ADVERTISEMENT

ಡಿಜಿಪಿ ನೇಮಕಕ್ಕೆ ಹೈಕೋರ್ಟ್ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 19:30 IST
Last Updated 8 ಜೂನ್ 2011, 19:30 IST

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ-ಐಜಿಪಿ) ನೇಮಕಾತಿಗೆ ಸಂಬಂಧಿಸಿದಂತೆ ಕೇವಲ ಡಿಜಿಪಿ ದರ್ಜೆಯ ಅಧಿಕಾರಿಗಳ ಹೆಸರನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ನೀಡಿದ್ದ ನಿರ್ದೇಶನವನ್ನು ಹೈಕೋರ್ಟ್ ಬುಧವಾರ ಊರ್ಜಿತಗೊಳಿಸಿದೆ.

ಈ ಮೂಲಕ ಹುದ್ದೆಯ ನೇಮಕಕ್ಕೆ ಕೋರ್ಟ್ ಹಸಿರು ನಿಶಾನೆ ತೋರಿದೆ. 75 ಸಾವಿರದಿಂದ 80 ಸಾವಿರ ವೇತನ ಉಳ್ಳ ಅಧಿಕಾರಿಗಳ ಹೆಸರನ್ನು ಕಳುಹಿಸುವಂತೆ ಹಾಗೂ ಇದೇ ಜೂನ್ 1ರ ಒಳಗೆ ನೇಮಕಾತಿ ನಡೆಸುವಂತೆ ಕಳೆದ ಮೇ 21ರಂದು ಸರ್ಕಾರಕ್ಕೆ ಸಿಎಟಿ ಹೊರಡಿಸಿದ್ದ ಆದೇಶವನ್ನು  ಪ್ರಶ್ನಿಸಿ  ರೈಲ್ವೆ ವಿಭಾಗದ ಎಡಿಜಿಪಿ (ಬೆಂಗಳೂರು ನಗರದ ಹಿಂದಿನ ಪೊಲೀಸ್ ಕಮಿಷನರ್ ಶಂಕರ ಬಿದರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.
 

ಸುಪ್ರೀಂಕೋರ್ಟ್‌ಗೆ ಮೇಲ್ಮನವಿ
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಶಂಕರ ಬಿದರಿ `ಪ್ರಜಾವಾಣಿ~ಗೆ ತಿಳಿಸ್ದ್ದಿದಾರೆ. ಇದರಿಂದ ಡಿಜಿ-ಐಜಿಪಿ ಹುದ್ದೆ ಅಂತಿಮವಾಗಿ ಯಾರಿಗೆ ಒಲಿಯಲಿದೆ ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.


ಈ ಹಿಂದೆ ವಿಚಾರಣೆ ನಡೆಸಿದ್ದ ಕೋರ್ಟ್, ಹುದ್ದೆಯ ನೇಮಕಾತಿ ಪ್ರಕ್ರಿಯೆ ಮುಂದುವರಿಸುವುದಕ್ಕೆ ಅನುಮತಿ ನೀಡಿತ್ತು. ಆದರೆ ಈ ಹುದ್ದೆಯ ಅಂತಿಮ ಆಯ್ಕೆಯನ್ನು ಮಾತ್ರ ಕೋರ್ಟ್‌ನ ಮುಂದಿನ ಆದೇಶದವರೆಗೆ ಮಾಡದಂತೆ ಸೂಚಿಸಿತ್ತು. ಈಗ ಅರ್ಜಿಯೇ ವಜಾಗೊಂಡಿರುವ ಹಿನ್ನೆಲೆಯಲ್ಲಿ ಆಯ್ಕೆಯನ್ನು ಸರ್ಕಾರ ಮುಂದುವರಿಸಬಹುದಾಗಿದೆ.

ಕೋರ್ಟ್ ಹೇಳಿದ್ದೇನು: ಸುಮಾರು ಒಂದು ಗಂಟೆ ಕಾಲ ನ್ಯಾಯಮೂರ್ತಿಗಳು ನೀಡಿದ ತೀರ್ಪಿನ ಉಕ್ತಲೇಖನದಲ್ಲಿ (ಡಿಕ್ಟೇಷನ್) ಹೇಳಿರುವುದು ಇಷ್ಟು..

 `ಸಿಎಟಿ ಹೊರಡಿಸಿರುವ ಆದೇಶದಲ್ಲಿ ಯಾವುದೇ ತಪ್ಪು ನಮಗೆ ಕಾಣುತ್ತಿಲ್ಲ. ಐಪಿಎಸ್ ವೇತನ ನಿಯಮಕ್ಕೆ ಆದ ತಿದ್ದುಪಡಿಯಲ್ಲಿ  ಪೊಲೀಸ್ ಇಲಾಖೆಯ ಮುಖ್ಯಸ್ಥರ ಹುದ್ದೆಯನ್ನು ಮೆರಿಟ್ ಹಾಗೂ ಸೇವಾ ಹಿರಿತನದ ಆಧಾರದ ಮೇಲೆ ಮಾಡಬೇಕು ಎಂದು ತಿಳಿಸಲಾಗಿದೆ.

`ಅರ್ಜಿದಾರ ಬಿದರಿ ಅವರಿಗೆ 67-79ಸಾವಿರ ರೂಪಾಯಿಗಳ ವೇತನ ಇದ್ದು ಅವರ ಹುದ್ದೆ ಎಚ್‌ಎಜಿ ( ಉನ್ನತ ಆಡಳಿತಾತ್ಮಕ ದರ್ಜೆಯ) ವ್ಯಾಪ್ತಿಗೆ ಒಳಪಡುವುದಿಲ್ಲ. 1999ರಲ್ಲಿ ಸುಪ್ರೀಂಕೋರ್ಟ್ ರೂಪಿಸಿರುವ ನಿಯಮಾವಳಿಯನ್ನು ಗಣನೆಗೆ ತೆಗೆದುಕೊಂಡರೂ ಅರ್ಜಿದಾರರ ವಾದ ಸರಿಯಿಲ್ಲ ಎಂದು ತಿಳಿದು ಬರುತ್ತದೆ. 30ವರ್ಷಗಳಿಗಿಂತ ಹೆಚ್ಚಿಗೆ ಸೇವೆ ಸಲ್ಲಿಸಿರುವವರನ್ನು ಬಡ್ತಿಗೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಏನಾದರೂ ಹೇಳಿದ್ದರೆ ಆ ಮಾತು ಬೇರೆ. ಆದರೆ    ಕೋರ್ಟ್ ಆ ರೀತಿ ಹೇಳಲಿಲ್ಲ.

`ಇದೇ ರೀತಿಯ ಪ್ರಕರಣಗಳಲ್ಲಿ ಮದ್ರಾಸ್ ಹೈಕೋರ್ಟ್‌ನಿಂದ ಹೊರಟ ಆದೇಶದಂತೆ ಕೇಂದ್ರ ಲೋಕಸೇವಾ ಆಯೋಗ ನಡೆದುಕೊಳ್ಳಬೇಕು. ಕರ್ನಾಟಕದಲ್ಲಿ ವ್ಯತಿರಿಕ್ತವಾಗಿ ಅದು ನಡೆದುಕೊಳ್ಳಲು ಸಾಧ್ಯವಿಲ್ಲ.

ಹೈಕೋರ್ಟ್ ತೀರ್ಪಿನ ನಂತರ ಡಿಜಿಪಿ ದರ್ಜೆಯ ಅಧಿಕಾರಿಗಳಾದ ಡಾ. ಡಿ.ವಿ.ಗುರುಪ್ರಸಾದ್, ಡಾ. ಎಸ್. ಟಿ.ರಮೇಶ್, ಎನ್.ಅಚ್ಯುತರಾವ್, ಎಂ.ಕೆ. ಶ್ರೀವಾತ್ಸವ ಅವರಲ್ಲಿ ಒಬ್ಬರನ್ನು ಡಿಜಿ-ಐಜಿಪಿ ಹುದ್ದೆಗೆ ಸರ್ಕಾರ ನೇಮಕ ಮಾಡಬೇಕಿದೆ. ಈ ಪೈಕಿ ಗುರುಪ್ರಸಾದ್ ಹಾಗೂ ರಮೇಶ್ ಅವರು ಬರುವ ಜುಲೈ ಅಂತ್ಯದಲ್ಲಿ ನಿವೃತ್ತಿ ಹೊಂದಲಿದ್ದಾರೆ.

ಎಡಿಜಿಪಿ ಶ್ರೇಣಿಯ ಅಧಿಕಾರಿಗಳು: ಶಂಕರ ಬಿದರಿ, ಎ.ಆರ್.ಇನ್ಫೆಂಟ್, ಕುಚ್ಚಣ್ಣ ಶ್ರೀನಿವಾಸ್, ಸುಶಾಂತ ಮಹಾಪಾತ್ರ ಹಾಗೂ ರೂಪಕ್ ಕುಮಾರ್ ದತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT