣ ಹಾಗೂ ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವ ಹೊಂದಿದೆ. ಹಾಗಾಗಿ ಸಂಕ್ರಾಂತಿ ಎಂದರೆ ಸೂರ್ಯಾರಾಧನೆ ಎಂದು ಅರ್ಥೈಸಬಹುದು.

ಸೂರ್ಯನು ಮಕರರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಾಭಿಮುಖವಾಗಿ 6 ತಿಂಗಳ ಪ್ರಯಾಣ ಬೆಳೆಸುತ್ತಾನೆ. ಈ ದಿನವನ್ನು  ಮಕರ ಸಂಕ್ರಾತಿ  ಎಂದು ಕರೆಯುವುದು. ಹೀಗೆ ಸೂರ್ಯಪಥ ಗಮನದಿಂದ ಭಾರತ, ಅರೇಬಿಯಾ ಸಿರಿಯಾ, ಬೆಬಿಲೋನ್, ರೋಮ್ ಮೊದಲಾದ ದೇಶಗಳಿಗೆ ಕೊರೆಯುವ ಚಳಿ ಕೊನೆಯಾಗಿ ಹಗಲು ಹೆಚ್ಚು ಸಂಭವಿಸುವ ಕೃಪೆ ದೊರೆಯುವುದು. ಹಿಂದೂಗಳು ಈ ದಿನವನ್ನು ಉತ್ತರಾಯಣ ಪುಣ್ಯಕಾಲವೆಂದು ಭಾವಿಸುವರು. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಅದಕ್ಕಾಗಿಯೇ ಭೀಷ್ಮ ಪಿತಾಮಹರು ದೇಹ ತ್ಯಜಿಸಲು, ಉತ್ತರಾಯಣ ಮರಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಈ ದಿನ ಸ್ವರ್ಗದ ಬಾಗಿಲು ತೆರೆಯುತ್ತದೆಂದು ನಮ್ಮವರ ನಂಬುಗೆ. ಉತ್ತರಾಯಣದಿಂದ ಮುಂದೆ ಬರುವ ದಿನಗಳೇ ಪ್ರಶಸ್ತವಾದ ದಿನಗಳು.

ADVERTISEMENT

ಮಕರ ಸಂಕ್ರಾತಿಯ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಆಗುವುದೆಂದು ಪುರಾಣಗಳ ಹೇಳಿಕೆ. ಈ ಆನಂದಕ್ಕಾಗಿ ಎಳ್ಳು, ಬೆಲ್ಲ ತಿಂದು ಒಳ್ಳೆಯ ಮಾತನಾಡೋಣವೆಂದು ಎಳ್ಳು, ಬೆಲ್ಲ ಹಂಚುವುದುಂಟು. ಭೋಗಿ, ಸಂಕ್ರಮಣ ಮತ್ತು ಕನು ಹಬ್ಬ ಎಂದು ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸುವುದುಂಟು. ಸುಗ್ಗಿಯ ಕಾಲದ ಹಿಗ್ಗು ಬಂದಿರುತ್ತದೆ. ಕಬ್ಬು ಸಮೃದ್ಧಿಯಾಗಿ ಈ ವೇಳೆಗೆ ಬರುವುದುಂಟು.

ಮನೆಯಲ್ಲಿ ಮಕ್ಕಳಿಗೆ ಆಭ್ಯಂಜನ ಮಾಡಿಸಿ ಮಕ್ಕಳ ತಲೆಯ ಮೇಲೆ ಭೋಗಿ ಹಣ್ಣು ಎಂದರೆ ಬೋರೆಹಣ್ಣು, ಕಬ್ಬು ಮೊದಲಾದವುಗಳನ್ನು ಎರೆದು ಆರತಿ ಮಾಡುವುದುಂಟು. ಪೇಟೆಗಳಲ್ಲಂತೂ ಒಂದೆರಡು ದಿನ ಎಳ್ಳು, ಬೆಲ್ಲ ಹಂಚುವ ಬಾಲಕಿಯರ ಸಂಭ್ರಮವೇ ಜರುಗುತ್ತದೆ.

ಈ ದಿನ ಕೆಲವೆಡೆ ಹಸು, ಎಮ್ಮೆ, ಮೊದಲಾದ ಜಾನುವಾರಗಳ ಕೋಡಿಗೆ, ಮೈಗೆ ಬಣ್ಣ ಬಳಿದು ದೃಷ್ಟಿ ದೋಷ ನಿವಾರಣೆಗಾಗಿ ಬೆಂಕಿಯ ಮೇಲೆ ಓಡಿಸುವುದುಂಟು. ಕೆಲವೆಡೆ ದೇವಸ್ಥಾನಗಳಲ್ಲಿ ದೇವರ ಮುಂದೆ ಮೊಲಕ್ಕೆ ಅರಸಿನ-ಕುಂಕುಮ ಬಳಿದು ಹೂವು ಮುಡಿಸಿ, ಪೂಜೆ ಮಾಡಿ ಬಿಡುವ ಪದ್ಧತಿಯುಂಟು.

ಆಂಧ್ರದಲ್ಲಿಯೂ ಈ ಹಬ್ಬದ ಸಂಭ್ರಮದ ಆಚರಣೆಯುಂಟು. ಶ್ರಿ ರಾಮನು ರಾವಣನನ್ನು ಕೊಂದು ಸೀತೆಯನ್ನು ತಂದ ದಿನವೆಂದು ಭಾವಿಸಿ ಮನೆಮನೆಯ ಮುಂದೆ ಉರಿಯನ್ನು ಹಾಕಿ ರಾವಣದಹನ  ನಡೆಸುತ್ತಾರೆ. ಇದನ್ನು  ಭೋಗಿಮಂಟ ಎಂದು ಕರೆಯುವರು. ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಸ್ವರ್ಗಲೋಕದಿಂದ ತಮ್ಮ ಮನೆಯಂಗಳಕ್ಕೆ ಆಗಮಿಸುವರೆಂದು ಅವರ ನಂಬಿಕೆ.

ತಮಿಳುನಾಡಿನಲ್ಲಿ ಸಂಕ್ರಾತಿಯ ಹಬ್ಬವನ್ನು  ಪೊಂಗಲ್  ಎನ್ನುತ್ತಾರೆ. ಪೊಂಗಲನ್ನು ಬೇಯಿಸಿ ಕಬ್ಬಿನ ಜಲ್ಲೆಗಳನ್ನಿರಿಸಿ ಪೂಜೆ ಮಾಡುತ್ತಾರೆ. ಸೂರ್ಯನಿಗೆ ನೈವೇದ್ಯ ಮಾಡುತ್ತಾರೆ. ಅವರಿಗೆ ಇದು ಬಹು ಸಂಭ್ರಮದ ಹಬ್ಬ.

ಉತ್ತರ ಭಾರತದಲ್ಲಿಯೂ ಸಂಕ್ರಾತಿಯನ್ನು ಆಚರಿಸುವುದುಂಟು. ಅಲಹಾಬಾದಿನಲ್ಲಿ ಈ ವೇಳೆಗೆ ಸುಪ್ರಸಿದ್ಧವಾದ ಕುಂಭಮೇಳ ನಡೆಯುವುದು.

ಈ ದಿನದಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ, ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ. ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನಕ್ಕೆ ಜನ್ಮ ಜನ್ಮದಲ್ಲೂ ಸದಾ ನಮಗೆ ಫಲ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು  ಬೆಲ್ಲ ಹಂಚುವುದು.

ಎಳ್ಳು   ಬೆಲ್ಲ ಶೀತ   ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ. ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ.

ಎಳ್ಳು ಬೆಲ್ಲದೊಂದಿಗೆ
ಒಳ್ಳೊಳ್ಳೆ ಮಾತು
ಎಂಬ ನಾಣ್ಣುಡಿಯನ್ನು ಎಲ್ಲರು ಪಾಲಿಸೋಣ......

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.