ADVERTISEMENT

ಜೈರಾಜ್‌ಗೆ ವ್ಯಾಸರಾಜ ಮಠದ ಉಸ್ತುವಾರಿ

​ಪ್ರಜಾವಾಣಿ ವಾರ್ತೆ
Published 26 ಮೇ 2012, 19:30 IST
Last Updated 26 ಮೇ 2012, 19:30 IST

ಬೆಂಗಳೂರು: ಪ್ರತಿಷ್ಠಿತ ಸೋಸಲೆ ವ್ಯಾಸರಾಜ ಮಠದ ಆಡಳಿತಾಧಿಕಾರಿಯಾಗಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ಅವರನ್ನು ನೇಮಕ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಮಠಕ್ಕೆ ಸೇರಿದ ಚಿನ್ನಾಭರಣ ಮತ್ತು ಆಸ್ತಿ ಪರಭಾರೆಗೆ ಸಂಬಂಧಿಸಿದಂತೆ ವಿವಾದಗಳು ಇವೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ರಾಜ್ಯ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ.

ಜೈರಾಜ್ ಅವರು ಇದೇ 31ರಂದು ಸರ್ಕಾರಿ ಸೇವೆಯಿಂದ ನಿವೃತ್ತಿಯಾಗಲಿದ್ದು, ಮುಂದಿನ ಆದೇಶದವರೆಗೂ ಅವರು ವ್ಯಾಸರಾಜ ಮಠದ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸಲಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ನೇತೃತ್ವದಲ್ಲಿ ಸಲಹಾ ಸಮಿತಿ ಕೂಡ ರಚಿಸಲಾಗಿದೆ.

ಆಡಳಿತಾಧಿಕಾರಿ ತನ್ನ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡುವ ಉದ್ದೇಶದಿಂದ ಏಳು ಮಂದಿಯ ಸಮಿತಿಯನ್ನೂ ರಚಿಸಲಾಗಿದೆ. ಕಾನೂನು ಸಲಹೆ ನೀಡಲು ವಕೀಲರೊಬ್ಬರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮೈಸೂರು, ಬೆಂಗಳೂರು, ತಿರುಪತಿ, ಮದುರೆ ಸೇರಿದಂತೆ ಅನೇಕ ಕಡೆ ಮಠದ ಕಚೇರಿಗಳು ಇವೆ.

ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ನಿರ್ವಹಿಸಲು ಆದೇಶದಲ್ಲಿ ಸೂಚಿಸಲಾಗಿದೆ. ಪೂಜೆ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳನ್ನು ಈಗಿರುವ ಸ್ವಾಮೀಜಿ ನೇತೃತ್ವದಲ್ಲೇ ನಡೆಯಲಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.