ADVERTISEMENT

ಜನಚೇತನ ಯಾತ್ರೆ: ಅಡ್ವಾಣಿ ಬೆಂಗಳೂರು ಸಭೆ ರದ್ದು ಪಡಿಸಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 13:00 IST
Last Updated 22 ಅಕ್ಟೋಬರ್ 2011, 13:00 IST

ಬೆಂಗಳೂರು (ಪಿಟಿಐ): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೆರೆಮನೆ ಸೇರಿದ್ದು ಹಾಗೂ ಗೃಹ ಸಚಿವ ಆರ್. ಅಶೋಕ ಸೇರಿದಂತೆ ಇತರ ಕೆಲವು ಬಿಜೆಪಿ ನಾಯಕರು ಆರೋಪಗಳ ಸುಳಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಲ್ಲಿ ಅಕ್ಟೋಬರ್ 30 ರಂದು ನಡೆಯಬೇಕಿದ್ದ ರಾಷ್ಟ್ರೀಯ ನಾಯಕ  ಎಲ್. ಕೆ. ಅಡ್ವಾಣಿ ಅವರ ರಥಯಾತ್ರೆಯನ್ನುನ್ನು ಬಿಜೆಪಿ ರದ್ದು ಪಡಿಸಿದೆ.

ಏನಿದ್ದರೂ ~ಜನಚೇತನ ಯಾತ್ರೆ~ಯು ರಾಜ್ಯದ ಇತರ ಕಡೆಗಳಲ್ಲಿ ತನ್ನ ಪಯಣವನ್ನು ಮುಂದುವರೆಸಲಿದೆ. ಕರಾವಳಿ ಭಾಗದ ಮಂಗಳೂರು, ಉಡುಪಿ ಮತ್ತು ಹೊನ್ನಾವರದಲ್ಲಿ ಅಕ್ಟೋಬರ್ 31ರಂದು ಯಾತ್ರೆ ಮುಂದುವರೆಯುವುದು ಎಂದು ಪಕ್ಷ ಮೂಲಗಳು ತಿಳಿಸಿವೆ.

ನವೆಂಬರ್ 1ರಂದು ಅಂಕೋಲಾದಲ್ಲಿ ನಡೆಯುವ ಸಾರ್ವಜನಿಕ ಸಭೆಯೂ ಪೂರ್ವ ನಿಗದಿಯಂತೆಯೇ ನಡೆಯಲಿದೆ. ಕರ್ನಾಟಕದಲ್ಲಿ ಯಾತ್ರೆ ಮುಗಿಯುವ ಹಂತದಲ್ಲಿನ ಕೊನೆಯ ಕಾರ್ಯಕ್ರಮ ಇದಾಗಿದ್ದು ನಂತರ ಯಾತ್ರೆಯು ನೆರೆಯ ಗೋವಾವನ್ನು ಪ್ರವೇಶಿಸುವುದು ಎಂದು ಮೂಲಗಳು ಹೇಳಿವೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಸಚಿವ ಎಸ್. ಎನ್. ಕೃಷ್ಣಯ್ಯ ಶೆಟ್ಟಿ ಅವರು ಭೂ ಹಗರಣಗಳ ಆರೋಪದ ಹಿನ್ನೆಲೆಯಲ್ಲಿ ಸೆರೆಮನೆ ಸೇರಿದ ವಿದ್ಯಮಾನಗಳಿಂದ ಪಕ್ಷಕ್ಕೆ ಮುಜುಗರವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾರ್ವಜನಿಕ ಸಭೆ ನಡೆಸದಿರಲು ಬಿಜೆಪಿ ನಿರ್ಧರಿಸಿತು.

ಜೊತೆಗೆ ಲೋಕಾಯುಕ್ತ ನ್ಯಾಯಾಲಯವು ಗೃಹ ಸಚಿವ ಆರ್. ಅಶೋಕ ಅವರ ವಿರುದ್ಧ ನಿಯಮಗಳನ್ನು ಉಲ್ಲಂಘಿಸಿ ಜಮೀನು ಡಿನೋಟಿಫಿಕೇಷನ್ ಮಾಡಿದ್ದಕ್ಕೆ ಸಂಬಂಧಿಸಿ ದೂರು ದಾಖಲಿಸಲು ಲೋಕಾಯುಕ್ತ ಪೊಲೀಸರಿಗೆ ಆಜ್ಞಾಪಿಸಿದ ಘಟನೆಯೂ ಬಿಜೆಪಿಯ ಸಾರ್ವಜನಿಕ ಸಭೆ ರದ್ದು ನಿರ್ಧಾರಕ್ಕೆ ಕಾರಣವಾಗಿದೆ.
 
ಖಾಸಗಿ ದೂರೊಂದನ್ನು ಅನುಸರಿಸಿ ನ್ಯಾಯಾಲಯವು ಅಶೋಕ ವಿರುದ್ಧದ ಭೂ ಹಗರಣ ಆರೋಪದ ತನಿಖೆ ನಡೆಸಲು ಆದೇಶ ನೀಡಿದ್ದು ಪೊಲೀಸರು ಅಶೋಕ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ಕೂಡಾ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.