ADVERTISEMENT

ಜೆಡಿಎಸ್‌ ಶಾಸಕರಿದ್ದ ಬಸ್ ತಡೆದು ಯಡಿಯೂರಪ್ಪ ಕಾರು ಬಿಟ್ಟ ಪೊಲೀಸರು

​ಪ್ರಜಾವಾಣಿ ವಾರ್ತೆ
Published 17 ಮೇ 2018, 19:30 IST
Last Updated 17 ಮೇ 2018, 19:30 IST

ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಪಕ್ಷದ ಶಾಸಕರು ಪ್ರಯಾಣಿಸುತ್ತಿದ್ದ ಖಾಸಗಿ ಬಸ್‌ ತಡೆದ ಪೊಲೀಸರು, ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರಿನ ಸಂಚಾರಕ್ಕೆ ದಾರಿ ಮಾಡಿಕೊಟ್ಟ ಘಟನೆ ಗುರುವಾರ ನಡೆಯಿತು.

ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧಕ್ಕೆ ಬಂದಿದ್ದ ಯಡಿಯೂರಪ್ಪ, ಮಧ್ಯಾಹ್ನ ಅಲ್ಲಿಂದ ಡಾಲರ್ಸ್‌ ಕಾಲೊನಿಯಲ್ಲಿರುವ ತಮ್ಮ ಮನೆಯತ್ತ ಹೊರಟರು. ಸರ್ಕಾರಿ ಕಾರಿನಲ್ಲಿದ್ದ ಅವರ ಪ್ರಯಾಣಕ್ಕಾಗಿ ಪೊಲೀಸರು, ಸಿಗ್ನಲ್ ಮುಕ್ತ ರಸ್ತೆ ಕಲ್ಪಿಸಿದ್ದರು. ಅತ್ತ, ಗಾಂಧಿ ಪ್ರತಿಮೆ ಎದುರು ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದ ಕುಮಾರಸ್ವಾಮಿ ಹಾಗೂ ಶಾಸಕರು, ಬಸ್ಸಿನಲ್ಲಿ ಶಾಂಗ್ರಿಲಾ ಹೋಟೆಲ್‌ಗೆ ಹೊರಟಿದ್ದರು.

ಸಿಎಂ ಕಾರು, ವಿಧಾನಸೌಧದ ಒಳರಸ್ತೆ ಮೂಲಕ ಮುಖ್ಯರಸ್ತೆಗೆ ಹೊರಟಿದ್ದಾಗಲೇ ಖಾಸಗಿ ಬಸ್‌ ಎದುರಾಯಿತು. ಆಗ ಪೊಲೀಸರು, ಕೆಲ ನಿಮಿಷಗಳವರೆಗೆ ಬಸ್‌ ತಡೆದು ನಿಲ್ಲಿಸಿದರು. ಸಿಎಂ ಹಾಗೂ ಅಂಗರಕ್ಷಕರಿದ್ದ ಕಾರುಗಳು ಹೋದ ಮೇಲೆಯೇ ಬಸ್‌ ಬಿಟ್ಟರು.

ADVERTISEMENT

ಪೊಲೀಸರ ವರ್ತನೆ ಖಂಡಿಸಿದ ಜೆಡಿಎಸ್‌ ಕಾರ್ಯಕರ್ತರೊಬ್ಬರು, ‘ಕುಮಾರಣ್ಣ ಇದ್ದ ಬಸ್‌ ಏಕೆ ತಡೆದಿದ್ದೀರಾ. ಅವರು ಇನ್ನರ್ಧ ಗಂಟೆಯಲ್ಲಿ ಸಿಎಂ ಆಗ್ತಾರೆ. ನೀವು ಯಡಿಯೂರಪ್ಪ ಕಾರು ತಡೆಯಬೇಕಿತ್ತು’ ಎಂದು ಕೂಗಾಡಿದರು.

ಬಿಎಸ್‌ವೈಗೆ ಜೆಡಿಎಸ್‌ ಬಾವುಟ ಪ್ರದರ್ಶನ: ಪ್ರಮಾಣ ವಚನ ಸ್ವೀಕರಿಸಲು ಬೆಳಿಗ್ಗೆ ಮನೆಯಿಂದ ರಾಜಭವನದತ್ತ ಕಾರಿನಲ್ಲಿ ಹೊರಟಿದ್ದ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷದ ಬಾವುಟ ಪ್ರದರ್ಶಿಸಿದರು.

ಸಂಜಯನಗರ ಠಾಣೆ ವ್ಯಾಪ್ತಿಯಲ್ಲಿ ಕಾರು ಹೊರಟಿದ್ದ ವೇಳೆ ರಸ್ತೆಯ ಅಕ್ಕ–ಪಕ್ಕದಲ್ಲಿ ಸೇರಿದ್ದ ಕಾರ್ಯಕರ್ತರು, ಬಿಎಸ್‌ವೈ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಹೋದ ಪೊಲೀಸರು, ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು.
*
ಬಿಗಿ ಭದ್ರತೆಯಲ್ಲಿ ಪ್ರಮಾಣ ವಚನ
ರಾಜಭವನ ಸುತ್ತಮುತ್ತ ಭದ್ರತೆಗಾಗಿ 1,500 ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪೊಲೀಸರು, ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿದರು. ನಂತರ, ಎಲ್ಲರೂ ವಿಧಾನಸೌಧದತ್ತ ಹೊರಟರು.

ಮೀಸೆ ತಿಮ್ಮಯ್ಯ ವೃತ್ತದಿಂದ ರಾಜಭವನ ಮಾರ್ಗವಾಗಿ ಬಸವೇಶ್ವರ (ಚಾಲುಕ್ಯ) ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೆಳಿಗ್ಗೆಯಿಂದಲೇ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಅಲ್ಲೆಲ್ಲ ಮಾರ್ಗ ಬದಲಾವಣೆ ಮಾಡಲಾಗಿತ್ತು. ರಾಜಭವನ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.

ಕಾರ್ಯಕ್ರಮ ವಿರೋಧಿಸಿ ಜೆಡಿಎಸ್ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ರಾಜಭವನ ಎದುರು ಪ್ರತಿಭಟನೆ ನಡೆಸುವ ಸುದ್ದಿ ಇತ್ತು. ಬಿಜೆಪಿ ಕಾರ್ಯಕರ್ತರನ್ನು ಹೊರತುಪಡಿಸಿ ಬೇರೆ ಯಾವ ಪಕ್ಷದ ಕಾರ್ಯಕರ್ತರಿಗೂ ಪೊಲೀಸರು ಪ್ರವೇಶ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.