ADVERTISEMENT

ಡಿವಿಎಸ್ ನಡೆ: ಬಿಎಸ್‌ವೈ, ಶೆಟ್ಟರ್‌ಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ವಿರುದ್ಧ ಪರೋಕ್ಷ ಸೆಡ್ಡು ಹೊಡೆದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 25 ಅಥವಾ 26ರಂದು ತಮ್ಮ ಬೆಂಬಲಿಗ ಶಾಸಕರ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

`ಮುಖ್ಯಮಂತ್ರಿಯವರ ಕಾರ್ಯವೈಖರಿ ಇತ್ತೀಚೆಗೆ ಸರಿ ಕಾಣುತ್ತಿಲ್ಲ. ಜೆಡಿಎಸ್ ಮುಖಂಡರು ಹೇಳಿದ ಕೆಲಸಗಳನ್ನೇ ಹೆಚ್ಚು ಮಾಡುತ್ತಿದ್ದು, ಅದನ್ನು ಸಹಿಸಿಕೊಂಡು ಕೂರಲು ಸಾಧ್ಯ ಇಲ್ಲ~ ಎಂದು ಯಡಿಯೂರಪ್ಪ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಉಪ ಲೋಕಾಯುಕ್ತರಾಗಿ ಚಂದ್ರಶೇಖರಯ್ಯ ಅವರನ್ನು ನೇಮಿಸಿದ್ದರ ಹಿಂದೆ ಜೆಡಿಎಸ್ ಮುಖಂಡರ ಸಲಹೆ ಕೆಲಸ ಮಾಡಿದೆ. ಈ ನೇಮಕದ ಬಗ್ಗೆ ಪಕ್ಷದ `ಕೋರ್ ಕಮಿಟಿ~ ಸಭೆಯಲ್ಲೂ ಚರ್ಚಿಸಿಲ್ಲ.  ತಮ್ಮ ಗಮನಕ್ಕೂ ತಂದಿಲ್ಲ ಎಂಬ ಅಸಮಾಧಾನ ಯಡಿಯೂರಪ್ಪ ಅವರಲ್ಲಿ ಇದೆ. ಅಲ್ಲದೇ ತಮ್ಮನ್ನು ಮೂಲೆಗುಂಪು ಮಾಡುವ ಪ್ರಯತ್ನ ಪಕ್ಷದಲ್ಲಿ ವೇಗ ಪಡೆದುಕೊಂಡಿದೆ. ಅದಕ್ಕೆ ತಡೆ ಒಡ್ಡಲು  ಶಾಸಕರ ಸಭೆ ಕರೆದಿದ್ದಾರೆ ಎನ್ನಲಾಗಿದೆ.
ಇದೇ 23ರಂದು ಶಾಸಕರ ಸಭೆ ನಡೆಸಲು ಮೊದಲು ತೀರ್ಮಾನಿಸಲಾಗಿತ್ತು. ಆದರೆ, 23ರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನಗರಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಸಭೆಯನ್ನು ಮುಂದೂಡಲಾಗಿದೆ. ಇದೇ 27ರಂದು ಯಡಿಯೂರಪ್ಪ ಅವರ ಹುಟ್ಟುಹಬ್ಬ ಇದ್ದು, ಅದಕ್ಕೂ ಮುಂಚೆಯೇ ಶಾಸಕರ ಸಭೆ ಕರೆದು, ಮುಂದಿನ ನಡೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮನ್ನು ಬಿಟ್ಟು ಗೋಕಾಕದಲ್ಲಿ ಪಂಚಮಸಾಲಿ ಲಿಂಗಾಯತರ ಸಮಾವೇಶ ನಡೆಸಿರುವುದು ಕೂಡ ಅವರ ಸಿಟ್ಟು ಹೆಚ್ಚಾಗಲು ಕಾರಣವಾಗಿದೆ.

ಶೆಟ್ಟರ್‌ಗೆ ಅಸಮಾಧಾನ: ಪಕ್ಷದ ಪ್ರಮುಖರ ಸಭೆ ನಡೆಸದೆ ಸಂಪುಟ ವಿಸ್ತರಣೆ, ಖಾತೆ ಮರು ಹಂಚಿಕೆ ಬಗ್ಗೆ ಮುಖ್ಯಮಂತ್ರಿಯವರು ಹೇಳಿಕೆ ನೀಡುತ್ತಿದ್ದಾರೆ ಎಂದು ಹಿರಿಯ ಸಚಿವ ಜಗದೀಶ ಶೆಟ್ಟರ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೋರ್ ಕಮಿಟಿ ಇರುವುದೇ ಇಂತಹ ವಿಚಾರಗಳನ್ನು ಚರ್ಚಿಸುವುದಕ್ಕೆ. ಆದರೆ, ಅಲ್ಲಿ ಯಾವುದೇ ಚರ್ಚೆ ಆಗುತ್ತಿಲ್ಲ. ಕೆಲವರಷ್ಟೇ ಸೇರಿಕೊಂಡು ಎಲ್ಲವನ್ನೂ ನಿರ್ಧರಿಸುತ್ತಿದ್ದಾರೆ ಎಂಬ ಅಸಮಾಧಾನಅವರಲ್ಲಿದೆ. ಅಲ್ಲದೆ ತಮ್ಮನ್ನು ಭೇಟಿ ಮಾಡಿದ ಶಾಸಕರ ಜತೆಗೂ ಈ ಕುರಿತು ಅವರು ಹೇಳಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.