ADVERTISEMENT

ಜಲಾಶಯಗಳಲ್ಲಿ ಹಿಂದಿನ ವರ್ಷಕ್ಕಿಂತ ಕಡಿಮೆ ನೀರು

ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸುರಿಯದ ಮುಂಗಾರು ಮಳೆ; ನೀರಿನ ಸಂಗ್ರಹದಲ್ಲಿ ಹಿನ್ನಡೆ – ಆತಂಕ

ಕೆ.ಓಂಕಾರ ಮೂರ್ತಿ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಜಲಾಶಯಗಳಲ್ಲಿ ಹಿಂದಿನ ವರ್ಷಕ್ಕಿಂತ ಕಡಿಮೆ ನೀರು
ಜಲಾಶಯಗಳಲ್ಲಿ ಹಿಂದಿನ ವರ್ಷಕ್ಕಿಂತ ಕಡಿಮೆ ನೀರು   

ಮೈಸೂರು:  ಕೆಆರ್‌ಎಸ್‌ ಸೇರಿದಂತೆ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣವಿದ್ದು, ಮಳೆಯಾಗದಿದ್ದರೆ ನೀರಿನ ತತ್ವಾರ ಉಂಟಾಗುವ ಆತಂಕ ಈಗಿನಿಂದಲೇ ಎದುರಾಗಿದೆ.

ಈ ಸಾಲಿನಲ್ಲಿ ಶೇ 45ರಷ್ಟು ಮಳೆ ಕೊರತೆ ಉಂಟಾಗಿದೆ. ಏಪ್ರಿಲ್‌, ಮೇನಲ್ಲಿ ಆಶಾವಾದ ಮೂಡಿಸಿದ್ದ ಮಳೆ ಬಳಿಕ ಕೈಕೊಟ್ಟಿದೆ.  ಬಿತ್ತನೆಯಾಗಿರುವ ಬೆಳೆಗಳು ಬಾಡುತ್ತಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಕೃಷಿ ಹಾಗೂ ಕೆರೆ–ಕಟ್ಟೆಗಳ ಭರ್ತಿಗೆ ಕೊರತೆ ಉಂಟಾಗುವ ಸಾಧ್ಯತೆ ಇದೆ. ಕೆರೆ, ನಾಲೆಗಳಿಗೆ ಇನ್ನೂ ನೀರು ತಲುಪಿಲ್ಲ.

ರೈತರ ಜೀವನಾಡಿ ಕೆಆರ್‌ಎಸ್‌ನಲ್ಲಿ ನೀರಿನ ಸಂಗ್ರಹ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ 12 ಅಡಿ ಕಡಿಮೆ ಇದೆ. 124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ 77.65 ಅಡಿ ನೀರು ಇದೆ. ಕಳೆದ ವರ್ಷ ಈ ಅವಧಿಯಲ್ಲಿ 90.10 ಅಡಿ ನೀರು ಇತ್ತು.

ADVERTISEMENT

‘ಕೆಆರ್‌ಎಸ್‌ನಲ್ಲಿ ಸದ್ಯ ಡೆಡ್‌ ಸ್ಟೋರೇಜ್‌ ಸೇರಿ 9.8 ಟಿಎಂಸಿ ಅಡಿ ನೀರು ಇದೆ. 2016ರ ಜುಲೈ 8ರಂದು 16 ಟಿಎಂಸಿ ಅಡಿ ನೀರು ಇತ್ತು. ಕಳೆದ ವರ್ಷ ಬರಗಾಲದಿಂದ ತೊಂದರೆ ಉಂಟಾಗಿತ್ತು. ಈ ವರ್ಷ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ. ಜೂನ್‌ನಲ್ಲಿ ಮಳೆ ಕೈಕೊಟ್ಟಿರುವುದು ಇದಕ್ಕೆ ಕಾರಣ’ ಎಂದು ಕೆಆರ್‌ಎಸ್‌ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್‌ ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕುಡಿಯುವ ಉದ್ದೇಶಕ್ಕೆ 4 ಟಿಎಂಸಿ ಅಡಿ ನೀರು ಇದೆ. ಹೀಗಾಗಿ, ಮೈಸೂರು, ಮಂಡ್ಯ, ಬೆಂಗಳೂರು ಜನರ  ಕುಡಿಯುವ ನೀರಿಗೆ ಸದ್ಯಕ್ಕೆ ತೊಂದರೆ ಇಲ್ಲ. ಮಳೆ ಬಾರದೆ ಇದೇ ಪರಿಸ್ಥಿತಿ ಮುಂದುವರೆದರೆ ಮಳೆಗಾಲದಲ್ಲೇ ನೀರಿಗೆ ತತ್ವಾರ ಉಂಟಾಗುವ ಆತಂಕವಿದೆ.

ಸಾಮಾನ್ಯವಾಗಿ ಜೂನ್‌, ಜುಲೈನಲ್ಲಿ ಉತ್ತಮ ಮಳೆಯಾಗಿ ಜಲಾಶಯಕ್ಕೆ ನೀರು ಹರಿದು ಬಂದರೆ ಡಿಸೆಂಬರ್‌ ವೇಳೆಗೆ ಭತ್ತದ ಬೆಳೆಯಿಂದ ರೈತರಿಗೆ ಆದಾಯ ಸಿಗುತ್ತದೆ. ಆದರೀಗ ಮಳೆ ಕೊರತೆ ಚಿಂತೆಗೀಡು ಮಾಡಿದೆ.

ತುಂಬದ ಹಾರಂಗಿ: ಕಳೆದ ವರ್ಷ ಈ ವೇಳೆಗೆ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿತ್ತು. ಆದರೆ, ಈ ಬಾರಿ ಕೊಡಗಿನಲ್ಲಿ ಮುಂಗಾರು ದುರ್ಬಲಗೊಂಡಿರುವುದರಿಂದ ನೀರಿನ ಸಂಗ್ರಹ ಪ್ರಮಾಣ ತೀರಾ ಕಡಿಮೆಯಾಗಿದೆ. ಜಲಾನಯನ ಪ್ರದೇಶದಲ್ಲಿ ವಾಡಿಕೆ ಮಳೆಯಾಗಿಲ್ಲ. 8.5 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ ಈಗ 3.23 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ 5.16 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

ಕಬಿನಿ ಭರವಸೆ:  ವೈನಾಡಿನಲ್ಲಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದ ಒಳಹರಿವು ಹೆಚ್ಚಿದೆ. ಹೀಗಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹದಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲ. ಆದರೆ, ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ 17 ಅಡಿ ನೀರು ಕಡಿಮೆ ಸಂಗ್ರಹವಾಗಿದೆ.

***

ಕಳೆದ ವರ್ಷ ಬರಗಾಲವಿತ್ತು. ಈ ಬಾರಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೀಗಾಗಿ, ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ
ಬಸವರಾಜ ,ಕಾರ್ಯನಿರ್ವಾಹಕ ಎಂಜಿನಿಯರ್‌, ಕೆಆರ್‌ಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.