ADVERTISEMENT

ಜನಾರ್ದನ ಪೂಜಾರಿ ಬಗ್ಗೆ ಕೀಳಾಗಿ ಮಾತನಾಡಿಲ್ಲ: ಸಚಿವ ರಮಾನಾಥ ರೈ

7ರಂದು ಕಾಂಗ್ರೆಸ್ ಸಮಾವೇಶ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 6:38 IST
Last Updated 3 ಜುಲೈ 2017, 6:38 IST
ಜನಾರ್ದನ ಪೂಜಾರಿ ಬಗ್ಗೆ ಕೀಳಾಗಿ ಮಾತನಾಡಿಲ್ಲ: ಸಚಿವ ರಮಾನಾಥ ರೈ
ಜನಾರ್ದನ ಪೂಜಾರಿ ಬಗ್ಗೆ ಕೀಳಾಗಿ ಮಾತನಾಡಿಲ್ಲ: ಸಚಿವ ರಮಾನಾಥ ರೈ   

ಮಂಗಳೂರು: ‘ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಬಗ್ಗೆ ನಾನು ಯಾವತ್ತೂ ಕೀಳಾಗಿ ಮಾತನಾಡಿಲ್ಲ. ಈ ಕುರಿತು ಕೆಲವರು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.                       

'ಮದುವೆ ಸಮಾರಂಭ ಒಂದರಲ್ಲಿ ನಾನು ಪೂಜಾರಿ ಅವರನ್ನು ಅವಹೇಳನ ಮಾಡಿದ್ದೇನೆ ಎಂಬುದಾಗಿ ಹರಿಕೃಷ್ಣ ಬಂಟ್ವಾಳ ಮಾಡಿರುವ ಆರೋಪಕ್ಕೆ ದಾಖಲೆಗಳಿಲ್ಲ. ಗಾಳಿಯಲ್ಲಿ ಗುದ್ದಿದಂತೆ ಮಾಡುವ ಆರೋಪಗಳಿಗೆ ಉತ್ತರ ನೀಡುವುದಿಲ್ಲ' ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪೂಜಾರಿ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಹಲವು ದಿನಗಳ ಕಾಲ ದೆಹಲಿಯಲ್ಲಿ ಇದ್ದೆ. ಅವರ ಪರ ಲಾಬಿ ಮಾಡಿ ಹಲವರ ವಿರೋಧ ಕಟ್ಟಿಕೊಂಡಿದ್ದೆ' ಎಂದು ಹೇಳಿದರು.

ADVERTISEMENT

ಜುಲೈ 7ರಂದು ಕಾಂಗ್ರೆಸ್ ಸಮಾವೇಶ:

ಮುಂದಿನ ವಿಧಾನಸಭಾ ಚುನಾವಣೆಗೆ ಸಂಘಟಿಸಲು ಮಂಗಳೂರಿನ ಹೊರವಲಯದ ಅಡ್ಯಾರ್ ಗಾರ್ಡನ್ ನಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳು, ಸೋತ ಅಭ್ಯರ್ಥಿಗಳ ಸಮಾವೇಶ ನಡೆಯಲಿದೆ.

‘ಜುಲೈ 7ರ ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರದೇಶ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ ಭಾಗವಹಿಸುವರು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಏಳು ಸ್ಥಾನ ಗಳಿಸಿತ್ತು. ಮುಂದಿನ ಚುನಾವಣೆಯಲ್ಲಿ ಎಂಟು ಸ್ಥಾನಗಳನ್ನೂ ಗೆಲ್ಲುವುದು ಪಕ್ಷದ ಗುರಿ. ಇದಕ್ಕಾಗಿ ಜಿಲ್ಲೆಯಲ್ಲಿ ಯುವಕರ‌ ತಂಡ ರಚಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.