ADVERTISEMENT

ಟಿಪ್ಪು ಶಸ್ತ್ರಾಗಾರ ಸ್ಥಳಾಂತರ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ಶ್ರೀರಂಗಪಟ್ಟಣ: ಬೆಂಗಳೂರು- ಮೈಸೂರು ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಡ್ಡಿಯಾಗಿರುವ ಪಟ್ಟಣದ ಟಿಪ್ಪು ಸುಲ್ತಾನ್ ಕಾಲದ ಶಸ್ತ್ರಾಗಾರವನ್ನು ಮೂಲ ಸ್ಥಳದಿಂದ 50 ಮೀಟರ್ ದೂರದಲ್ಲಿ ಮರು ಸ್ಥಾಪನೆ ಮಾಡುವ ಸಂಬಂಧ ತಜ್ಞರ ತಂಡ ಶನಿವಾರ ಸ್ಥಳ ಪರಿಶೀಲನೆ ನಡೆಸಿತು.

ಸ್ಮಾರಕ ಸ್ಥಳಾಂತರ ತಂತ್ರಜ್ಞರ ಸಮಿತಿಯ ಅಧ್ಯಕ್ಷ ಡಾ.ಜಿ. ಅಶ್ವತ್ಥನಾರಾಯಣ ನೇತೃತ್ವದ ನುರಿತ ಎಂಜಿನಿಯರ್‌ಗಳ ತಂಡ ಜಿ.ಪಿ. ರಾಡಾರ್ ಯಂತ್ರದ ಮೂಲಕ ಸ್ಥಳ ಪರಿಶೀಲನೆ ನಡೆಸಿತು. `ಸುಮಾರು ಒಂದು ಸಾವಿರ ಟನ್ ಭಾರ ಇದೆ ಎನ್ನಲಾಗುವ ಸ್ಮಾರಕವನ್ನು ಕಂಬಿಗಳ ಸಹಾಯದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ವರದಿ ಸಿದ್ಧಪಡಿಸಿ ರೈಲ್ವೆ ಇಲಾಖೆಗೆ ಸಲ್ಲಿಸಲಾಗುವುದು.
 
ಶಸ್ತ್ರಾಗಾರವನ್ನು ಮರು ಸ್ಥಾಪಿಸುವ ಸ್ಥಳದ 25 ಅಡಿ ಆಳದಲ್ಲಿ ಏನಿದೆ? ಅದು ಸೂಕ್ತ ಸ್ಥಳವೇ? ಎಂಬುದನ್ನು ಜಿಪಿಆರ್ ಪರೀಕ್ಷೆ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ಈ ಸ್ಮಾರಕ ಸ್ಥಳಾಂತರಕ್ಕೆ ಒಟ್ಟು 24 ಕೋಟಿ ರೂಪಾಯಿ ಖರ್ಚಾಗುತ್ತದೆ~ ಎಂದು ಅಶ್ವತ್ಥನಾರಾಯಣ ತಿಳಿಸಿದರು.

`ಕಂಬಿಗಳ ಸಹಾಯದಿಂದ ಸ್ಮಾರಕವನ್ನು ಮುಂದೆ ತಳ್ಳುವುದು ಮತ್ತು ಛಾವಣಿ ಭಾಗದಿಂದ ಬಿಡಿಬಿಡಿಯಾಗಿ ಕತ್ತರಿಸಿ ಮರು ಜೋಡಣೆ ಮಾಡುವುದು- ಈ ಎರಡು ಆಯ್ಕೆಗಳ ಬಗ್ಗೆ ಚಿಂತನೆ ನಡೆದಿದೆ. ಮೊದಲ ಆಯ್ಕೆ ಅಂತಿಮವಾಗುವ ಸಾಧ್ಯತೆ ಇದೆ. 18 ಅಡಿ ಆಳದ ಕಾಲುವೆ ತೋಡಿ ಶಸ್ತ್ರಾಗಾರವನ್ನು ಮುಂದೆ ತಳ್ಳುವ ನವೀನ ತಂತ್ರಜ್ಞಾನ ಬಳಕೆಯಾಗಲಿದೆ. ಇದು ಭಾರತದಲ್ಲೇ ಮೊದಲ ಪ್ರಯತ್ನ ಆಗಲಿದೆ.

ನಮ್ಮ ತಂಡ ಆದಷ್ಟು ಶೀಘ್ರ ಸ್ಮಾರಕ ಸ್ಥಳಾಂತರ ಕುರಿತು ವರದಿ ನೀಡಲಿದೆ. ಸ್ಥಳಾಂತರ ಪ್ರಕ್ರಿಯೆ ಯಾವಾಗ ಶುರುವಾಗುತ್ತದೆ ಎಂಬುದನ್ನು ಪ್ರಾಚ್ಯವಸ್ತು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ~ ಎಂದು ಹಿರಿಯ ಎಂಜಿನಿಯರ್ ಎಸ್.ಎ.ರೆಡ್ಡಿ ಎಂದರು.

ಸ್ಟ್ರಕ್ಚ್ ಜಿಯೋಟೆಕ್ ರೀಸರ್ಚ್ ಲ್ಯಾಬೊರೇಟರಿ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಜಯಗೋಪಾಲ್, ನ್ಯಾಷನಲ್ ಡಿಸೈನ್ ರೀಸರ್ಚ್ ಫೋರಂ (ಎನ್‌ಡಿಆರ್‌ಎಫ್)ನ ಸುನಿಲ್ ಸೊನ್ನದ್, ವಾಸುದೇವರಾವ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.