ADVERTISEMENT

ಜೆಡಿಎಸ್ ಹೊರೆ ಇಳಿಸಿದ ಮುಖಂಡರು: ಒಬ್ಬರು ಕೈ ಮತ್ತೊಬ್ಬರು ಕೆಜೆಪಿ?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 19:30 IST
Last Updated 14 ನವೆಂಬರ್ 2012, 19:30 IST

ಹಾಸನ: ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟೇಗೌಡ ಹಾಗೂ ಸಕಲೇಶಪುರದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಇಬ್ಬರೂ ಜೆಡಿಎಸ್ ~ಹೊರೆ~ ಇಳಿಸಿದ್ದಾರೆ. ಸದ್ಯಕ್ಕೆ ಇಬ್ಬರೂ ಜತೆಯಾಗಿಯೇ ಇದ್ದರೂ ಮುಂದೆ ಇವರಿಬ್ಬರು ಬೇರೆಬೇರೆ ಹಾದಿ ತುಳಿಯುವ ಸಾಧ್ಯತೆ ಇದೆ.

ಈ ಹಾಲಿ ಮತ್ತು ಮಾಜಿ ಶಾಸಕರು ಜೆಡಿಎಸ್ ತೊರೆದಿರುವುದು ಅನಿರೀಕ್ಷಿತವಲ್ಲ. ಇದಕ್ಕೆ ವರ್ಷದ ಹಿಂದಿನಿಂದಲೂ ಸಿದ್ಧತೆ ಮಾಡಿಕೊಂಡಿದ್ದರು. ಪಕ್ಷ ಬಿಡುವ ತೀರ್ಮಾನ ಮಾಡುತ್ತಿದ್ದಂತೆ ಇಬ್ಬರೂ ಎಚ್.ಡಿ. ರೇವಣ್ಣ ಮೇಲೆ ಎರಗಿದ್ದಾರೆ. ~ಅವರ ಸರ್ವಾಧಿಕಾರಿ ಧೋರಣೆಯಿಂದ ಪಕ್ಷ ಬಿಡುವುದು ಅನಿವಾರ್ಯವಾಗಿದೆ~ ಎಂದಿದ್ದಾರೆ. ಜೆಡಿಎಸ್‌ನಲ್ಲಿನ ಇತರ ಕೆಲವು ಶಾಸಕರೂ ಸಹ ಖಾಸಗಿಯಾಗಿ ಅಲ್ಲಿ ಇಲ್ಲಿ ಇಂಥ ಆರೋಪ ಮಾಡಿದ್ದಾರೆ. ಇದರಿಂದ ಮಾಜಿ ಪ್ರಧಾನಿ ದೇವೇಗೌಡರ ತವರಿನಲ್ಲಿ ಜೆಡಿಎಸ್ ಪಕ್ಷದಲ್ಲಿ ತಳಮಳ ಉಂಟಾಗಿದೆ.

ಮುಂದಿನ ಚುನಾವಣೆಯಲ್ಲಿ ಶ್ರವಣಬೆಳಗೊಳ ಕ್ಷೇತ್ರದಿಂದ ಜೆಡಿಎಸ್ ತಮಗೆ ಟಿಕೆಟ್ ನೀಡುವುದಿಲ್ಲ ಎಂಬುದು ಪುಟ್ಟೇಗೌಡರಿಗೆ ಗೊತ್ತಿತ್ತು. ದೇವೇಗೌಡರ ಸಂಬಂಧಿ ಸಿ.ಎನ್. ಬಾಲಕೃಷ್ಣ ಅವರಿಗೆ ಟಿಕೆಟ್ ನೀಡಬೇಕು ಎಂಬುದು ಮೊದಲೇ ತೀರ್ಮಾನವಾಗಿತ್ತು (2008ರಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪುಟ್ಟೇಗೌಡರೆದುರೇ ಈ ತೀರ್ಮಾನವಾಗಿತ್ತು). ಇದನ್ನು ಅರಿತುಕೊಂಡೇ ಪುಟ್ಟೇಗೌಡರು ಕಾಂಗ್ರೆಸ್ ಮೇಲೆ ದೃಷ್ಟಿ ನೆಟ್ಟಿದ್ದರು. ಜಿಲ್ಲೆಗೆ ಕಾಂಗ್ರೆಸ್ ಮುಖಂಡರು ಬಂದಾಗ ಹಾರ ಹಾಕಿ ಸ್ವಾಗತಿಸುವ ಸಂಪ್ರದಾಯ ರೂಢಿಸಿಕೊಂಡಿದ್ದರು. ಕ್ಷೇತ್ರದಿಂದ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ತಾನೇ ಎಂದು ಆಗೊಮ್ಮೆ ಈಗೊಮ್ಮೆ ಬಿಂಬಿಸಿಕೊಂಡಿದ್ದರು. ಇದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ವಿರೋಧವೂ ವ್ಯಕ್ತವಾಗಿದೆ.

ಹೈಕಮಾಂಡ್ ಮಾತಿಗೆ ಎದುರಾಡುವ ಶಕ್ತಿ ಸ್ಥಳೀಯ ಕಾಂಗ್ರೆಸ್ ಮುಖಂಡರಲ್ಲಿ ಇಲ್ಲ. ಹೈಕಮಾಂಡನ್ನು ಒಲಿಸಿಕೊಂಡರೆ ಪುಟ್ಟೇಗೌಡರು ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ ಪಾರಂಪರಿಕ ಮತದಾರರಿದ್ದರೂ ಈ ಕ್ಷೇತ್ರದಲ್ಲಿ ವರ್ಚಸ್ವೀ ನಾಯಕರಿಲ್ಲದಿರುವುದು ಮತ್ತು ~ಪುಟ್ಟೇಗೌಡರು ಎಲ್ಲ ವರ್ಗದವರಿಗೂ ಹತ್ತಿರವಾಗಿದ್ದಾರೆ~ ಎಂಬ ಭಾವನೆ ಅವರಿಗೆ ಟಿಕೆಟ್ ಪಡೆಯಲು ಸಕಾರಾತ್ಮಕವಾಗಿ ಕೆಲಸ ಮಾಡಬಹುದು. ಸೋಲು-ಗೆಲುವಿನ ವಿಚಾರ ಅನಂತರದ್ದು.

ಸಕಲೇಶಪುರ ಮೀಸಲು ಕ್ಷೇತ್ರವಾದ ಬಳಿಕ ನೆಲೆ ಕಳೆದುಕೊಂಡಿದ್ದ ವಿಶ್ವನಾಥ್, ಬಸವನಗುಡಿ ಕ್ಷೇತ್ರದಲ್ಲಿ ನೆಲೆ ಕಾಣಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಆದ್ದರಿಂದ ತನಗೆ ಪರಿಚಿತವೂ, ಸಾಕಷ್ಟು ಅನುಯಾಯಿಗಳೂ ಇರುವ ಬೇಲೂರು ಕ್ಷೇತ್ರದ ಮೇಲೆ ಕಣ್ಣಿಟ್ಟರು. ಈ ವಿಚಾರದಲ್ಲಿ ವಿಶ್ವನಾಥ್ ಹಾಗೂ ಪುಟ್ಟೇಗೌಡರದ್ದು ಒಂದೇ ಸ್ಥಿತಿ. ಅಲ್ಲಿ ಬಾಲಕೃಷ್ಣಗೆ ಟಿಕೆಟ್ ನಿಗದಿಯಾಗಿದ್ದರೆ, ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಜವರೇಗೌಡರಿಗೆ ಟಿಕೆಟ್ ನೀಡುವ ತೀರ್ಮಾನವಾಗಿತ್ತು. ಎಚ್.ಡಿ. ಕುಮಾರಸ್ವಾಮಿ ಜತೆ ಹೆಚ್ಚು ಒಡನಾಟ ಹೊಂದಿದ್ದ ವಿಶ್ವನಾಥ್, ಟಿಕೆಟ್ ಪಡೆಯುವ ಎಲ್ಲ ಸಾಹಸ ಮಾಡಿದ್ದರು. ನಿರೀಕ್ಷೆ ಹುಸಿಯಾಗುತ್ತಿದ್ದಂತೆ ಕಾಂಗ್ರೆಸ್‌ನತ್ತ ವಾಲಿದರು. ಬೇಲೂರಿನಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ ಮತ್ತು ಹಾಲಿ ಶಾಸಕರಿಗೇ ಟಿಕೆಟ್ ನೀಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿರುವುದರಿಂದ ಅವರ ಪ್ರಯತ್ನ ಫಲಿಸಲಿಲ್ಲ. ಬಳಿಕ ಬಿಜೆಪಿಯತ್ತ ಮುಖಮಾಡಿದರು.

ಹಿಂದೆ ಮುಖ್ಯಮಂತ್ರಿ ಸದಾನಂದ ಗೌಡರು ಸಕಲೇಶಪುರಕ್ಕೆ ಬಂದಾಗ ತನ್ನ ಕೆಲವು ಬೆಂಬಲಿಗರೊಂದಿಗೆ ಬಂದು ಬಿಜೆಪಿ ಕಾರ್ಯಕರ್ತರಿಗಿಂತ ಆತ್ಮೀಯವಾಗಿ ಗೌಡರನ್ನು ಸ್ವಾಗತಿಸಿದ್ದರು. ಅಲ್ಲೂ ನಂತರದ ಬೆಳವಣಿಗೆಗಳು ವಿಶ್ವನಾಥ್‌ಗೆ ಪೂರಕವಾಗಲಿಲ್ಲ.

ಈಗ ಬಿಜೆಪಿಯ ಆಂತರಿಕ ಕಲಹದಿಂದ ಉದಯಿಸಿಕೊಂಡಿರುವ ಕೆ.ಜೆ.ಪಿ ತನಗೆ ಬೇಲೂರಿನಲ್ಲಿ ರಾಜಕೀಯ ನೆಲೆ ಒದಗಿಸಬಹುದೆಂಬ ನಿರೀಕ್ಷೆ ಅವರಲ್ಲಿ ಮೂಡಿಸಿದೆ. ಕಳೆದ ಒಂದೂವರೆ ವರ್ಷದಿಂದ ವಿಶ್ವನಾಥ್ ಬೇಲೂರಿನಲ್ಲಿ ರಾಜಕೀಯ ಜೀವನಕ್ಕೆ ಬುನಾದಿ ಸಿದ್ಧಪಡಿಸುತ್ತ್ದ್ದಿದಾರೆ. ನಿರಂತರವಾಗಿ ಕ್ಷೇತ್ರದಲ್ಲಿ ಓಡಾಡಿದ್ದಾರೆ. ನೆಂಟ ನೆಂಟ ಎನ್ನುತ್ತಲೇ ಜಿಲೇಬಿ, ಬೋಂಡಾ ಹಂಚಿ ಜನರ ಸಮೀಪ ಹೋಗಿದ್ದಾರೆ. ಅಲ್ಲೇ ಹುಟ್ಟುಹಬ್ಬ ಆಚರಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಸ್ವಂತ ವರ್ಚಸ್ಸಿನ ಮೇಲೆ ಒಂದಿಷ್ಟು ಮತದಾರರನ್ನು ಸೃಷ್ಟಿಸಿದ್ದಾರೆ. ಕೆಜೆಪಿಗೆ ಹೋದರೆ ತಾಲ್ಲೂಕಿನ ಲಿಂಗಾಯಿತ ಮತಗಳು ಅನಾಯಾಸವಾಗಿ ಬರುತ್ತವೆ. ಹಾಲಿ ಶಾಸಕ ರುದ್ರೇಶಗೌಡರಿಗೆ ಆರೋಗ್ಯದ ಸಮಸ್ಯೆಯೂ ಇರುವುದರಿಂದ ಕಾಂಗ್ರೆಸ್‌ನವರೇ ಅವರನ್ನು ಪಕ್ಕಕ್ಕೆ ಸರಿಸುವ ಸಾಧ್ಯತೆ ಇದೆ. ಹೀಗಾದರೆ ಆ ಮತಗಳೂ ತನ್ನ ಬುಟ್ಟಿಗೇ ಬೀಳುತ್ತವೆ ಎಂಬುದು ವಿಶ್ವನಾಥ್ ಲೆಕ್ಕಾಚಾರ. ಇದರ ಜತೆಯಲ್ಲೇ ಅವರು ತಮ್ಮ ರಾಜಕೀಯ ವೈರಿ ಎಚ್.ಕೆ. ಕುಮಾರಸ್ವಾಮಿಯನ್ನೂ ಸೋಲಿಸಲು ಪ್ರಯತ್ನಿಸಿದರೆ ಅಚ್ಚರಿ ಇಲ್ಲ. ಹೀಗಾದಲ್ಲಿ ಸಕಲೇಶಪುರ ಕ್ಷೇತ್ರ ಜೆಡಿಎಸ್ ಕೈಜಾರುವ ಸಾಧ್ಯತೆಯೂ ಇದೆ.

ಜಿಲ್ಲೆಯಲ್ಲಿ ಜೆಡಿಎಸ್ ತೊರೆದು ಹೋದವರು ರಾಜಕೀಯವಾಗಿ ಅಂಥ ಯಶಸ್ಸು ಕಂಡಿಲ್ಲ. ಆದರೆ ಈಗಿನ ಸ್ಥಿತಿ ಭಿನ್ನವಾಗಿರುವುದರಿಂದ ಈ ಇಬ್ಬರು ಮುಖಂಡರನ್ನು ಜಿಲ್ಲೆಯ ಜನರು ಕುತೂಹಲದಿಂದ ನೋಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.