ADVERTISEMENT

ಜಾಮೀನು ನಕಾರ -ಹೈಕೋರ್ಟ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಲೂರು ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ವಕೀಲ ರವಿ ಬಿ. ನಾಯಕ್ ತಿಳಿಸಿದರು.

ವಿಶೇಷ ಕೋರ್ಟ್ ಆದೇಶದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಸೋಮವಾರವೇ ಹೈಕೋರ್ಟ್ ಮೊರೆ ಹೋಗುವುದಾಗಿ ಅವರು ತಿಳಿಸಿದರು.
 
`ತಮಗೆ ಅನುಕೂಲವಾಗುವ ತೀರ್ಪು ನ್ಯಾಯಾಲಯದಿಂದ ಬರುವ ಸಾಧ್ಯತೆ ಇಲ್ಲ ಎಂಬ ಭಾವನೆ ಮೂಡಿದಾಗ ನ್ಯಾಯಪೀಠದ ಮೇಲೆ ನಂಬಿಕೆ ಇಲ್ಲ ಎಂಬ ಅರ್ಥ ಬರುವ ಪ್ರಮಾಣಪತ್ರ ಸಲ್ಲಿಸುವುದು ಸರಿಯಲ್ಲ~ ಎಂದು ವಕೀಲ ಸಿರಾಜಿನ್ ಬಾಷಾ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
 
`ಬಾಷಾ ಅವರು ಬೇರೊಬ್ಬರ ಕೈಯಲ್ಲಿ ದಾಳವಾಗಿದ್ದಾರೆ. ಬಾಷಾ ಅವರನ್ನು ದಾಳದಂತೆ ಆಡಿಸುತ್ತಿರುವ `ಮಹಾನುಭಾವರು~ ಯಾರು ಎಂಬುದು ನಿಮಗೂ ತಿಳಿದಿರಬಹುದು ಎಂದರು. ನಾಯಕ್ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಯಡಿಯೂರಪ್ಪ ಅವರ ಪರ ವಾದಿಸಿದ್ದರು.

`ಇದೇ ಮೊದಲು~:
`ಖಾಸಗಿ ದೂರಿನ ಹಿನ್ನೆಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವುದು ದೇಶದ ಇತಿಹಾಸದಲ್ಲಿ ಇದು ಎರಡನೆಯ ಬಾರಿ. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲನೆಯದು~ ಎಂದು ದೂರುದಾರ ಬಾಷಾ ಅವರ ಪರ ವಕೀಲ ಸಿ.ಎಚ್. ಹನುಮಂತರಾಯ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.