ADVERTISEMENT

ಡಿನೋಟಿಫಿಕೇಷನ್‌ಗೆ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಬೆಂಗಳೂರು: ಭೂಸ್ವಾಧೀನ ಮತ್ತು ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳನ್ನು ಕಾನೂನಿಗೆ ವಿರುದ್ಧವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದನ್ನು ಮಹಾಲೇಖಪಾಲರ ವರದಿ ಬಹಿರಂಗಗೊಳಿಸಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.

ಕಂದಾಯ ಇಲಾಖೆ ಡಿಸೆಂಬರ್ 20ರಂದು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಅಧಿಕಾರ ಹೊಂದಿರುವವರು, ಅಂತಹ ಕ್ರಮದಿಂದ ತೊಂದರೆಗೆ ಒಳಗಾಗುವರ ಅಹವಾಲು ಆಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಜಮೀನುಗಳನ್ನು ಸ್ವಾಧೀನಕ್ಕೆ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರುವ ಎಲ್ಲ ಅರ್ಜಿಗಳೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುವ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿಗೆ ಸಲ್ಲಿಕೆಯಾಗಲೇಬೇಕು. ಯಾವುದೇ ಇಲಾಖೆಗೆ ಸಂಬಂಧಿಸಿದ ಅರ್ಜಿಗಳಾದರೂ, ಅವುಗಳನ್ನು ಈ ಸಮಿತಿಯೇ ಪರಿಶೀಲಿಸಿ, ಸೂಕ್ತ ಶಿಫಾರಸು ಮಾಡಬೇಕು. ಈ ಸಮಿತಿಯ ಶಿಫಾರಸು ಅಂತಿಮ. ಅದನ್ನು ಮೀರಿ ಸರ್ಕಾರ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಹೊಸ ಮಾರ್ಗಸೂಚಿ ಹೇಳಿದೆ.

ಇಂತಹ ಅರ್ಜಿಗಳ ಪರಿಶೀಲನೆಗಾಗಿ ಉನ್ನತಮಟ್ಟದ ಸಮಿತಿ ಇದ್ದರೂ, ಸ್ಪಷ್ಟ ಮಾರ್ಗಸೂಚಿಯ ಕೊರತೆ ಇತ್ತು. ಸಮಿತಿಯ ಶಿಫಾರಸುಗಳ ವಿರುದ್ಧವಾಗಿ ಮುಖ್ಯಮಂತ್ರಿಗಳು ಆದೇಶ ಹೊರಡಿಸುತ್ತಿದ್ದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ 610.16 ಎಕರೆ ಜಮೀನನ್ನು ಉನ್ನತಮಟ್ಟದ ಸಮಿತಿಯ ಗಮನಕ್ಕೆ ತರದೇ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಲೋಪವನ್ನು ಮಹಾಲೇಖಪಾಲರ ವರದಿ ಬಹಿರಂಗಗೊಳಿಸಿತ್ತು.

`ಈ ಹಿಂದೆ ಇದೇ ಉದ್ದೇಶಕ್ಕಾಗಿ ನೇಮಕ ಮಾಡಿದ್ದ ಎಲ್ಲ ಸಮಿತಿಗಳೂ ಮುಂದೆ ಅಸ್ತಿತ್ವ ಕಳೆದುಕೊಳ್ಳುತ್ತವೆ' ಎಂದು ಡಿ.20ರ ಮಾರ್ಗಸೂಚಿ ತಿಳಿಸಿದೆ.
ನಿರ್ಬಂಧ: ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಂಡ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದನ್ನು ಈ ಮಾರ್ಗಸೂಚಿಯಲ್ಲಿ ನಿರ್ಬಂಧಿಸಲಾಗಿದೆ. ಭೂಸ್ವಾಧೀನ ಕಾಯ್ದೆಗಳಲ್ಲೇ ಇಂತಹ ಕಲಂ ಇದೆ. ಆದರೆ, ಇತ್ತೀಚೆಗೆ ಆಡಳಿತ ನಡೆಸಿದ ಬಹುತೇಕರು ಅದನ್ನು ಉಲ್ಲಂಘಿಸುತ್ತಲೇ ಇದ್ದರು. 2008-2011ರ ಅವಧಿಯಲ್ಲಿ ಬಿಡಿಎ ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಂಡಿದ್ದ 212.39 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿತ್ತು ಎಂಬ ಅಂಶ ಸಿಎಜಿ ವರದಿಯಲ್ಲಿದೆ.

ಜಮೀನನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳದ ಪ್ರಕರಣಗಳಲ್ಲಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಕುರಿತು ಪರಿಶೀಲಿಸಲು ಅವಕಾಶವಿದೆ. ಆದರೆ, ಉದ್ದೇಶಿತ ಸ್ವಾಧೀನ ಪ್ರಕ್ರಿಯೆಯ ಲಾಭ ಪಡೆಯಲಿರುವ ಸಂಸ್ಥೆ, ಕಂಪೆನಿ ಅಥವಾ ಗೃಹ ನಿರ್ಮಾಣ ಸಹಕಾರ ಸಂಘಗಳ ಅಹವಾಲು ಆಲಿಸಿದ ಬಳಿಕವಷ್ಟೇ ಪ್ರಕ್ರಿಯೆ ಆರಂಭಿಸಬಹುದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ವಿವರ ನೀಡಲಾಗಿದೆ. ಅಂತಿಮವಾಗಿ ಜಮೀನನ್ನು ಸ್ವಾಧೀನಕ್ಕೆ ಪಡೆಯುವ ಸಂದರ್ಭದಲ್ಲಿ ಸ್ಥಳ ಮಹಜರು ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯ ವ್ಯಾಪ್ತಿಯಲ್ಲಿರುವ ಜಮೀನಿನಲ್ಲಿ ಬೆಳೆ ಇದ್ದರೆ ಅಥವಾ ಕಟ್ಟಡಗಳನ್ನು ನಿರ್ಮಿಸಿದ್ದರೆ ಅಂತಹವರಿಗೆ ತಕ್ಷಣವೇ ನೋಟಿಸ್ ಜಾರಿ ಮಾಡುವಂತೆ ಸೂಚಿಸಲಾಗಿದೆ. ಸ್ವಾಧೀನ ಪ್ರಕ್ರಿಯೆಯ ಜಮೀನಿನಲ್ಲಿ ಭವಿಷ್ಯದಲ್ಲಿ ಬದಲಾವಣೆ ಮಾಡುವುದನ್ನು ತಡೆಯಲು ಅಂತಹ ಆಸ್ತಿಗಳ ಛಾಯಾಚಿತ್ರ, ವಿಡಿಯೊ ಅಥವಾ ವೈಮಾನಿಕ ಚಿತ್ರ ತೆಗೆದು ಸಂಗ್ರಹಿಸಿ ಇಡಬೇಕು ಎಂದು  ಸಲಹೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.