ADVERTISEMENT

ಠೇವಣಿ ವಂಚನೆ: ಸಿಬಿಐ ತನಿಖೆಗೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ಬೆಂಗಳೂರು: `ಮಂಡ್ಯ ಮತ್ತು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ನಡೆದ ವಂಚನೆ ಪ್ರಕರಣಗಳ ತನಿಖೆ ನಡೆಸುವಂತೆ ಸಿಬಿಐಗೆ ಕೋರಲಾಗುವುದು' ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ಬುಧವಾರ ವಿಧಾನ ಮಂಡಲದಲ್ಲಿ ಪ್ರಕಟಿಸಿದರು.

ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಪುಟ್ಟಣ್ಣ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು. `ಮಂಡ್ಯದ `ಮುಡಾ'ಕ್ಕೆ 5 ಕೋಟಿ ರೂಪಾಯಿ ವಂಚಿಸಿದ ಮಾದರಿಯಲ್ಲೇ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ವಂಚನೆ ನಡೆದಿದೆ. ಪ್ರಾಧಿಕಾರ ಬ್ಯಾಂಕ್‌ನಲ್ಲಿ ಠೇವಣಿಯಾಗಿ 9.90 ಕೋಟಿ ರೂಪಾಯಿ ಇರಿಸಿತ್ತು. ನಕಲಿ ಬಾಂಡ್‌ಗಳ ಮೂಲಕ ಆ ಹಣವನ್ನು ವಂಚಿಸಿ ಪಡೆಯಲಾಗಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.

`ರಿಸರ್ವ್ ಬ್ಯಾಂಕ್‌ನ ನಿಯಮಗಳ ಪ್ರಕಾರ ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಲ್ಲಿ 2 ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತದ ಅವ್ಯವಹಾರಗಳು ನಡೆದಲ್ಲಿ ಆ ಬಗ್ಗೆ ಸಿಬಿಐ ತನಿಖೆಯೇ ಆಗಬೇಕು. ಮಂಡ್ಯ ಮತ್ತು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ 15 ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತದ ಅವ್ಯವಹಾರ ನಡೆದಿದೆ. ಮಂಡ್ಯ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿದೆ. ಸಿಐಡಿ ತನಿಖೆ ಬೇಡ, ಎರಡೂ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು' ಎಂದು ಒತ್ತಾಯಿಸಿದರು.

ಬಳಿಕ ಉತ್ತರಿಸಿದ ಸಚಿವರು, `ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಠೇವಣಿ ಹಣವನ್ನು ವಂಚಿಸಿರುವ ಪ್ರಕರಣ ಕುರಿತು ರಾಮನಗರ ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಮಂಡ್ಯ ಪ್ರಕರಣ ಕುರಿತು ಸಿಬಿಐ ಅಧಿಕಾರಿಗಳು ಈಗಾಗಲೇ ಸರ್ಕಾರವನ್ನು ಸಂಪರ್ಕಿಸಿದ್ದಾರೆ. ಎರಡೂ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ನಿರ್ಧರಿಸಲಾಗಿದೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.