ADVERTISEMENT

ಜನಾರ್ದನ ರೆಡ್ಡಿ, ಅಲಿಖಾನ್ ಇಂದು ನ್ಯಾಯಾಲಯಕ್ಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಬೆಂಗಳೂರು: ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮೂಲಕ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಸಿಬಿಐ ವಶದಲ್ಲಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತು ಅವರ ಬಂಟ ಮೆಹಫೂಜ್ ಅಲಿಖಾನ್‌ನನ್ನು ಸಿಬಿಐ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆಹಾಜರುಪಡಿಸುವರು.

ಓಬಳಾಪುರಂ ಮೈನಿಂಗ್ ಕಂಪೆನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಚಂಚಲಗುಡ ಕಾರಾಗೃಹದಲ್ಲಿದ್ದ ರೆಡ್ಡಿ ಅವರನ್ನು `ಸಂಚಾರ ವಾರೆಂಟ್~ ಮೇಲೆ ಮಾರ್ಚ್ 2ರಂದು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಆರೋಪಿಯನ್ನು ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಅಲಿಖಾನ್ ಕೂಡ ಅದೇ ದಿನ ನ್ಯಾಯಾಲಯಕ್ಕೆ ಶರಣಾಗಿದ್ದು. ಮಾರ್ಚ್ 5ರಿಂದ ಆತನನ್ನು ಸಿಬಿಐ ವಶಕ್ಕೆ ನೀಡಲಾಗಿತ್ತು.

ADVERTISEMENT

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ಆರೋಪಿಯನ್ನು ಗರಿಷ್ಠ 15 ದಿನಗಳ ಕಾಲ ಪೊಲೀಸ್ ಬಂಧನಕ್ಕೆ ನೀಡಲು ಅವಕಾಶವಿದೆ. ರೆಡ್ಡಿ ಅವರ ಪೊಲೀಸ್ ಬಂಧನದ ಅವಧಿ ಶುಕ್ರವಾರಕ್ಕೆ 15 ದಿನ ಪೂರ್ಣಗೊಳ್ಳಲಿದೆ.

ಆದ್ದರಿಂದ ರೆಡ್ಡಿ ಅವರನ್ನು ಮತ್ತೆ ತನ್ನ ವಶಕ್ಕೆ ನೀಡುವಂತೆ ಮನವಿ ಮಾಡಲು ಸಿಬಿಐಗೆ ಅವಕಾಶವಿಲ್ಲ. ಆದರೆ, ಅಲಿಖಾನ್‌ನನ್ನು ಇನ್ನೂ ನಾಲ್ಕು ದಿನಗಳ ಕಾಲ ವಶಕ್ಕೆ ಪಡೆಯಲು ಅವಕಾಶವಿದೆ.

ಆತನನ್ನು ನಾಲ್ಕು ದಿನಗಳ ಕಾಲ ವಿಚಾರಣೆಗಾಗಿ ಒಪ್ಪಿಸುವಂತೆ ಸಿಬಿಐ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.

ಶುಕ್ರವಾರವೂ ಸಿಬಿಐ ವಿಶೇಷ ನ್ಯಾಯಾಲಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಸ್ಥಾಪಿಸಲಾಗಿರುವ ನ್ಯಾಯಾಂಗಣದಲ್ಲಿ ಕಾರ್ಯನಿರ್ವಹಿಸಲಿದೆ.

ನ್ಯಾಯಾಧೀಶ ಬಿ.ಎಂ.ಅಂಗಡಿ ಅವರು ಬೆಳಿಗ್ಗೆ 11ರಿಂದ ಅಲ್ಲಿಯೇ ಪ್ರಕರಣದ ವಿಚಾರಣೆ ನಡೆಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.