ADVERTISEMENT

ಜುಬೈರ್ ಹತ್ಯೆ: ಸ್ವಕ್ಷೇತ್ರದಲ್ಲೇ ಖಾದರ್‌ಗೆ ಘೇರಾವ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಜುಬೈರ್ ಹತ್ಯೆ: ಸ್ವಕ್ಷೇತ್ರದಲ್ಲೇ ಖಾದರ್‌ಗೆ ಘೇರಾವ್
ಜುಬೈರ್ ಹತ್ಯೆ: ಸ್ವಕ್ಷೇತ್ರದಲ್ಲೇ ಖಾದರ್‌ಗೆ ಘೇರಾವ್   

ಉಳ್ಳಾಲ: ಹತ್ಯೆಗೊಳಗಾದ ಜುಬೈರ್ ಅವರ ಮುಕ್ಕಚ್ಚೇರಿಯ ಮನೆಗೆ ಭೇಟಿ ನೀಡಲು ಬಂದ ಸಚಿವ ಖಾದರ್ ಅವರನ್ನು ಉದ್ರಿಕ್ತ ಗುಂಪು, ಘೇರಾವ್ ಹಾಕಿ ವಾಪಸ್‌ ಕಳುಹಿಸಿತು.

ಶುಕ್ರವಾರ ಸಂಜೆ ಸ್ಥಳಕ್ಕೆ ಬಂದ ಸಚಿವ ಖಾದರ್‌ ಅವರನ್ನು ದೂಡಿಕೊಂಡೇ ಹಿಂದಕ್ಕೆ ಕಳುಹಿಸಿದ ಗುಂಪು, ಕಲ್ಲು ತೂರಾಟ ನಡೆಸಿತು.
ಜುಬೈರ್ ಹತ್ಯೆಗೆ ಸಚಿವ ಖಾದರ್ ಪರೋಕ್ಷ ಕಾರಣವೆಂದು ಆರೋಪಿಸಿದ ಮುಕ್ಕಚ್ಚೇರಿ ನಿವಾಸಿಗಳು, ಜುಬೈರ್ ದಫನ ಸಂದರ್ಭವೂ ಸಚಿವರು ಬಾರದೇ ಇರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶುಕ್ರವಾರ ಸಂಜೆ ಡಿವೈಎಫ್ಐ ನೇತೃತ್ವದಲ್ಲಿ ಮುಕ್ಕಚ್ಚೇರಿ ಮಸೀದಿ ಎದುರು, ಜುಬೈರ್ ಹತ್ಯೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ, ನೂರಕ್ಕೂ ಅಧಿಕ ಸ್ಥಳೀಯರು ಜಮಾಯಿಸಿದ್ದರು.

ಇದೇ ಸಂದರ್ಭ ಸಚಿವ ಖಾದರ್ ಅವರು ಪೊಲೀಸ್ ವಾಹನದ ಬೆಂಗಾವಲಿನೊಂದಿಗೆ ಜುಬೈರ್ ಮನೆಗೆ ಭೇಟಿ ನೀಡಲು ಮುಕ್ಕಚ್ಚೇರಿಗೆ ಬಂದರು. ಅಷ್ಟರಲ್ಲಿ ಪ್ರತಿಭಟನೆ ನೋಡಲು ಸೇರಿದ್ದ ಸ್ಥಳೀಯರು, ‘ಜುಬೈರ್ ಮನೆಗೆ ಸಚಿವ ಖಾದರ್ ಭೇಟಿ ಕೊಡಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಸಚಿವ ಖಾದರ್ ವಾಹನವನ್ನು ತಡೆಹಿಡಿದರು.

ADVERTISEMENT

ಸಚಿವರು ಕೆಳಗೆ ಇಳಿಯುತ್ತಿದ್ದಂತೆ ಗುಂಪು ಅವರನ್ನು ಮುಂದೆ ಬಾರದಂತೆ ತಡೆಯೊಡ್ಡಿ, ಅವರನ್ನು ಹಾಗೂ ಅವರ ಬೆಂಬಲಿಗರನ್ನು ಅರ್ಧ ಕಿ.ಮೀ. ಉದ್ದಕ್ಕೂ ದೂಡುತ್ತಲೇ ವಾಪಸ್‌ ಕಳುಹಿಸಿತು. ಮಾತಿನ ಚಕಮಕಿ ನಡೆಸುತ್ತಿದ್ದಂತೆ, ಸಚಿವರಿಗೆ ವಾಪಸ್‌ ಹೋಗುವಂತೆ ಬೆಂಬಲಿಗರು ಮನವಿ ಮಾಡಿದರು. ಕಾಂಗ್ರೆಸ್ ಮುಖಂಡರೊಬ್ಬರ ಕಾರಿನಲ್ಲಿ ಸ್ಥಳದಿಂದ ವಾಪಸಾದರು. ಉಳ್ಳಾಲ ಪೊಲೀಸರು ಹಾಗೂ ಗಸ್ತು ವಾಹನದಲ್ಲಿದ್ದ ಪೊಲೀಸರು
ಗುಂಪನ್ನು ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕಾರು ತೆರಳುತ್ತಿದ್ದಂತೆ ಗುಂಪು ವಾಹನದ ಮೇಲೆ ಕಲ್ಲು ತೂರಾಟ ನಡೆಸಿತಾದರೂ ವಾಹನಕ್ಕೆ ಯಾವುದೇ ಹಾನಿಯಾಗಿಲ್ಲ.

ಮುಕ್ಕಚ್ಚೇರಿ ಮಸೀದಿ ಎದುರು ಬುಧವಾರ ಸ್ಥಳೀಯ ನಿವಾಸಿ, ಬಿಜೆಪಿ ಕಾರ್ಯಕರ್ತ ಜುಬೈರ್ ಅವರನ್ನು ಐವರ ತಂಡ ತಲವಾರಿನಿಂದ ಕಡಿದು ಹತ್ಯೆ ಮಾಡಿತ್ತು.

ಭರ್ಜರಿ ಸ್ವಾಗತ: ಆದರೆ, ರಾತ್ರಿ ಅಲ್ಲಿಗೆ ಭೇಟಿ ನೀಡಿದ ಸಂಸದ ನಳೀನ್‌ಕುಮಾರ್‌ ಕಟೀಲ್‌ ಹಾಗೂ ಅವರ ಬೆಂಬಲಿಗಿರಿಗೆ ಸ್ಥಳೀಯರು ಭರ್ಜರಿ ಸ್ವಾಗತ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.