ADVERTISEMENT

ಟ್ಯಾಂಕರ್ ಮೂಲಕ ನೀರು: ಭರವಸೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ತುರ್ತಾಗಿ ಕೊಳವೆ ಬಾವಿಗಳನ್ನು ಕೊರೆಯಲು ಸೂಚಿಸಲಾಗಿದೆ. ಈಗಾಗಲೇ 488 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಗ್ರಾಮಗಳಿಗೆ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು.

ಜೆಡಿಎಸ್‌ನ ಎಚ್.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ, ಎಂ.ಕೃಷ್ಣಾರೆಡ್ಡಿ, ಜಿ.ಟಿ.ದೇವೇಗೌಡ, ಎನ್.ಚೆಲುವರಾಯಸ್ವಾಮಿ, ಸಿ.ಎನ್.ಬಾಲಕೃಷ್ಣ, ಎಂ.ರಾಜಣ್ಣ, ಸುಧಾಕರ ಲಾಲ್, ಬಿ.ಬಿ.ನಿಂಗಯ್ಯ, ಕೆಜೆಪಿಯ ಬಿ.ಆರ್.ಪಾಟೀಲ, ಕಾಂಗ್ರೆಸ್‌ನ ವೆಂಕಟರಮಣಯ್ಯ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿವರವಾಗಿ ಬೆಳಕು ಚೆಲ್ಲಿದರು.

ಇದಕ್ಕೆ ಉತ್ತರಿಸಿದ ಸಚಿವ ಪಾಟೀಲ, ರಾಜ್ಯ ಸರ್ಕಾರದ ಅನುದಾನದಿಂದಲೇ ಕೊಳವೆ ಬಾವಿಗಳನ್ನು ಕೊರೆಯುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗುರುವಾರ ಫ್ಯಾಕ್ಸ್ ಮೂಲಕ ಸೂಚಿಸಲಾಗುವುದು. ಪ್ರಕೃತಿ ವಿಕೋಪ ನಿಧಿಯಡಿ ಕೇಂದ್ರ ಸರ್ಕಾರ ನೀಡುವ ಹಣದಲ್ಲಿ ಪಂಪ್‌ಸೆಟ್, ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಜಿಲ್ಲಾಧಿಕಾರಿಗಳ ಸಮನ್ವಯದಲ್ಲಿ ಕುಡಿಯುವ ನೀರಿನ ತುರ್ತು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಆಯಾ ಜಿಲ್ಲಾ ಪಂಚಾಯತ್‌ಗಳಿಗೆ ಸೂಚಿಸಲಾಗಿದೆ. ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ಮಂಜೂರಾತಿ ನೀಡುವ ಅಧಿಕಾರವನ್ನು ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಗೆ ಕೊಡಲಾಗಿದೆ ಎಂದು ತಿಳಿಸಿದರು.

ಖಾಸಗಿ ಕೊಳವೆಬಾವಿಗಳ ಸೇವೆ ಪಡೆಯಲು ಹಾಗೂ ಅನಿವಾರ್ಯ ಇರುವ ಕಡೆ ಹೊಸ ಕೊಳವೆಬಾವಿಗಳನ್ನು ಕೊರೆಯಲು ಸೂಚಿಸಲಾಗಿದೆ. ಹಾಲಿ ಇರುವ ಕೊಳವೆ ಬಾವಿಗಳ ಆಳ ಹೆಚ್ಚಿಸಲು ಹಾಗೂ ಹೈಡ್ರೊಫ್ರಾಕ್ಚರಿಂಗ್ ಮಾಡಿಸಲು ತಿಳಿಸಲಾಗಿದ್ದು, ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

2013-14ನೇ ಸಾಲಿನಲ್ಲಿ ಕುಡಿಯುವ ನೀರಿನ ಯೋಜನೆಗಳು ಹಾಗೂ ಶುದ್ಧೀಕರಣ ಘಟಕಗಳನ್ನು ಅಳವಡಿಸಲು ಎರಡು ಸಾವಿರ ಕೋಟಿ ರೂಪಾಯಿ ಅನುದಾನ ಲಭ್ಯವಾಗಿದೆ. ಒಟ್ಟಾರೆ 40,338 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಇದಲ್ಲದೆ 11,213 ಶಾಲೆಗಳು ಹಾಗೂ 30,483 ಅಂಗನವಾಡಿಗಳಿಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ್‌ಗಳಲ್ಲಿ ರೂ. 689.16 ಕೋಟಿ ಲಭ್ಯವಿದೆ. ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ವಿಶೇಷವಾಗಿ ರೂ. 51.50 ಕೋಟಿ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಕುಡಿಯುವ ನೀರಿಗಾಗಿ ರೂ. 173.01 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಪಂಚೆ ಬಿಚ್ಚುತ್ತಾರೆ...
`ಅಧಿವೇಶನದಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಸ್ತಾಪಿಸಿ ಶಾಸಕರು ಹೆಚ್ಚು ಹಣ ತರುತ್ತಾರೆ ಎಂದು ಕ್ಷೇತ್ರದ ಜನ ಕಾಯುತ್ತಿದ್ದಾರೆ. ಬರಿಗೈಯಲ್ಲಿ ಹೋದರೆ ಜನ ಪಂಚೆ ಬಿಚ್ಚುತ್ತಾರೆ. ಕುಡಿಯುವ ನೀರಿಗೆ ಹೆಚ್ಚಿನ ಹಣ ನೀಡುವ ಮೂಲಕ ನಮ್ಮ ಗೌರವ ಕಾಪಾಡಿ'
-ಕೆ.ಎಂ.ಶಿವಲಿಂಗೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.