ADVERTISEMENT

ಜನಪ್ರತಿನಿಧಿಗಳ ತರಬೇತಿಗೆ `ಸ್ಯಾಟ್‌ಕಾಂ' ಕೇಂದ್ರ

ಎಂ.ಮಹೇಶ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ದಾವಣಗೆರೆ: ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಕುರಿತು ತರಬೇತಿ ನೀಡಲು ಜಿಲ್ಲಾಮಟ್ಟದಲ್ಲಿ `ಸ್ಯಾಟ್‌ಕಾಂ- ಉಪಗ್ರಹ ಆಧಾರಿತ ತರಬೇತಿ ಕೇಂದ್ರ'ಗಳನ್ನು ಸ್ಥಾಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕ್ರಮ ಕೈಗೊಂಡಿದೆ.

ಮೊದಲ ಹಂತದಲ್ಲಿ, ದಾವಣಗೆರೆ, ಧಾರವಾಡ, ಗುಲ್ಬರ್ಗ, ಮಂಗಳೂರು ಹಾಗೂ ಬೆಂಗಳೂರು ಜಿಲ್ಲಾ ಪಂಚಾಯ್ತಿಯಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉಪಕರಣಗಳನ್ನು ಅಳವಡಿಸುವ ಕೆಲಸವಷ್ಟೇ ಬಾಕಿ ಇದೆ. ನಂತರ ಹಂತಗಳಲ್ಲಿ ಇತರ ಜಿಲ್ಲೆಗಳಿಗೂ ಯೋಜನೆ ವಿಸ್ತರಿಸಲು ಇಲಾಖೆ ಉದ್ದೇಶಿಸಿದೆ.

ಪ್ರಸ್ತುತ, ಪಂಚಾಯತ್‌ರಾಜ್ ವ್ಯವಸ್ಥೆಯ ಮೂರು ಹಂತದ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ನೀಡಲು ಮೈಸೂರಿನಲ್ಲಿರುವ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಹೋಗಬೇಕಿದೆ. ಹೀಗೆ, ಮೈಸೂರಿಗೆ ಹೋಗಿ ಬರುವುದನ್ನು ತಪ್ಪಿಸಲು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿ ಕೈಗೊಳ್ಳುವ ಕಾರ್ಯಕ್ರಮಗಳ ತರಬೇತಿ ಚಟುವಟಿಕೆಗಳನ್ನು ಶೀಘ್ರ ಹಾಗೂ ಪರಿಣಾಮಕಾರಿಯಾಗಿ ಒದಗಿಸಲು ಅನುಕೂಲ ಆಗುವಂತೆ ಇಂತಹ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ.

ಮೈಸೂರಿನಲ್ಲಿರುವ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾದರಿಯಲ್ಲಿಯೇ ಈ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಇದಕ್ಕಾಗಿ ಒಟ್ಟು ರೂ 2 ಕೋಟಿ ವೆಚ್ಚ ಮಾಡಲಾಗುತ್ತಿದೆ.

`ಗ್ರಾಮ ಸ್ವರೋಜ್‌ಗಾರ್ ಯೋಜನೆ'ಯ ಅಡಿಯಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಸ್ಟುಡಿಯೊ ಮಾದರಿಯಲ್ಲಿರುವ ಈ ಕೇಂದ್ರದ ಮೂಲಕ ಸಂಬಂಧಿಸಿದ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿಯ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತರಬೇತಿ ನೀಡಬಹುದು. ಇದರಿಂದ ಮೈಸೂರಿಗೆ ಹೋಗಿ ಬರುವ ಸಮಯ ಉಳಿಯುತ್ತದೆ. ಆಯಾ ಭಾಗದ ಸಂಪನ್ಮೂಲ ವ್ಯಕ್ತಿಗಳಿಂದ ಆಯಾ ಭಾಗದ ಸಂಪನ್ಮೂಲ ವ್ಯಕ್ತಿಯಿಂದ ಆ ಪ್ರದೇಶದ ಭಾಷೆಯಲ್ಲಿ ತರಬೇತಿ ಪಡೆಯಬಹುದು. ಜಿಲ್ಲಾ ಪಂಚಾಯ್ತಿಯಲ್ಲಿರುವ ಕೇಂದ್ರದಿಂದ ತಾಲ್ಲೂಕು ಪಂಚಾಯ್ತಿಗಳ ಸಭಾಂಗಣಗಳ ಎಲ್‌ಸಿಡಿ ಪರದೆಯಲ್ಲಿ ಪ್ರಸಾರ ಮಾಡುವ ಮೂಲಕ ತರಬೇತಿ ನೀಡಲಾಗುವುದು.

ಈ ಬಗ್ಗೆ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಜಿಲ್ಲಾ ಪಂಚಾಯ್ತಿಯಲ್ಲಿ ಉಪಗ್ರಹ ಆಧಾರಿತ ತರಬೇತಿ ಕೇಂದ್ರದ ನಿರ್ಮಾಣ ಪೂರ್ಣಗೊಂಡಿದೆ. ಉಪಕರಣಗಳನ್ನು ಅಳವಡಿಸುವಷ್ಟೇ ಬಾಕಿ ಇದೆ. ಕೇಂದ್ರ ಕಾರ್ಯಾರಂಭ ಮಾಡಿದರೆ, ಈ ಭಾಗದಲ್ಲಿ ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಸುಲಭವಾಗಲಿದೆ. ತ್ವರಿತ ಮಾಹಿತಿ ಪ್ರಸಾರಕ್ಕೋಸ್ಕರ ಇಲಾಖೆಯು ತಂತ್ರಜ್ಞಾನ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಹೆಜ್ಜೆ ಇರಿಸಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.