ಹೊಸಪೇಟೆ: ಪ್ರವಾಸಿಗರನ್ನು ಆಕರ್ಷಿಸಲು ಮೇಘಾಲಯ ಪ್ಯಾರಾಗ್ಲೈಡರ್ ಅಸೋಸಿಯೇಷನ್ ಇತ್ತೀಚಿಗೆ ಹಂಪಿಯಲ್ಲಿ ಆರಂಭಿಸಿರುವ ಪ್ಯಾರಾಗ್ಲೈಡರ್ ಹಾರಾಟದಿಂದ ಇಲ್ಲಿನ ಜೀವ ವೈವಿಧ್ಯಕ್ಕೆ ಧಕ್ಕೆಯಾಗುವ ಭೀತಿ ಎದುರಾಗಿದೆ.
‘ಜಿಲ್ಲಾಡಳಿತ ಹಾಗೂ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಆರಂಭಿಸಿರುವ ಪ್ಯಾರಾಗ್ಲೈಡರ್ ಹಾರಾಟದಿಂದ ಇಲ್ಲಿಯ ಪಕ್ಷಿ ಹಾಗೂ ಪ್ರಾಣಿ ಸಂಕುಲದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ. ಬೆಳಿಗ್ಗೆ ಹಾಗೂ ಸಂಜೆಯ ಪ್ರಶಾಂತ ವಾತಾವರಣದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಪ್ರಾಣಿ ಮತ್ತು ಪಕ್ಷಿಗಳು, ಕೆಳಮಟ್ಟದಲ್ಲಿ ಹಾರಾಡುವ ಪ್ಯಾರಾಗ್ಲೈಡರ್‌ನಿಂದ ಉಂಟಾಗುವ (90 ಡೆಸಿಮಲ್‌ಗಿಂತ ಹೆಚ್ಚು ಅಂದರೆ ಮೋಟರ್‌ಬೈಕ್ ಶಬ್ದದಷ್ಟು) ಶಬ್ದದಿಂದಾಗಿ ಗಾಬರಿಗೀಡಾಗುತ್ತಿವೆ’ ಎಂದು ಪರಿಸರ ತಜ್ಞ ಅಬ್ದುಲ್ ಸಮದ್ ಕೊಟ್ಟೂರು ಕಳವಳ ವ್ಯಕ್ತಪಡಿಸಿದರು.
‘ಇಲ್ಲಿನ ಬೆಟ್ಟಗಳ ಅಂಚಿನಲ್ಲಿಯೇ ಪ್ಯಾರಾಗ್ಲೈಡರ್ ಹಾರಾಡುವುದರಿಂದ ಪರಿಸರ ಮತ್ತು ಜೀವ ವೈವಿಧ್ಯಕ್ಕೆ ಹಾನಿಯಾಗುವ ಸಾಧ್ಯತೆಗಳಿದ್ದು, ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.
ಪ್ರಾಣಿ, ಪಕ್ಷಿ ಸಂಕುಲದ ಬೀಡು: ಹಂಪಿಗೆ ಭೇಟಿ ನೀಡುವ ಪ್ರವಾಸಿಗರು ಈಗ ಕೇವಲ ವಿಜಯನಗರ ಕಾಲದ ವಾಸ್ತುಶಿಲ್ಪ ವೀಕ್ಷಣೆಗೆ ಮಾತ್ರ ಸೀಮಿತವಾಗುತ್ತಿಲ್ಲ. ಈ ಪ್ರದೇಶದಲ್ಲಿನ ಜೀವ ವೈವಿಧ್ಯಕ್ಕೂ ಪ್ರವಾಸಿಗರು ಅಷ್ಟೇ ಮಹತ್ವ ನೀಡುತ್ತಿದ್ದಾರೆ. ಹಂಪಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ದರೋಜಿ ಕರಡಿಧಾಮದಲ್ಲಿ ನೂರಾರು ಕರಡಿಗಳು ಆಶ್ರಯ ಪಡೆದಿವೆ. ಚಿರತೆ ಸಂತತಿಯೂ ಹೆಚ್ಚಾಗಿದೆ. ಇಲ್ಲಿನ ತುಂಗಭದ್ರಾ ತಟವನ್ನು ‘ನೀರುನಾಯಿ ಸಂರಕ್ಷಿತ ಪ್ರದೇಶ’ವೆಂದು ಸರ್ಕಾರ ಘೋಷಿಸಿದೆ.
ನೂರಾರು ಪ್ರಭೇದದ ಸ್ಥಳೀಯ ಹಾಗೂ ವಲಸೆ ಪಕ್ಷಿಗಳಿಗೆ ಹಂಪಿ ಆಶ್ರಯ ನೀಡಿದೆ. ಈಗಾಗಲೇ ಅಳಿವಿನ ಅಂಚಿನಲ್ಲಿರುವ ‘ಎಲ್ಲೊ ಥ್ರೋಟೆಡ್ ಬುಲ್‌ಬುಲ್’ ಹಾಗೂ ‘ಪೇಂಟೆಡ್ ಸ್ಪುಫೌಲ್’ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಹಂಪಿಯಲ್ಲಿ ನೆಲೆಸಿವೆ. ಮಧ್ಯ ಏಷ್ಯಾದಿಂದ ಬರುವ ರೋಸಿ ಸ್ಟಾರ್ಲಿಂಗ್’, ಬಂಟಿಂಗ್ಸ್, ಬ್ಲ್ಯಾಕ್ ರೆಡ್‌ಸ್ಟಾರ್ಕ್ ಹಾಗೂ ಎಲ್ಲೊ ವ್ಯಾಗ್‌ಟೆಲ್ ಮತ್ತಿತರ ವಲಸೆ ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿಗೆ ಬರುತ್ತವೆ. ಈ ಎಲ್ಲ ಅಂಶಗಳನ್ನು ಮನಗಂಡು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಹಾಗೂ ಅಂತರರಾಷ್ಟ್ರೀಯ ಪಕ್ಷಿ ಸಂರಕ್ಷಣಾ ಸಂಘಟನೆಗಳು ಹಂಪಿ ಹಾಗೂ ದರೋಜಿ ಪ್ರದೇಶವನ್ನು ‘ಪ್ರಮುಖ ಪಕ್ಷಿಗಳ ಪ್ರದೇಶ’ ಎಂದು ಗುರುತಿಸಿವೆ.
‘ಅತ್ಯಂತ ಸೂಕ್ಷ್ಮ ಜೀವ ವೈವಿಧ್ಯ ಪ್ರದೇಶವಾಗಿರುವ ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ಯಾರಾಗ್ಲೈಡರ್ ಹಾರಾಟ ಸೂಕ್ತವಲ್ಲ. ಇದರಿಂದ ಇಲ್ಲಿನ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಲಿದ್ದು, ಅಳಿವಿನ ಅಂಚಿನಲ್ಲಿರುವ ಜೀವಿಗಳು ನಮ್ಮಿಂದ ಇನ್ನಷ್ಟು ದೂರ ಸಾಗಲಿವೆ’ ಎಂದು ಪ್ರವಾಸಿಗ, ಬೆಂಗಳೂರಿನ ರಾಮಮೋಹನ ರೆಡ್ಡಿ ಆತಂಕ ವ್ಯಕ್ತಪಡಿಸುತ್ತಾರೆ.
‘ಪ್ಯಾರಾಗ್ಲೈಡರ್ ಹಾರಾಟದಿಂದ ಇಲ್ಲಿನ ಜೀವ ಸಂಕುಲಕ್ಕೆ ಯಾವ ತೊಂದರೆಯೂ ಇಲ್ಲ. ಪ್ಯಾರಾಗ್ಲೈಡರ್‌ನಿಂದ ಹೊರಬರುವ ಶಬ್ದ ಹಾಗೂ ಹೊಗೆ ತೀರಾ ಕಡಿಮೆ ಇದ್ದು, ಇಲ್ಲಿನ ಜೀವ ವೈವಿಧ್ಯಕ್ಕೆ ಹಾನಿಯಾಗದ ರೀತಿಯಲ್ಲಿ ಈ ಸೇವೆಯನ್ನು ಒದಗಿಸಲಾಗುವುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
₹ 3,500 ಶುಲ್ಕ
ತಿಂಗಳ ಹಿಂದಷ್ಟೇ ಪ್ಯಾರಾಗ್ಲೈಡರ್ ಹಾರಾಟ ಆರಂಭವಾಗಿದ್ದು, ಪ್ರತಿದಿನ ಬೆಳಿಗ್ಗೆ 6 ರಿಂದ 8ರ ವರೆಗೆ ಹಾಗೂ ಸಂಜೆ 4 ರಿಂದ 6.30 ರವರೆಗೆ ಪ್ರವಾಸಿಗರು ಇದರ ಸೌಲಭ್ಯ ಪಡೆಯಬಹುದಾಗಿದೆ. ಸುಮಾರು 15 ನಿಮಿಷಗಳ ಹಾರಾಟಕ್ಕೆ ತಲಾ ₹ 3,500 ಶುಲ್ಕ ನಿಗದಿಪಡಿಸಲಾಗಿದೆ.
* ಪ್ಯಾರಾಗ್ಲೈಡರ್ ಹಾರಾಟದಿಂದ ಉಂಟಾಗಿರುವ ತೊಂದರೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಇಲ್ಲಿನ ಜೀವ ವೈವಿಧ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು
-ಎಂ.ಪವನಕುಮಾರ್, ಆಯುಕ್ತರು
ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.