ADVERTISEMENT

ಟಿಪ್ಪು ಹೆಸರಿನಲ್ಲಿ ಕೀಳು ಮಟ್ಟದ ರಾಜಕಾರಣ: ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಟೀಕೆ

ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2017, 10:35 IST
Last Updated 10 ಡಿಸೆಂಬರ್ 2017, 10:35 IST
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ   

ತುಮಕೂರು: ‘ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ ಇಂದು ಕರ್ನಾಟಕದಲ್ಲಿ ಟಿಪ್ಪು ಅವರ ಹೆಸರಿನಿಟ್ಟುಕೊಂಡು ಕೆಲವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇಶದ ಎರಡು ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜಾತ್ಯತೀತ ಮನೋಭಾವ ಕಣ್ಮರೆಯಾಗಿದೆ. ಕೋಮುವಾದ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಜಾತ್ಯತೀತ ವಾದ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಾಗುತ್ತದೆ’ ಎಂದರು.

‘ದೇವೇಗೌಡರು ಅಲ್ಪಸಂಖ್ಯಾತ ನಾಯಕರನ್ನು ತಯಾರು ಮಾಡುವ ಕಾರ್ಖಾನೆ. ಇವರ ಗರಡಿಯಲ್ಲಿ ಹಲವು ಮುಸ್ಲಿಂ ನಾಯಕರು ಬೆಳೆದಿದ್ದಾರೆ. ಆದರೆ, ಇಂದು ಅವರು ದೇವೇಗೌಡರಿಗೆ ಸವಾಲು ಹಾಕುವ ಮಟ್ಟಕ್ಕೆ ನಿಂತಿದ್ದಾರೆ. ಇದೆಲ್ಲ ನೋಡಿದರೆ ಬಹಳ ನೋವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಮೀಸಲಾತಿ ನೀಡಿಲ್ಲ. ದೇವೇಗೌಡರು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದರು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಹುಬ್ಬಳ್ಳಿಯ ಈದ್ಗಾ ಮೈದಾನದ ಗಲಭೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದರು.  ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ವರ್ಷಗಳ ಕಾಲ ಚುನಾಯಿತ ಸರ್ಕಾರವಿರಲಿಲ್ಲ. ದೇವೇಗೌಡರು ಪ್ರಧಾನಮಂತ್ರಿಯಾದ ಕೆಲವೇ ದಿನಗಳಲ್ಲಿ ಚುನಾವಣೆ ನಡೆಸಿ ಅಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿನೆಗೆ ಕಾರಣರಾದರು. ಕರ್ನಾಟಕದಲ್ಲಿ ಜೆಡಿಎಸ್ ಸರ್ಕಾರ ಬರಬೇಕಿದೆ. ದಯಮಾಡಿ ಈ ಬಾರಿ ಎಲ್ಲಾ ಅಲ್ಪಸಂಖ್ಯಾತ ಬಂದುಗಳು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ’ ಎಂದು ಅಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.