ADVERTISEMENT

ಜಟಿಲಗೊಂಡ ರಾಜಕೀಯ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:35 IST
Last Updated 20 ಜನವರಿ 2011, 19:35 IST

ಬೆಂಗಳೂರು: ರಾಜ್ಯ ಪಾಲ ಎಚ್.ಆರ್.ಭಾರದ್ವಾಜ್ ಮತ್ತು ರಾಜ್ಯ ಸರ್ಕಾರದ ನಡುವಿನ ರಾಜಕೀಯ ಸಂಘರ್ಷ ಗುರುವಾರವೂ ಜೋರಾಗಿಯೇ ಮುಂದುವರಿದಿದೆ. ಸಚಿವ ಸಂಪುಟದ ನಿರ್ಣಯವನ್ನು ಲಘುವಾದ ಧಾಟಿಯಲ್ಲಿ ನಿಂದಿಸಿ ರಾಜ್ಯಪಾಲರು ಮಾಧ್ಯಮದವರ ಮುಂದೆ ಪ್ರತಿಕ್ರಿಯೆ ನೀಡಿದರು. ಅದೇ ಧಾಟಿಯಲ್ಲಿ ರಾಜ್ಯದ ಸಚಿವರೂ ರಾಜ್ಯಪಾಲರ ನಿಲುವನ್ನು ಟೀಕಿಸಿದ್ದಾರೆ. ಈ ಸಮಸ್ಯೆಯನ್ನು ರಾಜಕೀಯವಾಗಿ ಎದುರಿಸಲು ಸಿದ್ಧ ಎಂದು ಮುಖ್ಯಮಂತ್ರಿ ಅವರೂ ಸವಾಲು ಹಾಕಿದ್ದಾರೆ. ಮಾತಿನ ಸಮರ, ತಂತ್ರ-ಪ್ರತಿತಂತ್ರ ಎರಡೂ ಕಡೆಯಿಂದ ಸಾಗಿದೆ. ಹೀಗಾಗಿ ಸಂಘರ್ಷ ಇನ್ನಷ್ಟು ಜಟಿಲವಾಗುವ ಸೂಚನೆ ಇದೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯಪಾಲರು ‘ಭೂ ಹಗರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಆರ್. ಅಶೋಕ ಅವರ ವಿರುದ್ಧ ದೂರು ದಾಖಲಿಸಲು ಜಸ್ಟೀಸ್ ಲಾಯರ್ಸ್ ಫೋರಂಗೆ ಅನುಮತಿ ನೀಡುವ  ಕುರಿತು ಇನ್ನೆರಡು ದಿನಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಮ್ಮ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಇದೇ 25ರಂದು ರಾಜಭವನದ ಎದುರು ಪ್ರತಿಭಟನೆ ಹಾಗೂ 27ರಂದು ರಾಜ್ಯ ಬಂದ್‌ಗೆ ಕರೆ ನೀಡಿರುವ ಬಿಜೆಪಿ ನಿಲುವಿನ ಕುರಿತು ಪ್ರತಿಕ್ರಿಯೆ ನೀಡಿದ ಭಾರದ್ವಾಜ್, ‘ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಉಲ್ಟಾ ಚೋರ್ ಕೊತ್ವಾಲ್ ಕೊ ಡಾಂಟಾ (ಕಳ್ಳನೇ ಪೊಲೀಸರನ್ನು ನಿಂದಿಸಿದಂತೆ) ಎಂಬಂತಾಗಿದೆ. ಇಂತಹ ಪ್ರತಿಭಟನೆ ಇಂದಿನ ರಾಜಕೀಯದ ಭಾಗವಾಗಿದ್ದು, ಇದಕ್ಕೆ ನಾನು ಅಂಜುವುದಿಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

ನಗರದಲ್ಲಿ ಗುರುವಾರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭೂಹಗರಣ ಮತ್ತು ಡಿನೋಟಿಫಿಕೇಷನ್‌ಗಳ 93 ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಈ ತಿಂಗಳ 20ರೊಳಗೆ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿತ್ತು. ಆದರೆ ಗುರುವಾರವೂ ಸಂಪೂರ್ಣ ದಾಖಲೆಗಳು ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದರು.

‘ದೂರುಗಳು ಬಂದಾಗ ಅದನ್ನು ಪರಿಗಣಿಸುವುದು ನನ್ನ ಕರ್ತವ್ಯವಾಗಿದೆ. ಸಾಂವಿಧಾನಿಕ ಮುಖ್ಯಸ್ಥನ ಹುದ್ದೆಯಲ್ಲಿದ್ದು ನನ್ನ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಂಪುಟ ಸಭೆಯ ನಿರ್ಣಯದಲ್ಲಿ ಹಾಗೂ ಸರ್ಕಾರ ನನಗೆ ಬರೆದಿರುವ ಪತ್ರದಲ್ಲಿ ಯಾವುದೇ ಹೊಸ ವಿಚಾರಗಳಿಲ್ಲ. ಹಗರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ವಿಚಾರಣೆ ನಡೆಸಲಿದೆ, ನ್ಯಾಯಾಂಗ ತನಿಖೆ ನಡೆಯಲಿದೆ ಎಂದು ಸರ್ಕಾರ ಮೊದಲಿನಿಂದಲೂ ಹೇಳುತ್ತಿದೆ’ ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪ್ರಸಕ್ತ ರಾಜಕಾರಣ ಅಪಾಯಕಾರಿಯಾಗಿದ್ದು ರಾಜಕೀಯದ ಕುರಿತು ತಿಳಿಯುವುದಕ್ಕಿಂತಲೂ ರಚನಾತ್ಮಕ ಕಾರ್ಯಗಳತ್ತ ಆಸಕ್ತಿ ತಳೆಯುವುದು ಒಳಿತು. ವಿದ್ಯಾವಂತರು, ಜ್ಞಾನಿಗಳು ರಾಜಕೀಯ ಪ್ರವೇಶಿಸುವ ಮೂಲಕ ಬದಲಾವಣೆ ತರುವ ಅಗತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.