ADVERTISEMENT

ಜಿ.ನಾರಾಯಣ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2011, 19:30 IST
Last Updated 21 ನವೆಂಬರ್ 2011, 19:30 IST
ಜಿ.ನಾರಾಯಣ ಅಂತ್ಯಕ್ರಿಯೆ
ಜಿ.ನಾರಾಯಣ ಅಂತ್ಯಕ್ರಿಯೆ   

ಮದ್ದೂರು: ಗಾಂಧಿವಾದಿ ದೇಶಹಳ್ಳಿ ಜಿ.ನಾರಾಯಣ ಅವರ ಅಂತ್ಯಕ್ರಿಯೆ  ಸೋಮವಾರ ಅವರ ಹುಟ್ಟೂರು ತಾಲ್ಲೂಕಿನ ದೇಶಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಡನೆ ನೆರವೇರಿತು.

ಜಿ.ನಾರಾಯಣ ಅಂತಿಮ ಆಸೆಯಂತೆ ಅವರ ದೇಹವನ್ನು ದಹಿಸದೇ ಹುಟ್ಟೂರಿನ ಅವರ ತೋಟದ ಮಣ್ಣಿನಲ್ಲಿ ಹೂಳಲಾಯಿತು. `ಗಾಂಧಿವಾದಿ ಜಿ.ನಾರಾಯಣ ಅಮರರಾಗಲಿ, ನಾಡೋಜ ಜಿ.ನಾರಾಯಣ ಅವರಿಗೆ ಜಯವಾಗಲಿ~ ಎಂಬ ಘೋಷಣೆ ಮೊಳಗಿದವು.

ಜಿ.ನಾರಾಯಣ ಅವರ ಹಿರಿಯ ಪುತ್ರ ರಾಘವೇಂದ್ರ ಅಂತಿಮ ಸಂಸ್ಕಾರದ ವಿಧಿ ವಿಧಾನ ನೆರವೇರಿಸಿದರು. ಪತ್ನಿ ಯಶೋಧ, ಪುತ್ರರಾದ ಜಗದೀಶ್, ರಾಘವೇಂದ್ರ, ಒಡನಾಡಿಗಳು, ಅಭಿಮಾನಿಗಳು ಮತ್ತು ಬಂಧುವರ್ಗದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಯಲ್ಲಿ ಜಿ.ನಾರಾಯಣ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ನಡೆಯಿತು. ನಂತರ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜವಿರಿಸಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವರಕ್ಷೆ ನೀಡಲಾಯಿತು.

ಜಿಲ್ಲಾಧಿಕಾರಿ ಪಿ.ಸಿ.ಜಾಫರ್, ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಹೆಚ್ಚುವರಿ ಎಸ್ಪಿ ರಾಜಣ್ಣ, ಉಪವಿಭಾಗಾಧಿಕಾರಿ ರಂಗಪ್ಪ, ಬಸವರಾಜು, ತಹಶೀಲ್ದಾರ್ ವಿ.ನಾಗರಾಜು, ಭೂಸ್ವಾಧೀನಾಧಿಕಾರಿ ಪೂರ್ಣಿಮ ಅಂತಿಮ ಗೌರವ ಸಲ್ಲಿಸಿದರು.

ಇದಕ್ಕೂ ಮುನ್ನ ಜಿ.ನಾರಾಯಣ ಅವರ ಪಾರ್ಥಿವ ಶರೀರವನ್ನು ನಿಡಘಟ್ಟ ಗಡಿ ಬಳಿ ಜಿಲ್ಲಾಡಳಿತದ ವತಿಯಿಂದ ಬರಮಾಡಿಕೊಂಡು ಗೌರವ ಸಲ್ಲಿಸಲಾಯಿತು. ನಂತರ ಶಿವಪುರ ಧ್ವಜ ಸತ್ಯಾಗ್ರಹಸೌಧದ ಬಳಿ ಕೆಲ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.