ADVERTISEMENT

ಜಿಎಸ್‌ಟಿ ಜಾರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಬೆಂಗಳೂರು: ‘ಕೇಂದ್ರ ಸರ್ಕಾರ ರಾಜ್ಯಗಳ ಹಿತವನ್ನು ಕಡೆಗಣಿಸಿ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ)ಯನ್ನು ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ, ಇದರಿಂದ ರಾಜ್ಯಗಳಿಗೆ ತೆರಿಗೆ ಸಂಗ್ರಹಣೆಯಲ್ಲಿ ಖೋತಾ ಆಗುತ್ತದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದರು. ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಶೇ 4ರ ಬಡ್ಡಿಯಲ್ಲಿ ಸಾಲ, ಸಾಮಾಜಿಕ ಭದ್ರತೆ, ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಒತ್ತು ನೀಡಿರುವುದು ಒಳ್ಳೆಯದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ಮೆಟ್ರೊ’ ಯೋಜನೆಗೆ 500 ಕೋಟಿ ರೂಪಾಯಿ ನೀಡಿರುವುದು ಸ್ವಾಗತಾರ್ಹ. ನರ್ಮ್ ಯೋಜನೆಗೂ 12,525 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಗ್ರಾಮೀಣಾಭಿವೃದ್ಧಿ,ವಿದ್ಯುತ್, ಮೂಲೌಕರ್ಯಕ್ಕೆ ಒತ್ತು ನೀಡಿದಂತೆ ಕಾಣುತ್ತಿಲ್ಲ. ಹಣದುಬ್ಬರ ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಜೆಟ್ ಗಾತ್ರ ಒಟ್ಟಾರೆ ಶೇ 12.4ರಷ್ಟು ಜಾಸ್ತಿ ಆಗಿದ್ದರೂ, ಕೃಷಿಗೆ ಶೇ 3ರಷ್ಟು ಕಡಿಮೆ ಆಗಿದೆ. ರಕ್ಷಣಾ ಇಲಾಖೆಯ ಅನುದಾನವೂ ಖೋತಾ ಆಗಿದೆ. ರಸಗೊಬ್ಬರ, ಪೆಟ್ರೋಲ್, ಆಹಾರ ಧಾನ್ಯಗಳ ಸಬ್ಸಿಡಿ ಕಡಿಮೆ ಆಗಿರುವುದರಿಂದ ಇನ್ನಷ್ಟು ಬೆಲೆ ಏರಿಕೆ ಆಗುವ ಆತಂಕವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.