ADVERTISEMENT

ಜಾತಿವಾರು ಸಮೀಕ್ಷೆಗೆ ನಿರ್ಧಾರ

ರಾಜ್ಯ ಸಚಿವ ಸಂಪುಟ ಸಭೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:45 IST
Last Updated 12 ಡಿಸೆಂಬರ್ 2013, 19:45 IST

ಬೆಂಗಳೂರು: ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಗುರುತಿಸು­ವುದಕ್ಕೆ ಪೂರಕವಾಗಿ ನಡೆಸಲು ಉದ್ದೇಶಿಸಿರುವ ಜಾತಿವಾರು ಮನೆ–ಮನೆ ಸಮೀಕ್ಷೆಗೆ 2014ರ ಏಪ್ರಿಲ್‌–ಮೇ ತಿಂಗಳಲ್ಲಿ ಚಾಲನೆ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಎರಡು ಹಂತಗಳಲ್ಲಿ ಸಮೀಕ್ಷೆ ನಡೆ­ಯಲಿದೆ. ಮೊದಲ ಹಂತದ ಸಮೀಕ್ಷೆ­ಯನ್ನು 2014ರ ಏಪ್ರಿಲ್‌–ಮೇ ಅವಧಿ­ಯಲ್ಲಿ ನಡೆಸುವ ತೀರ್ಮಾನ­ವನ್ನು ಸರ್ಕಾರ ಕೈಗೊಂಡಿದೆ. ಎರಡನೇ ಹಂತದ ಸಮೀಕ್ಷೆ ನಂತರದ ದಿನಗಳಲ್ಲಿ ನಡೆ­ಯುತ್ತದೆ. ಮೊದಲ ಹಂತದ ಸಮೀಕ್ಷೆಗೆ ರೂ 14.71 ಕೋಟಿ ವೆಚ್ಚವಾಗುತ್ತದೆ. ಎರಡನೇ ಹಂತದ ಸಮೀಕ್ಷೆಗೆ ರೂ 97.30 ಕೋಟಿ ವೆಚ್ಚವಾಗಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲಾ­ಗುತ್ತದೆ. ಈ ಕಾರಣದಿಂದ ಏಪ್ರಿಲ್‌–ಮೇ ಅವಧಿ ಸೂಕ್ತ ಎಂದು ತೀರ್ಮಾನಿಸಲಾಗಿದೆ. ಉಳಿದಂತೆ ಕಂದಾಯ, ಪೌರಾಡಳಿತ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ನೌಕರರನ್ನೂ ಬಳಸಿಕೊಳ್ಳ­ಲಾಗುವುದು. 2011ರ ಜನಗಣತಿಯ ಮಾದರಿಯಲ್ಲೇ ಈ ಸಮೀಕ್ಷೆಯೂ ನಡೆಯುತ್ತದೆ ಎಂದರು.

ದೇಶದಾದ್ಯಂತ ಜಾತಿವಾರು ಮನೆ–ಮನೆ ಸಮೀಕ್ಷೆ ನಡೆಸಲು ನಿರ್ಧರಿಸಿದ್ದ ಕೇಂದ್ರ ಸರ್ಕಾರ, ಪ್ರಾಯೋಗಿಕವಾಗಿ ಕರ್ನಾಟಕ­ದಲ್ಲಿ ಅದನ್ನು ನಡೆಸಲು 2005ರಲ್ಲಿ ತೀರ್ಮಾನಿಸಿತ್ತು. 2005ರ ಬಜೆಟ್‌ನಲ್ಲಿ ಸಮೀಕ್ಷೆಗೆ ರಾಜ್ಯದ ಪಾಲಿನ ಹಣವನ್ನೂ ಒದಗಿಸಲಾಗಿತ್ತು. ಆಗಲೇ ಒಟ್ಟು ರೂ 21 ಕೋಟಿಯನ್ನು ಹಿಂದು­ಳಿದ ವರ್ಗಗಳ ಆಯೋಗಕ್ಕೆ ಸಮೀಕ್ಷೆ ಆರಂಭಕ್ಕಾಗಿ ಬಿಡುಗಡೆ ಮಾಡಲಾಗಿತ್ತು. ಡಾ.ಸಿ.ಎಸ್‌.­ದ್ವಾರಕಾನಾಥ್‌ ನೇತೃತ್ವದ ಆಯೋಗ ಎರಡು ವರ್ಷಗಳಿಗೂ ಹೆಚ್ಚುಕಾಲ ಪೂರ್ವಸಿದ್ಧತೆ ನಡೆಸಿತ್ತು. ನಂತರ ಬಂದ ಎನ್‌.ಶಂಕರಪ್ಪ ನೇತೃತ್ವದ ಆಯೋಗವೂ ತಯಾರಿ ಮುಂದುವರಿಸಿತ್ತು. ಆದರೂ, ಈವರೆಗೆ ಸಮೀಕ್ಷೆಗೆ ಚಾಲನೆಯೇ ದೊರೆತಿಲ್ಲ.

‘ಹಿಂದುಳಿದ ವರ್ಗಗಳ ಆಯೋಗದ ಮೇಲುಸ್ತುವಾರಿಯಲ್ಲಿ ಸಮೀಕ್ಷೆ ನಡೆಯುತ್ತದೆ. ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಗಳು ಖಾಲಿ ಇವೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಶೀಘ್ರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ’ ಎಂದು ಜಯಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.