ADVERTISEMENT

ಜೂನ್ 7, 8ರಂದು ವಿಶ್ವ ಬಂಡವಾಳ ಹೂಡಿಕೆದಾರರ 2ನೇ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜೂನ್ 7 ಮತ್ತು 8ರಂದು ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ 2ನೇ ಸಮ್ಮೇಳನದಲ್ಲಿ ವಿವಿಧ ದೇಶಗಳ ಒಟ್ಟು 10 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೆ, ಸಮ್ಮೇಳನದಲ್ಲಿ 600 ಮಳಿಗೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ.

ವೈಮಾನಿಕ ಕ್ಷೇತ್ರ, ರಕ್ಷಣೆ, ಕೃಷಿ ಮತ್ತು ಆಹಾರ ಸಂಸ್ಕರಣೆ, ಜವಳಿ, ಇಂಧನ, ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ, ಆಟೊಮೊಬೈಲ್, ಆರೋಗ್ಯ, ಎಲೆಕ್ಟ್ರಾನಿಕ್ಸ್ ಮತ್ತಿತರ ಕ್ಷೇತ್ರಗಳಲ್ಲಿ ಒಟ್ಟು ಐದು ಲಕ್ಷ ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ಗುರಿಯೂ ಇದೆ.

ಈ ವಿಷಯ ತಿಳಿಸಿದ ಸಮ್ಮೇಳನದ ಪಾಲುದಾರ ಸಂಸ್ಥೆಯಾದ ಎಂ.ಎಂ. ಆಕ್ಟಿವ್‌ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಪಠಾಣಕರ್, `ಬಂಡವಾಳ ಹೂಡಿಕೆ ಸಂಬಂಧ 14 ಕ್ಷೇತ್ರಗಳಿಗೆ ಪ್ರತ್ಯೇಕ ಮಳಿಗೆ ಮೀಸಲಿಡಲಾಗುವುದು~ ಎಂದು ತಿಳಿಸಿದರು. ಗುರುವಾರ ಇಲ್ಲಿ ನಡೆದ `ಜಿಮ್ ಎಕ್ಸ್‌ಪೊ~ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, `ವಿದೇಶಿ ನೇರ ಬಂಡವಾಳ ಆಕರ್ಷಿಸುವಲ್ಲಿ ನಮ್ಮ ರಾಜ್ಯ ದೇಶದಲ್ಲಿ ಮೂರನೆಯ ಸ್ಥಾನದಲ್ಲಿದೆ. ವಿಶ್ವ ಬಂಡವಾಳ ಹೂಡಿಕೆದಾರರ ಎರಡನೆಯ ಸಮ್ಮೇಳನದ ಯಶಸ್ಸಿಗಾಗಿ ವಿವಿಧ ಕಡೆ ಈಗಾಗಲೇ ರೋಡ್ ಶೋ ಆಯೋಜಿಸಲಾಗಿದೆ. ಸಿಂಗಪುರ, ಜಪಾನ್ ಮತ್ತು ಅಮೆರಿಕದಲ್ಲಿ ಮುಂಬರುವ ದಿನಗಳಲ್ಲಿ ರೋಡ್ ಶೋ ಆಯೋಜಿಸಲಾಗುವುದು~ ಎಂದು ಹೇಳಿದರು.

ರಾಜ್ಯದಲ್ಲಿ 300ಕ್ಕೂ ಹೆಚ್ಚು ಸಂಶೋಧನಾ ಕೇಂದ್ರಗಳು ಇವೆ. ವೈಮಾನಿಕ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ `ವೈಮಾನಿಕ ನೀತಿ~ಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಘೋಷಿಸಿದರು.
2010ರಲ್ಲಿ ಆಯೋಜಿಸಲಾಗಿದ್ದ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಆದ ಒಪ್ಪಂದಗಳ ಪೈಕಿ ಶೇಕಡ 62ರಷ್ಟು ಅನುಷ್ಠಾನದ ಹಂತದಲ್ಲಿವೆ.

ಈ ಬಾರಿಯ ಸಮ್ಮೇಳನದ ಮೂಲಕ 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಹೇಳಿದರು.ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜ್ಯೋತಿ ರಾಮಲಿಂಗಂ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.