ಶಿವಮೊಗ್ಗ: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ ಎಲ್ಲಾ ಜಮೀನುಗಳ ಅಳತೆ, ಪೋಡಿ ಮಾಡಿ, ನಕ್ಷೆ ಸಿದ್ಧಪಡಿಸುವ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲಾಗುವುದು ಎಂದು ರಾಜ್ಯ ಭೂಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ವಿ. ಪೊನ್ನುರಾಜ್ ತಿಳಿಸಿದರು.
ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಈಚೆಗೆ ಅನುಮೋದನೆ ನೀಡಿದ್ದು, ಇನ್ನೊಂದು ತಿಂಗಳ ಒಳಗೆ ಚಾಲನೆ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯವ್ಯಾಪಿ ಬಾಕಿ ಇರುವ ಪೋಡಿ ಪ್ರಕರಣಗಳು ಸರ್ವೇ ನಂಬರ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿವೆ. ಎಲ್ಲಾ ಜಮೀನುಗಳ ಅಳತೆ ಮಾಡಿ, ಪೋಡಿ ಮಾಡುವ ಮೂಲಕ ನಕ್ಷೆಯನ್ನು ಸಿದ್ಧಪಡಿಸುವ ರೂ 400 ಕೋಟಿ ವೆಚ್ಚದ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುವುದು ಎಂದು ವಿವರಿಸಿದರು.
ಮೊದಲ ಹಂತದಲ್ಲಿ ಇದನ್ನು ರೂ 100 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಈ ಕುರಿತ ಟೆಂಡರ್ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಆರಂಭಗೊಳ್ಳುತ್ತದೆ. ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯ ಎರಡು ಗ್ರಾಮದ ಜಮೀನುಗಳ ಸರ್ವೇ, ಪೋಡಿ, ನಕ್ಷೆ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ನಂತರ ಎಲ್ಲೆಡೆ ವಿಸ್ತರಿಸಲಾಗುವುದು ಎಂದು ಹೇಳಿದರು.
ಜಮೀನು ದಾಖಲಾತಿಯಲ್ಲಿ ಆರ್‌ಆರ್-5 ಮತ್ತು 6 (ಜಮೀನಿನ ಇತಿಹಾಸ) ನಮೂದಿಸಿಕೊಡುವ ವ್ಯವಸ್ಥೆಯನ್ನು ಪುನಃ ಜಾರಿಗೊಳಿಸಬೇಕೆಂಬ ಸಲಹೆ ಪರಿಶೀಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.