ADVERTISEMENT

ಜುಲೈನಲ್ಲೇ ಬರದ ಛಾಯೆ

ವಾಡಿಕೆಗಿಂತ ಶೇ 22ರಷ್ಟು ಕೊರತೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST
ಜುಲೈನಲ್ಲೇ ಬರದ ಛಾಯೆ
ಜುಲೈನಲ್ಲೇ ಬರದ ಛಾಯೆ   

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಹುಸಿಯಾಗಿದೆ.  ಮುಂಗಾರು ಮತ್ತೆ ಕೈಕೊಟ್ಟಿದ್ದು ಜೂನ್‌ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ 22ರಷ್ಟು ಕಡಿಮೆ ಮಳೆಯಾಗಿದೆ.

ರಾಜ್ಯದ 176 ತಾಲ್ಲೂಕುಗಳ ಪೈಕಿ ಕಳೆದ ವರ್ಷ 160 ತಾಲ್ಲೂಕುಗಳು  ಬರಪೀಡಿತವಾಗಿದ್ದವು.  ರಾಜ್ಯ ಮತ್ತೊಂದು ಬರಗಾಲ ಎದುರಿಸುವ ಸೂಚನೆ ಈಗ ಜುಲೈನಲ್ಲೇ ಕಾಣಿಸಿಕೊಂಡಿವೆ. ಬರಗಾಲದಿಂದ ಈ ವರ್ಷವಾದರೂ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಪುನಃ ಆಘಾತಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಡಿಕೆ ಮಳೆಗಿಂತ ಶೇ 19ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ಕೊರತೆ ಎಂದೇ ಪರಿಗಣಿಸಲಾಗುತ್ತದೆ. ಈ ಪ್ರಕಾರ  ಒಟ್ಟು 21 ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿವೆ.   

ADVERTISEMENT

ದಕ್ಷಿಣದಲ್ಲಿ ಅತಿ ಹೆಚ್ಚು ಕೊರತೆ: ಕೃಷಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ದಕ್ಷಿಣ ಒಳನಾಡಿನಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಇಲ್ಲಿ ವಾಡಿಕೆಗಿಂತ  ಶೇ 43ರಷ್ಟು  ಕಡಿಮೆ  ಮಳೆಯಾಗಿದೆ.   ಚಾಮರಾಜನಗರ, ಮಂಡ್ಯ , ಮೈಸೂರು, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳು ಶೇ 50ಕ್ಕಿಂತಲೂ ಹೆಚ್ಚು ಮಳೆಯ ಅಭಾವ ಎದುರಿಸುತ್ತಿವೆ.

ಮಲೆನಾಡಿನಲ್ಲಿ  ಮಳೆಯ ಪ್ರಮಾಣ ಶೇ 35ರಷ್ಟು  ಹಾಗೂ ಕರಾವಳಿಯಲ್ಲಿ  ಶೇ 15ರಷ್ಟು  ಕಡಿಮೆಯಾಗಿದೆ. 

ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹೋಲಿಸಿದರೆ, ಉತ್ತರ ಒಳನಾಡಿನಲ್ಲಿ ಮಳೆ ನಿರಾಶೆಯನ್ನು ಉಂಟು ಮಾಡಿಲ್ಲ. ಆದರೂ, ಇಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತ  ಶೇ 10ರಷ್ಟು ಕಡಿಮೆ ಇದೆ.  ಐದಾರು ವರ್ಷಗಳಿಂದ ತೀವ್ರ ಬರಗಾಲವನ್ನು ಎದುರಿಸಿದ್ದ ಇಲ್ಲಿನ ಆರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ.

ಕೆಲವು ಪ್ರದೇಶಗಳಲ್ಲಿ ಜೂನ್‌ ತಿಂಗಳಲ್ಲಿ ಸ್ವಲ್ಪಮಟ್ಟಿನ ಮಳೆಯಾಗಿತ್ತು. ಆದರೆ, ಜುಲೈನಲ್ಲಿ ಶೇ 52ರಷ್ಟು ಕಡಿಮೆ ಮಳೆಯಾಗಿದೆ. ಕಳೆದ ವಾರ ಮಳೆಯ ಪ್ರಮಾಣ ಮತ್ತಷ್ಟು ಕುಸಿದಿದ್ದು, ಕೊರತೆಯ ಪ್ರಮಾಣ ಶೇ 63ಕ್ಕೆ ಹೆಚ್ಚಿದೆ. 

ಕಾವೇರಿ ಜಲಾನಯನ ಪ್ರದೇಶದಲ್ಲಿ  ಮಳೆಯ ಪ್ರಮಾಣ ತೀವ್ರ ಕುಸಿತ ಕಂಡಿರುವುದು ಈ ಭಾಗದ ರೈತರನ್ನು ಆತಂಕಕ್ಕೀಡುಮಾಡಿದೆ.
ಇನ್ನೂ ಐದು ದಿನ ಮಳೆ ಇಲ್ಲ: ‘ರಾಜ್ಯದಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುವುದು ಬಿಟ್ಟರೆ, ಇನ್ನೂ ಐದು ದಿನ ಭಾರಿ ಮಳೆಯಾಗುವ ಸಾಧ್ಯತೆ ಕಡಿಮೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ವಿಜ್ಞಾನಿ ಎಸ್‌.ಎಸ್‌.ಎಂ. ಗವಾಸ್ಕರ್‌ ತಿಳಿಸಿದರು.

‘ಮುಂಗಾರು ಬಿರುಸಾಗುವ ಪೂರಕ ವಾಯುಗುಣ ಇಲ್ಲ. ಇದರಿಂದ ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದೆ. ಪ್ರಬಲವಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಈಗಿನ ಕೊರತೆ ನೀಗಿಸುವ ಮಟ್ಟದಲ್ಲಿ ಮಳೆಯಾಗುವುದಿಲ್ಲ’ ಎಂದು ವಿವರಿಸಿದರು.

ಬಿತ್ತನೆಯೂ ಇಳಿಮುಖ
ಈ ಹಂಗಾಮಿನಲ್ಲಿ ರಾಜ್ಯದಲ್ಲಿ 73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಇಟ್ಟುಕೊಳ್ಳಲಾಗಿದೆ. ಈವರೆಗೆ 28.19 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 39.77 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ‘ಬಿತ್ತನೆ ಬಳಿಕ, ಮಳೆ ಕೊರತೆ
ಯಿಂದಾಗಿ  ಕೆಲವೆಡೆ ಬೀಜಗಳು ಮೊಳಕೆಯೊಡೆದಿಲ್ಲ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.