ADVERTISEMENT

ಜೂನ್ 1ರೊಳಗೆ ಡಿಜಿಪಿ ಹುದ್ದೆ:ಸಿಎಟಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 19:00 IST
Last Updated 21 ಏಪ್ರಿಲ್ 2011, 19:00 IST

ಬೆಂಗಳೂರು: ರಾಜ್ಯದಲ್ಲಿನ ಡಿಜಿಪಿ ದರ್ಜೆಯ ಎಲ್ಲ ಅಧಿಕಾರಿಗಳ ಹೆಸರು ಮತ್ತು ಅವರ ಸೇವಾ ದಾಖಲೆಗಳನ್ನು ಮೇ 1ರೊಳಗೆ ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಕಳುಹಿಸಿಕೊಡುವಂತೆ ಕೇಂದ್ರ ಆಡಳಿತ ನ್ಯಾಯ ಮಂಡಳಿಯ ರಾಜ್ಯ ಘಟಕ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೇ 20ರೊಳಗೆ ಅರ್ಹ ಅಧಿಕಾರಿಗಳ ಆಯ್ಕೆ ಪಟ್ಟಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸುವಂತೆ ಆಯೋಗಕ್ಕೆ ಸೂಚಿಸಲಾಗಿದೆ. ಈ ಪಟ್ಟಿಯಲ್ಲಿ ಒಬ್ಬ ಅರ್ಹ ಅಧಿಕಾರಿಯನ್ನು ಜೂ.1ರೊಳಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ (ಡಿಜಿ-ಐಜಿಪಿ) ನೇಮಿಸುವಂತೆ  ಸರ್ಕಾರಕ್ಕೆ ಆದೇಶಿಸಿದೆ. ಈ ಕುರಿತು ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮಂಡಳಿ ನಡೆಸಿತು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಶ್ರೇಣಿಯ ಅಧಿಕಾರಿಗಳು ಅಥವಾ ಪೊಲೀಸ್ ಹುದ್ದೆಯಲ್ಲಿ ಕನಿಷ್ಠ 30 ವರ್ಷ ಸೇವೆ ಸಲ್ಲಿಸಿದ ಅಧಿಕಾರಿಗಳ ಹೆಸರನ್ನು  ಆಯ್ಕೆ ಪಟ್ಟಿಯಲ್ಲಿ ಸೇರಿಸುವಂತೆ ತಿಳಿಸಲಾಗಿದ್ದು, ಇದು ಸರಿಯಲ್ಲ ಎಂದು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.